ಸಂವಿಧಾನದ ಕುತ್ತಿಗೆಗೆ ಕೈಹಾಕಲಾಗ್ತಿದೆ.. ಪತ್ರಿಕಾ ವೃತ್ತಿಗೆ ಭಾರೀ ಆತಂಕ; ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ

ಸಂವಿಧಾನ ಪತ್ರಕರ್ತರಿಗೆ ಪ್ರತ್ಯೇಕವಾದ ಹಕ್ಕುಗಳನ್ನು ನೀಡಿಲ್ಲ. ಅದರಲ್ಲಿರುವ ವಾಕ್ ಸ್ವಾತಂತ್ರ್ಯವೇ ನಮಗೆ ಪತ್ರಿಕಾ ಸ್ವಾತಂತ್ರ್ಯ ಆಗಿದೆ. ಈಗ ಇದಕ್ಕೆ ಕುತ್ತು ಬಂದಿದೆ ಎಂದು ಹೇಳಿದ್ದಾರೆ.

author-image
Bhimappa
KV_BRABHAKAR3
Advertisment

ಕೊಪ್ಪಳ: 76 ವರ್ಷದಲ್ಲಿ ಸಂವಿಧಾನಕ್ಕೆ 104 ಬಾರಿ ತಿದ್ದುಪಡಿ ಮಾಡಲಾಗಿ. ಆದರೆ ಈಗ ಸಂವಿಧಾನದ ಕುತ್ತಿಗೆಗೆ ಕೈ ಹಾಕುವ ಕೆಲಸ ಆರಂಭವಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ ಪ್ರಭಾಕರ್ ಅವರು ಹೇಳಿದ್ದಾರೆ. 

ಕೊಪ್ಪಳ ಜಿಲ್ಲಾ ಕಾರ್ಯನಿರತ ಸಂಘದ ವತಿಯಿಂದ ಆಯೋಜನೆ ಮಾಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಕೆ.ವಿ ಪ್ರಭಾಕರ್ ಅವರು ಮಾತನಾಡಿದರು. ಸಂವಿಧಾನ ಪತ್ರಕರ್ತರಿಗೆ ಪ್ರತ್ಯೇಕವಾದ ಹಕ್ಕುಗಳನ್ನು ನೀಡಿಲ್ಲ. ಅದರಲ್ಲಿರುವ ವಾಕ್ ಸ್ವಾತಂತ್ರ್ಯವೇ ನಮಗೆ ಪತ್ರಿಕಾ ಸ್ವಾತಂತ್ರ್ಯ ಆಗಿದೆ. ಈಗ ಇದಕ್ಕೆ ಕುತ್ತು ಬಂದಿದೆ ಎಂದು ಹೇಳಿದ್ದಾರೆ. 

KV_BRABHAKAR4

ಸ್ವಾತಂತ್ರ್ಯ ಬಳಿಕ 76 ವರ್ಷದಲ್ಲಿ ಸಂವಿಧಾನಕ್ಕೆ 104 ಬಾರಿ ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿ ಮಾಡುವಾಗ ಸಂವಿಧಾನದ ಮೂಲ ಆಶಯ ಎತ್ತಿ ಹಿಡಿದು ತಿದ್ದುಪಡಿ ಮಾಡಲಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆ ನೋಡಿದರೆ, ಕಲ್ಯಾಣ ರಾಷ್ಟ್ರದ ಪರಿಕಲ್ಪನೆ, ಒಕ್ಕೂಟ ವ್ಯವಸ್ಥೆ, ಸಂವಿಧಾನದ ಪರಮಾಧಿಕಾರ, ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳು, ಧರ್ಮ‌ ನಿರಪೇಕ್ಷತೆ, ಸಂಸದೀಯ ಪ್ರಜಾಪ್ರಭುತ್ವ, ನಿಯಮಿತ ಕಾಲಕ್ಕೆ ಚುನಾವಣೆ, ಜಾತ್ಯತೀತೆ ಹಾಗೂ ವಾಕ್ ಸ್ವಾತಂತ್ರ್ಯ ನಿರಂತರ ದಾಳಿಗೆ ಒಳಗಾಗುತ್ತಿವೆ ಎಂದು ಹೇಳಿದ್ದಾರೆ.

