/newsfirstlive-kannada/media/media_files/2025/10/18/hsn_hasanambe-1-2025-10-18-07-04-18.jpg)
ಹಾಸನಾಂಬೆಯ ದರ್ಶನೋತ್ಸವ ಅದ್ಧೂರಿಯಾಗಿ ಸಾಗುತ್ತಿದೆ. ಕೇವಲ 8 ದಿನಗಳಲ್ಲಿ ಹಾಸನಾಂಬೆ ದರ್ಶನದಿಂದ ಹೊಸ ಇತಿಹಾಸವೇ ಸೃಷ್ಟಿಯಾಗಿದೆ. ಕೇವಲ ಭಕ್ತರ ಸಂಖ್ಯೆ ಮಾತ್ರವಲ್ಲದೇ ಆದಾಯವೂ ಕೋಟಿ ಕೋಟಿ ಹರಿದುಬಂದಿದೆ.
ಹಾಸನಾಂಬೆ, ಅಧಿದೇವತೆ ವರ್ಷಕ್ಕೊಮ್ಮೆ ದರ್ಶನ ನೀಡುವ ತಾಯಿಯ ದರುಶನಕ್ಕೆ ಲಕ್ಷಾಂತರ ಭಕ್ತರು ಹರಿದುಬರ್ತಿದ್ದಾರೆ.
ಹಾಸನಾಂಬೆ ದರ್ಶನದಲ್ಲಿ ಇತಿಹಾಸ..15 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ
ಹಾಸನಾಂಬೆಯ ದರ್ಶನೋತ್ಸವ ಅದ್ಧೂರಿಯಾಗಿ ಸಾಗುತ್ತಿದೆ. ಅದ್ಯಾವ ಪರಿ ಅಂದ್ರೆ ಕಿಲೋಮೀಟರ್​ಗಟ್ಟಲೇ ಭಕ್ತರು ಸರತಿ ಸಾಲಲ್ಲಿ ತಾಯಿಯ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಜನಸಾಮಾನ್ಯರಿಂದ ಹಿಡಿದು ಗಣ್ಯರು ದೇವಿಯ ಮೊರೆ ಹೋಗುತ್ತಿದ್ದಾರೆ. ದುಡ್ಡು ಕೊಟ್ಟರೂ ದರ್ಶನಕ್ಕಾಗಿ ಗಂಟೆಗಟ್ಟಲೇ ಕಾಯಬೇಕಾಗಿದೆ. ದೇವಾಲಯದಿಂದ ನಗರ ಬಸ್ ನಿಲ್ದಾಣದವರೆಗೆ ಸಾಲು ನಿಂತಿದೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. 8 ದಿನದಲ್ಲಿ ಹಾಸನಾಂಬೆ ದರ್ಶನದಿಂದ ಹೊಸ ಇತಿಹಾಸ ಸೃಷ್ಟಿಯಾಗಿದೆ. ಬರೋಬ್ಬರಿ 15 ಲಕ್ಷದ 30 ಸಾವಿರ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
ಕೇವಲ 8 ದಿನಗಳಲ್ಲಿ ದೇವಾಲಯಕ್ಕೆ ₹10.5 ಕೋಟಿ ಆದಾಯ
ಇನ್ನು ಲಕ್ಷಗಟ್ಟಲೇ ಭಕ್ತರ ಆಗಮನದಿಂದ ದೇವಾಲಯಕ್ಕೆ ಕೋಟಿ ಕೋಟಿ ದೇಣಿಗೆ ಹರಿದು ಬರುತ್ತಿದೆ. ಕೇವಲ 8 ದಿನದಲ್ಲಿ ದೇವಾಲಯಕ್ಕೆ 10ವರೆ ಕೋಟಿ ರೂಪಾಯಿ ಆದಾಯ ಬಂದಿದೆ. ಈ ಬಾರಿ ವಿಐಪಿ, ವಿವಿಐಪಿ ಪಾಸ್​ ರದ್ದುಗೊಳಿಸಿದ್ದು ಭಕ್ತರಿಗೆ ಭಾರೀ ಅನುಕೂಲವಾಗಿದೆ. ಉಳಿದ 5 ದಿನದಲ್ಲಿ ಐದು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಇನ್ನು ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಿದ್ದಾರೆ. ವಾರಾಂತ್ಯ ಹಾಗೂ ದೀಪಾವಳಿ ರಜೆ ಕಾರಣ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ ಬೆಂಗಳೂರಿನಿಂದ ಹಾಸನಕ್ಕೆ ಬಸ್ ಸಂಚಾರ ಹೆಚ್ಚಾಗಿದೆ. ಹಾಸನಾಂಬೆಯ ದರ್ಶನಕ್ಕೆ ಲಕ್ಷಗಟ್ಟಲೇ ಭಕ್ತರು ಹರಿದು ಬಂದಿದ್ದು ಈ ಬಾರಿ ಇದು 20 ಲಕ್ಷ ದಾಟುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