/newsfirstlive-kannada/media/media_files/2025/10/13/raju_talikote-2025-10-13-20-29-44.jpg)
ಧಾರಾವಾಡ ರಂಗಾಯಣದ ನಿರ್ದೇಶಕರಾಗಿದ್ದ ಹಾಸ್ಯನಟ, ರಂಗಭೂಮಿ ಕಲಾವಿದ, ರಂಗಕರ್ಮಿ ರಾಜು ತಾಳಿಕೋಟಿ (62) ಅವರು ಹೃದಯಾಘಾತದಿಂದ ಉಡುಪಿಯ ಮಣಿಪಾಲ್ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬದುಕಿನ ಉದ್ದಕ್ಕೂ ನಟನೆ, ನಾಟಕ ಎಂದು ಜೀವನ ಸಾಗಿಸಿದ್ದ ರಾಜು ತಾಳಿಕೋಟಿ ಯಾರು, ಎಲ್ಲಿ ಹುಟ್ಟಿದರು, ಅವರ ವಿದ್ಯಾಭ್ಯಾಸ ಏನು, ಅವರ ನಿಜವಾದ ಹೆಸರು ಏನು ಎಂಬುವುದರ ವಿವರವಾದ ಮಾಹಿತಿ ಇಲ್ಲಿದೆ.
ರಾಜು ತಾಳಿಕೋಟಿ ಅವರ ನಿಜವಾದ ಹೆಸರು ರಾಜೇಸಾಬ್ ಮುಕ್ತಂ ಸಾಬ್ ಯಂಕಂಚಿ ಉರ್ಫ್​ ಎಂಬುದು. ಈಗಿನ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿಯಲ್ಲಿ ಮುಕ್ತಂ ಸಾಬ್ ಹಾಗೂ ಮೆಹಬೂಬ್ ಜಾನ್ ಅವರ ಮಗನಾಗಿ 1965 ಡಿಸೆಂಬರ್​ 18 ರಂದು ಜನಿಸಿದರು. ರಾಜು ತಾಳಿಕೋಟಿ ಅವರಿಗೆ ಇಬ್ಬರು ಅಕ್ಕಂದಿರು ಹಾಗೂ ಒಬ್ಬ ಅಣ್ಣ ಇದ್ದಾರೆ. ಮುಂದಿನ ಬದುಕಲ್ಲಿ ನಾಟಕದಲ್ಲೇ ಇದ್ದು ರಂಗ ಕಲಾವಿದೆ ಪ್ರೇಮಾ ತಾಳಿಕೋಟಿ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣುಮಕ್ಕಳು ಇದ್ದಾರೆ.
ಇವರು ಯಾವ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡದಿದ್ದರೂ ಇಡೀ ರಾಜ್ಯಕ್ಕೆ ಹೆಸರುವಾಸಿ. ಓದಿದ್ದು ಮಾತ್ರ 4ನೇ ತರಗತಿ ಆದರೂ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಗೌರವ ಪಡೆದರು. ಇವರ ಮಾತಿನ ಶೈಲಿ, ಡೈಲಾಗ್, ನಟನೆಗೆ ಇಡೀ ನಾಟಕವೇ ರಂಗು ಪಡೆಯುತ್ತಿತ್ತು. ಇವರ ಧ್ವನಿಯೇ ಇವರ ದೊಡ್ಡ ಶಕ್ತಿ ಆಗಿತ್ತು. ರಾಜು ತಾಳಿಜೋಟಿ ನಾಟಕ ಮಾಡಲು ಬರುತ್ತಾರೆ ಎಂದರೆ ಈಗಲೂ ನಾಟಕ ಮಂದಿರ ಹೌಸ್​ಫುಲ್ ಆಗುತ್ತಿದ್ದವು. ಇವರ ನಾಟಕ ಎಂದರೆ ಉತ್ತರ ಕರ್ನಾಟಕದ ಜನರಿಗೆ ಎಲ್ಲಿಲ್ಲದ ಪ್ರೀತಿ.
ರಾಜು ತಾಳಿಕೋಟಿ ನಾಟಕದಿಂದಲೇ ಉತ್ತರ ಕರ್ನಾಟಕದಲ್ಲಿ ಖ್ಯಾತಿ ಪಡೆದರೂ ನಂತರದ ದಿನಗಳಲ್ಲಿ ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಅಭಿನಯಿಸಿ ಮತ್ತಷ್ಟು ಪ್ರಖ್ಯಾತಿ ಪಡೆದರು. ಇವರ ರಂಗಭೂಮಿ ಕುರಿತು ಹೇಳುವುದಾದರೆ..