ಇಂತಹ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕಾದ ಪತ್ರಿಕಾ ವೃತ್ತಿಗೆ ಮೈಮರೆವು ಬಂದಿದೆ. ಇದಕ್ಕೆ ಕಾರಣ ಜೀವಂತ ಪತ್ರಿಕಾ ವೃತ್ತಿಯನ್ನು ಕಾರ್ಪೋರೇಟ್ ಶವಪೆಟ್ಟಿಗೆಯೊಳಗಿಟ್ಟು ಒಂದೊಂದೇ ಮೊಳೆ ಹೊಡೆಯಲಾಗುತ್ತಿದೆ. ಜನರ ಗಮನವನ್ನು ಅವರ ನಿತ್ಯ ಸಮಸ್ಯೆ ಮತ್ತು ಸವಾಲುಗಳಿಂದ ಬೇರೆಡೆ ಸೆಳೆಯಲು ಕಾರ್ಪೋರೇಟ್ ಶಕ್ತಿಗಳು ಪತ್ರಿಕೋದ್ಯಮವನ್ನು ಬಳಸಿಕೊಳ್ಳುತ್ತಿವೆ. ಪತ್ರಕರ್ತರ ಕೈಯಲ್ಲೇ ಪತ್ರಿಕಾ ವೃತ್ತಿಪರತೆಯ ಶವ ಪೆಟ್ಟಿಗೆಗೆ ಮೊಳೆಯೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಟ್ಯಾಕ್ಸ್​, ಮಕ್ಕಳ ಬಗ್ಗೆ ಈಗಿನವರಿಗೆ ಅರಿವಾಗುತ್ತಿಲ್ಲ

ಕಾರ್ಪೋರೇಟ್ ಜಗತ್ತಿನ‌ ಸಂಗತಿಗಳ ಬಗ್ಗೆ ಹೆಚ್ಚೆಚ್ಚು ನೋಡುವ, ಓದುವ ಜನ ಸಾಮಾನ್ಯರಿಗೆ ತಮ್ಮ ಮೇಲೆ ಬೀಳುತ್ತಿರುವ ತೆರಿಗೆ ಹೊರೆ, ತಮ್ಮ ಮಕ್ಕಳ ಭವಿಷ್ಯ ಪ್ರಪಾತಕ್ಕೆ ಬೀಳುತ್ತಿರುವ ಅಪಾಯ ಗಮನಕ್ಕೇ ಬರುತ್ತಿಲ್ಲ. ರಾಹುಲ್ ಗಾಂಧಿ ಅವರು ಕೈಯಲ್ಲಿ ಸಂವಿಧಾನದ ಪುಸ್ತಕ ಎತ್ತಿ ಹಿಡಿದ ಚಿತ್ರವನ್ನು ಇತ್ತೀಚಿಗೆ ಎಲ್ಲರೂ ಗಮನಿಸಿರುತ್ತೇವೆ. ರಾಹುಲ್ ಗಾಂಧಿಯವರು ಸಂವಿಧಾನವನ್ನು ಎತ್ತಿ ಹಿಡಿದು ಪತ್ರಕರ್ತರ ಸಮೂಹಕ್ಕೆ  ಕೇಳುತ್ತಿರುವುದು ಒಂದೇ ಪ್ರಶ್ನೆ. ನಮ್ಮ ನಿಮ್ಮ ಮಕ್ಕಳಿಗೆ ಭವಿಷ್ಯದ ಭಾರತ ಹೇಗಿರಬೇಕು?. ರಾಹುಲ್ ಗಾಂಧಿಯವರ ಪ್ರಶ್ನೆಯನ್ನು ಪತ್ರಿಕೋದ್ಯಮ ಗಂಭೀರವಾಗಿ ತೆಗೆದುಕೊಂಡು ವಿಶ್ಲೇಷಣೆ ಮಾಡಬೇಕಿದೆ ಎಂದಿದ್ದಾರೆ. 

