/newsfirstlive-kannada/media/media_files/2025/09/08/mnd_ganesh-1-2025-09-08-09-21-39.jpg)
ಸಕ್ಕರೆ ನಾಡು ಮಂಡ್ಯದ ಮದ್ದೂರಿನಲ್ಲಿ ಗಣೇಶ ಆಚರಣೆ ವೇಳೆ ಅಹಿತಕರ ಘಟನೆ ನಡೆದಿದೆ. ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಮದ್ದೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ.
ಇದು ಶಾಂತಿಪ್ರಿಯನಾಗಿರೋ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಉದ್ವಿಗ್ನ ಪರಿಸ್ಥಿತಿ ಸಂಭವಿಸಿದೆ. ಶಾಂತವಾಗಿದ್ದ ಮದ್ದೂರಲ್ಲಿ ಕಿಡಿಗೇಡಿಗಳು ದ್ವೇಷದ ಕಿಡಿ ಹೊತ್ತಿಸಿದ್ದಾರೆ. ಮದ್ದೂರಲ್ಲಿ ಗಣೇಶ ಮೆರವಣಿಗೆ ಸಮಯದಲ್ಲಿ ಕಲ್ಲು ತೂರಾಟ ಮಾಡಿ ಕಿಡಿಗೇಡಿಗಳ ದುಷ್ಕೃತ್ಯದಿಂದ ಇಡೀ ಪಟ್ಟಣವೇ ಉದ್ವಿಗ್ನಗೊಂಡಿದೆ.
ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ಗಣೇಶನನ್ನ ಕೂರಿಸಲಾಗಿತ್ತು. ನಿನ್ನೆ ಸಂಜೆಯಿಂದ ಗಣೇಶ ವಿಸರ್ಜನಾ ಮೆರವಣಿಗೆಯನ್ನ ಹಮ್ಮಿಕೊಳ್ಳಲಾಗಿತ್ತು. ಹೀಗೆ ಗಣೇಶ ವಿಸರ್ಜನಾ ಮೆರವಣಿಗೆ ಮುಂದೆ ಸಾಗಿ ಬರ್ತಿದ್ದಂತೆ ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆದಿದೆ. ಕಿಡಿಗೇಡಿಗಳು ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಿ ನೀಚತನ ತೋರಿದ್ದಾರೆ. ಇದನ್ನ ಕಂಡ ಗಣೇಶ ಪ್ರತಿಷ್ಠಾಪಿಸಿದ ಯುವಕರ ಗುಂಪು ಕೂಡಾ ಕುಪಿತಗೊಂಡಿತ್ತು. ಈ ವೇಳೆ ಮದ್ದೂರು ಪಟ್ಟಣ ಅರ್ಧಗಂಟೆಗೂ ಹೆಚ್ಚು ಕಾಲ ಉದ್ವಿಗ್ನಗೊಂಡಿತ್ತು.
ಗಣೇಶ ಮೂರ್ತಿ ಮಸೀದಿಯ ಬಳಿ ತೆಗೆದುಕೊಂಡು ಹೋಗುವಾಗ ಕಲ್ಲು ತೂರಾಟ ಮಾಡಲಾಗಿದೆ. ಸಾಮಾನ್ಯ ಜನರ ಮೇಲೆ ಅಲ್ಲ, ಪೊಲೀಸರ ಮೇಲೆಯೂ ಕಲ್ಲು ತೂರಾಟ ಮಾಡಿದ್ದಾರೆ. ಬಾವುಟ ಇಳಿಸಿ ಅಂದ್ರು, ಸಾಂಗ್ ನಿಲ್ಲಿಸಿ ಎಂದರೂ ಎಲ್ಲ ಸ್ಟಾಪ್ ಮಾಡಿದೇವು. ಆದರೂ ನಮಗೆ ಇಲ್ಲಿ ನೆಮ್ಮದಿನೇ ಇಲ್ಲ. ಅವರು ಬಂದು ನಮ್ಮ ಮನೆಯಲ್ಲಿ ಊಟ ಮಾಡುತ್ತಾರೆ, ನಾವು ಹೋಗಿ ಅವರ ಮನೆಯಲ್ಲಿ ಊಟ ಮಾಡುತ್ತೇವೆ. ಆದರೆ ಇಲ್ಲಿ ಏನು ನಡೆಯುತ್ತಿದೆ ಎಂದು ನಮಗೆ ಗೊತ್ತಾಗುತ್ತಿಲ್ಲ.
ಸ್ಥಳೀಯರು
ಇನ್ನೂ ಕಲ್ಲು ತೂರಾಟ ನಡೀತಿದ್ದಂತೆ ಎರಡು ಗುಂಪಗಳ ನಡುವೆ ಗಲಾಟೆ ಜೋರಾಗಿತ್ತು. ಅಲ್ಲದೇ ಮೆರವಣಿಗೆಯಲ್ಲಿ ಭಾಗಿಯಾದವರೂ ಕಲ್ಲು ತೂರಾಟ ಮಾಡಿದ್ರು. ವಾತಾವರಣ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಫುಲ್ ಅಲರ್ಟ್ ಆಗಿದ್ರು. ಎರಡು ಗುಂಪನ್ನು ತಕ್ಷಣವೇ ಚದುರಿಸಿ ಓಡಿಸಿದರು. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಬಳಿಕ ಗಣೇಶ ವಿಸರ್ಜನೆಗೆ ಪೊಲೀಸರು ಅನುವು ಮಾಡಿಕೊಟ್ಟರು. ಅಲ್ಲದೇ ಸ್ಥಳಕ್ಕೆ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಕೂಡ ಭೇಟಿ ನೀಡಿ ಘಟನೆಯ ಮಾಹಿತಿ ಸಂಗ್ರಹಿಸಿದರು.
ಇದನ್ನೂ ಓದಿ: MS ಧೋನಿ ಅಭಿನಯದ ಹೊಸ ಸಿನಿಮಾದ ಟೀಸರ್ ಔಟ್.. ಕೂಲ್ ಕ್ಯಾಪ್ಟನ್ ವೈಲ್ಡ್ ಲುಕ್ಕಿಂಗ್!
ಸದ್ಯ ಮದ್ದೂರು ಪಟ್ಟಣ ಬೂದಿ ಮುಚ್ಚಿದ ಕೆಂಡದಂತಿದೆ. ಆದ್ರೆ, ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಿದ ಧರ್ಮಾಂಧರ ಹೆಡೆಮುರಿ ಕಟ್ಟಬೇಕಿದೆ. ಮತ್ತೆ ಈ ರೀತಿ ಕಿಡಿ ಹೊತ್ತಿಸುವಂಥ ಘಟನೆ ನಡೆಯದಂತೆ ಪೊಲೀಸರು ಕಿಡಿಗೇಡಿಗಳಿಗೆ ಬುದ್ಧಿಕಲಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