ರಾಜು ತಾಳಿಕೋಟಿ ರಂಗಭೂಮಿ ಬದುಕು
7ನೇ ವಯಸ್ಸಿನಲ್ಲೇ ತಂದೆಯವರ ಮಾಲೀಕತ್ವದ ಶ್ರೀ ಖಾಸ್ಥತೇಶ್ವರ ನಾಟ್ಯ ಸಂಘ ತಾಳಿಕೋಟಿಯಲ್ಲಿ ಸತ್ಯ ಹರೀಶ್ಚಂದ್ರ ನಾಟಕದಲ್ಲಿ ಲೋಹಿತಾಶ್ವ, ರೇಣುಕಾ ಎಲ್ಲಮ್ಮ ನಾಟಕದಲ್ಲಿ ಬಾಲ ಪರಶುರಾಮ, ಬಾಲಚಂದ್ರ ನಾಟಕದಲ್ಲಿ ಬಾಲಚಂದ್ರನ ಪಾತ್ರಗಳಲ್ಲಿ ಅಭಿನಯಿಸಿದ್ದರು. ತಂದೆ ಪಾರ್ಶ್ವವಾಯು ಪೀಡಿತರಾದರೆ, ತಾಯಿ ಕ್ಯಾನ್ಸರ್​ ಕಾಯಿಲೆಗೆ ತುತ್ತಾದಾಗ ಬದುಕಿಗಾಗಿ ಹೋಟೆಲ್ ಮಾಣಿಯಾಗಿ, ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ್ದರು.
1977-78ರಲ್ಲಿ ಜೀವಿ ಕೃಷ್ಣರ ನಾಟಕ ಕಂಪನಿ, ಶ್ರೀಗುರುಪ್ರಸಾದ ನಾಟ್ಯ ಸಂಘ ಕಡಪಟ್ಟಿ, ಪಂಚಾಕ್ಷರಿ ವಿಜಯ ನಾಟ್ಯ ಸಂಘ, ಚಿತ್ತರಗಿಯಲ್ಲಿ ನೇಪಥ್ಯದ ಕಲಾವಿದನಾಗಿ (ಪ್ರಚಾರ, ಪ್ರಸಾಧನ, ಗೇಟ ಕೀಪರ) ಸೇವೆ. ಈ ಮಧ್ಯೆ ಕಂಪನಿಯ ಹಿರಿಯ ನಟರೊಬ್ಬರು ಕೈ ಕೊಟ್ಟಾಗ ಅನಿರೀಕ್ಷಿತವಾಗಿ ತಾಳಿತಕರಾರು ನಾಟಕದಲ್ಲಿ ಸುಮಿತ್ರ (ಕಿವುಡ) ಪಾತ್ರದಲ್ಲಿ ಅಭಿನಯಿಸಿ ಜನಪ್ರೀತಿಗೆ ಪಾತ್ರರಾದರು. ಅಂದಿನಿಂದ ಪಾತ್ರಗಳು ಯಶಸ್ಸು ತಂದು ಕೊಟ್ಟವು. ಸಾಳುಂಕಿಯವರ ಕಣ್ಣಿದ್ದರೂ ಬುದ್ಧಿ ಬೇಕು, ಹೂವಿನ ಅಂಗಡಿ, ದೇವರಿಗೆ ನೆನಪಿಲ್ಲ, ಭಾಗ್ಯಬಂತು ಬುದ್ಧಿ ಹೋಯಿತು. ಕಾಲುಕೆದರಿದ ಹೆಣ್ಣು ಸೇರಿದಂತೆ ಹಲವು ನಾಟಕಗಳಲ್ಲಿ ಅಮೋಗವಾಗಿ ಅಭಿನಯಿಸಿದ್ದರು.
1984ರಲ್ಲಿ ಶ್ರೀಶರೀಫ ಶಿವಯೋಗಿ ವಿಜಯ ನಾಟ್ಯ ಸಂಘ, ಯಂಕಂಚಿಯನ್ನು 03 ವರ್ಷಗಳ ಕಾಲ ನಡೆಸಿದರು. ನಂತರ ಶ್ರೀ ಹುಚ್ಚೆಶ್ವರ ನಾಟ್ಯ ಸಂಘ, ಕಮತಗಿಯಲ್ಲಿ ಪತ್ನಿ (ಪ್ರೇಮಾ ತಾಳಿಕೋಟೆ ಕಲಾವಿದೆ) ಜೊತೆಗೂಡಿ 1996ರವರೆಗೆ ರಂಗ ಸೇವೆ. ಈ ಕಂಪನಿಯಲ್ಲಿ ಹಸಿರು ಬಳೆ, ಸೈನಿಕ ಸಹೋದರಿ, ಶ್ರೀಗರಗದ ಮಡಿವಾಳೇಶ್ವರ ಮಹಾತ್ಮ. ಚಿತ್ರನಟ ಸುಧೀರ್​ ಜೊತೆ ಸಿಂಧೂರ ಲಕ್ಷಣ, ಹಿರಿಯ ಕಲಾವಿದೆ ಉಮಾಶ್ರೀಯವರ ಜೊತೆ ಬಸ್​ ಕಂಡಕ್ಟರ್, ಸೊಸೆ ಹಾಕಿದ ಸವಾಲು ಸೇರಿದಂತೆ ಹಲವಾರು ನಾಟಕಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.
