/newsfirstlive-kannada/media/media_files/2025/09/12/mys_wife_arrest_1-2025-09-12-16-14-54.jpg)
ಮೈಸೂರು: ಲಕ್ಷಾಂತರ ರೂಪಾಯಿ ಆಸೆಗಾಗಿ ಊಟದಲ್ಲಿ ವಿಷ ಬೆರೆಸಿ, ಗಂಡ ಪ್ರಜ್ಞೆ ತಪ್ಪಿದ ಬಳಿಕ ಉಸಿರುಗಟ್ಟಿಸಿ ಹೆಂಡತಿಯೇ ಜೀವ ತೆಗೆದ ಘಟನೆ ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರು ಗ್ರಾಮದ ಬಳಿ ನಡೆದಿದೆ.
ಮಂಡ್ಯದ ಹಲಗೂರು ಸಮೀಪದ ಕದಂಪುರ ಗ್ರಾಮದ ವೆಂಕಟಸ್ವಾಮಿ (45) ಜೀವ ಕಳೆದುಕೊಂಡವರು. ಈತನ ಹೆಂಡತಿ ಸಲ್ಲಾಪುರಿ (40) ಕೃತ್ಯ ಎಸಗಿದ ಮಹಿಳೆ. ಚಿಕ್ಕಹೆಜ್ಜೂರು ಗ್ರಾಮದ ಬಳಿ ಬೆಂಗಳೂರು ಮೂಲದ ಸಿವಿಲ್ ಇಂಜಿನಿಯರ್​ಗಳ ಮಾಲೀಕತ್ವದ ಅಡಿಕೆ ತೋಟದಲ್ಲಿ ಈ ಪತಿ, ಪತ್ನಿ ಕೆಲಸ ಮಾಡುತ್ತಿದ್ದರು. ಆದರೆ ಮಹಿಳೆಗೆ ಐಷಾರಾಮಿ ಜೀವನ ನಡೆಸಬೇಕು ಎನ್ನುವ ದುರಾಸೆ ಇತ್ತು.
ಇದಕ್ಕಾಗಿ ಮನೆಯಲ್ಲಿ ಗಂಡನಿಗೆ ಊಟ ಕೊಡಬೇಕಾದರೆ ಅದರಲ್ಲಿ ಮೊದಲೇ ವಿಷ ಬೆರೆಸಿ ಕೊಟ್ಟಿದ್ದಳು. ಊಟ ಮಾಡಿದ್ದ ಗಂಡ ಕೆಲ ಸಮಯದ ನಂತರ ಪ್ರಜ್ಞೆತಪ್ಪಿ ಬಿದ್ದಿದ್ದನು. ಬಳಿಕ ಗಂಡನನ್ನು ಉಸಿರು ಕಟ್ಟಿಸಿ ಜೀವ ತೆಗೆದಿದ್ದಳು. ಜೀವ ತೆಗೆದ ಮೇಲೆ ಮೃತದೇಹ ಎಳೆದೊಯ್ದು ಸಮೀಪದ ತಿಪ್ಪೆಯಲ್ಲಿ ಒಬ್ಬಳೇ ಹೂತ್ತಿಟ್ಟು ಗಂಡ ನಾಪತ್ತೆ ನಾಟಕವಾಡಿದ್ದಳು. ಈ ಸಂಬಂಧ ಮಂಗಳವಾರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಳು.
/filters:format(webp)/newsfirstlive-kannada/media/media_files/2025/09/12/mys_wife_arrest-2025-09-12-16-15-07.jpg)
ಗಂಡನನ್ನು ಹುಲಿ ಎಳೆದುಕೊಂಡು ಹೋಗಿದೆ ಎಂದು ಹೇಳಿದರೆ ಲಕ್ಷಾಂತರ ರೂಪಾಯಿ ಬರುತ್ತದೆ ಎಂದು ಕಥೆ ಕಟ್ಟಿದ್ದಳು. ಮಹಿಳೆಯ ಹುಲಿ ಹೊತ್ತೊಯ್ದಿದೆ ಎನ್ನುವ ಮಾತು ನಂಬಿದ್ದ ಪೊಲೀಸರು, ಅರಣ್ಯ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದರು. ಮೃತದೇಹ ಎಳೆದೊಯ್ದಿದ್ದ ಗುರುತಿನ ಜಾಡು ಹಿಡಿದ ಪೊಲೀಸರಿಗೆ ತಿಪ್ಪೆಗುಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಸಂಬಂಧ ಮಹಿಳೆಯನ್ನು ಗಂಭೀರವಾಗಿ ವಿಚಾರಣೆ ನಡೆಸಿದಾಗ ಹಣದ ದುರಾಸೆಗಾಗಿ ಈ ಕೃತ್ಯ ಮಾಡಿದ್ದೇನೆ ಎಂದು ಹೇಳಿದ್ದಾಳೆ. ನಗರ ಪ್ರದೇಶಕ್ಕೆ ಹೋಗಿ ಐಷಾರಾಮಿ ಜೀವನ ನಡೆಸಬೇಕೆಂಬ ದುರಾಸೆ ಇತ್ತು. ಹೀಗಾಗಿ ಗಂಡನನ್ನು ಹುಲಿ ಎಳೆದೊಯ್ದು ಕೊಂದರೆ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಪರಿಹಾರ ಸಿಗುತ್ತದೆ ಎಂದು ಕೃತ್ಯ ನಡೆಸಿದ್ದಾಗಿ ಸತ್ಯ ಹೇಳಿದ ಮಹಿಳೆ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us