ಇದನ್ನೂ ಓದಿ: ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ 160 ಸೀಟು ಗೆಲ್ಲಿಸಿಕೊಡುವ ಗ್ಯಾರಂಟಿ ಆಫರ್‌ ಬಂದಿತ್ತು ಎಂದ ಶರದ್ ಪವಾರ್‌

KV_BRABHAKAR1

ಸಂವಿಧಾನವನ್ನು ಬದಲಾಯಿಸದೇ ಸಂವಿಧಾನದ ಮೂಲ ಆಶಯವನ್ನು, ಮೂಲಭೂತ ತತ್ವಗಳನ್ನು ಕೊಲ್ಲುವ ಷಡ್ಯಂತ್ರದ ವಿರುದ್ಧ ಪತ್ರಿಕೋದ್ಯಮಕ್ಕೆ ಜಾಣ ಮೈಮರೆವು ಬಂದಂತಿದೆ. ಇದರಿಂದ ಪತ್ರಿಕಾ ವೃತ್ತಿಯೇ ಬಿದ್ದು ಹೋಗುತ್ತದೆ. ಪ್ರಸಾರ ಸಂಖ್ಯೆ, ಟಿಆರ್​ಪಿ ಬೀಳುವುದಕ್ಕಿಂತ ಪತ್ರಿಕೋದ್ಯಮದ ಬಾಯಿ ಬಿದ್ದು ಹೋಗುವುದು ಅತ್ಯಂತ ಅಪಾಯಕಾರಿ. ಸ್ಥಳೀಯ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಪತ್ರಕರ್ತ ಸ್ನೇಹಿಯಾಗಿದ್ದು ಶಾಸಕರಾಗಿದ್ದರೂ ಅತ್ಯಂತ ಸರಳತನ ಪಾಲಿಸುವ ಇವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ ಎಂದು ಹೇಳಿದ್ದಾರೆ. 

ಸುಳ್ಳು ಸುದ್ದಿಗಳಿಂದ ಸಮಾಜದ ಮೇಲೆ ಅನಾಹುತ

ಸತ್ಯದಿಂದ ರೋಚಕತೆಗೆ ಪತ್ರಿಕೋದ್ಯಮ ಮರಳಿರುವುದು ಆರೋಗ್ಯಕರ ಅಲ್ಲ. ರೋಚಕತೆ ಸುದ್ದಿಯ ವಿಶ್ವಾಸಾರ್ಹತೆಯನ್ನು ಕಳೆಯುತ್ತಿರುವುದಲ್ಲದೆ ಸಮಾಜದ ನೆಮ್ಮದಿ ಕೆಡಿಸುತ್ತಿದೆ. ಈ ಕಾರಣಕ್ಕೇ ಸರ್ಕಾರ ಸುಳ್ಳು ಸುದ್ದಿಗಳು ಮತ್ತು ಇದರಿಂದ ಸಮಾಜದ ಮೇಲೆ ಆಗುವ ಅನಾಹುತಕಾರಿ ಪರಿಣಾಮಗಳನ್ನು ತಡೆಯಲು ಹೊಸ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಗ್ರಾಮೀಣ ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿದೆ. ಬಸ್ ಪಾಸ್ ವಿತರಣೆಗೆ, ಆರೋಗ್ಯ ಸಂಜೀವಿನಿಗೆ, ಮಾಸಾಶನ ಪಡೆಯಲು ಇರುವ ನಿಬಂಧನೆಗಳನ್ನು ಸಡಿಲಗೊಳಿಸಿ, ಸರಳಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಇನ್ನು ಕಾರ್ಯಕ್ರಮದಲ್ಲಿ ಬಾಲಭವನ‌ ಅಧ್ಯಕ್ಷ ಬಿ.ಆರ್ ನಾಯ್ಡು ಸೇರಿದಂತೆ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ, ತಾಲೂಕು ಪದಾಧಿಕಾರಿಗಳು ಭಾಗಿಯಾಗಿದ್ದರು. 

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH KV Prabhakar
Advertisment