1998ರಲ್ಲಿ ಮತ್ತೆ ಶ್ರೀಖಾಸ್ಸತೇಶ್ವರ ನಾಟ್ಯ ಸಂಘ ಪುನರ್‌ಸ್ಥಾಪಿಸಿ ಶ್ರೀಗುರು ಖಾಲ್ಗತೇಶ್ವರ ಮಹಾತ್ಮ, ಮುತ್ತೈದೆ ನೀ ಮತ್ತೊಮ್ಮೆ ಬಾ, ವರಪುತ್ರ, ಮನೆಗೆ ಬಂದ ಮಹಾಲಕ್ಷ್ಮೀ, ಕುಡುಗೋಲು ನುಂಗಬ್ಯಾಡ್ರಿ, ಯಾರು ನಂಬುವದು ಯಾರ ಬಿಡೂವುದು, ಹ್ಯಾಂಗರ ಬರಿ ನಕ್ಕೋತ ಹೋಗ್ರಿ ಸೇರಿದಂತೆ ಹಲವಾರು ನಾಟಕಗಳು ಕರ್ನಾಟಕದಾದ್ಯಂತ ಸಾವಿರಾರು ಪ್ರದರ್ಶನ ಕಂಡಿವೆ. ಈಗಲೂ ಎಲ್ಲಿಯಾದರೂ ಇವರ ಧ್ವನಿ ಕೇಳುತ್ತಿದ್ದರೇ ರಾಜು ತಾಳಿಕೋಟಿ ನಾಟಕ ಎಂದು ಗುರುತಿಸುತ್ತಾರೆ.
ಧ್ವನಿಮುದ್ರಿಕೆಗಳು- ಕಲಿಯುಗದ ಕುಡುಕ- ಈ ನಾಟಕವು 40 ಸಾವಿರಕ್ಕೂ ಹೆಚ್ಚು ಪ್ರಯೋಗಗಳು ಕಂಡು ಅಪಾರ ಜನಮನ್ನಣೆ ಗಳಿಸಿದೆ. ಕುಡುಕರ ಸಾಮ್ರಾಜ್ಯ, ಲತ್ತುಗುಣಿ ಲಕ್ಕವ್ವ, ಅಸಲಿ ಕುಡುಕ.
ಇದನ್ನೂ ಓದಿ:IND vs WI; ಮ್ಯಾಚ್ ನೋಡುವಾಗ ಯುವಕನ ಕೆನ್ನೆ..ಕೆನ್ನೆಗೆ ಬಾರಿಸಿದ ಪ್ರಿಯತಮೆ.. ಅಸಲಿಗೆ ಆಗಿದ್ದೇನು?
ಕನ್ನಡ ಚಲನಚಿತ್ರರಂಗ- ಹೆಂಡ್ತಿ ಅಂದರೆ ಹೆಂಡತಿ, ಪಂಜಾಬಿ ಹೌಸ್, ಮನಸಾರೆ, ಪಂಚರಂಗಿ, ಪರಮಾತ್ಮ, ಲಿಫ್ಟ್ ಕೊಡ್ಲಾ, ಜಾಕಿ, ಸುಗ್ರೀವ, ಕಳ್ಳ ಮಳ್ಳ ಸುಳ್ಯ, ಭೀಮಾತೀರ ಸೇರಿದಂತೆ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಿರುದುಗಳು- ಹಾಸ್ಯ ರತ್ನಾಕರ, ಹಾಸ್ಯ ಸಾಮ್ರಾಟ, ಕಾಮಿಡಿ ಕಿಂಗ್, ಕ್ಯಾಸೆಟ್ ಕಿಂಗ್, ಕನ್ನಡದ ಸೆಂದಿಲ್
ಪ್ರಶಸ್ತಿಗಳು- 2010ರಲ್ಲಿ ಸುವರ್ಣ ವಾಹಿನಿಯ ಬೆಸ್ಟ್​ ಕಾಮಿಡಿ ನಟ, 2011ರಲ್ಲಿ ಫೀಲ್ಮಫೇರ್ ಅವಾರ್ಡ್​, 2013ರಲ್ಲಿ ಬೆಸ್ಟ್ ಕಾಮಿಡಿಯನ್, 2015ರಲ್ಲಿ ರಾಜ್ಯೋತ್ಸವ ಚಿತ್ರ ಸಂಸ್ಥೆಯಲ್ಲಿ ಪಾಪಿಲರ್ ಅವಾರ್ಡ್ ಹಾಗೂ 2017ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