/newsfirstlive-kannada/media/media_files/2025/08/09/rcr_mantralaya_1-2025-08-09-08-25-10.jpg)
ಇದು ಶ್ರಾವಣ ಬಹುಳ ಬಿದಿಗೆ. ಕಲಿಯುಗದ ಕಾಮಧೇನು, ಕಲ್ಪತರು ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನೆಯ ಸುದಿನ. ಮಂತ್ರಾಲಯದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಸುಬುಧೇಂದ್ರ ತೀರ್ಥರು ಧ್ವಜಾರೋಹಣ ಮೂಲಕ ರಾಯರ ಆರಾಧನೆಗೆ ಚಾಲನೆ ನೀಡಿದ್ದಾರೆ. ತುಂಗಾ ತೀರದಲ್ಲಿ ರಾಯರ ಸ್ಮರಣೆ ಮೇಳೈಸಿದೆ.
ಗುರು ರಾಘವೇಂದ್ರ ಸ್ವಾಮಿಗಳು ತುಂಗಾ ತೀರದ ಮಂತ್ರಾಲಯದಲ್ಲಿ ಬೃಂದಾವನಸ್ಥರಾಗಿರೋ ರಾಯರು ಭಕ್ತರ ಪಾಲಿನ ಕಲ್ಪತರು. ಇಷ್ಟಾರ್ಥಗಳನ್ನು ಈಡೇರಿಸುವ ಕಾಮಧೇನು. ತಿರುಪತಿ, ಉಡುಪಿ, ಬದರಿನಾಥ, ಪುರಿ ಸಕಲಯಾತ್ರೆಗಳ ಫಲಗಳನ್ನು ನೀಡುವ ಪುಣ್ಯಕ್ಷೇತ್ರ. ಮಂತ್ರಾಲಯದಲ್ಲಿಗ ಪರಮ ಪಾವನ ಗುರುರಾಯರ ಆರಾಧನಾ ಮಹೋತ್ಸವ ಕಳೆಗಟ್ಟಿದೆ.
7 ದಿನಗಳ ಕಾಲ ಮಂತ್ರಾಲಯ ಮಠದಲ್ಲಿ ಸಪ್ತರಾತ್ರೋತ್ಸವ
ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ಬೃಂದಾವನಸ್ಥರಾಗಿ 354 ಸಂವಸ್ಥರಗಳು ಸಂದಿವೆ. ಆಗಸ್ಟ್ 14ರವರೆಗೆ ಏಳು ದಿನಗಳ ಕಾಲ ನಡೆಯುವ ಸಪ್ತರಾತ್ರೋತ್ಸವಕ್ಕೆ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಧ್ವಜಾರೋಹಣ ಮೂಲಕ ಚಾಲನೆ ನೀಡಿದರು. ಆ ಬಳಿಕ ಗೋಪೂಜೆ, ಅಶ್ವಪೂಜೆ, ಧಾನ್ಯ ಪೂಜೆಗಳನ್ನ ನೆರವೇರಿಸಿದರು. ತಳಿರು ತೋರಣಗಳಿಂದ ಮಂತ್ರಾಲಯ ಮಠ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಇಂದು ವರಮಹಾಲಕ್ಷ್ಮಿ ಇದ್ದಿದ್ದರಿಂದ ಇವತ್ತೇ ದೇವರ ದರ್ಶನ ಮಾಡಿರುವುದು ನನಗೆ ತುಂಬಾ ಖುಷಿ ನೀಡುತ್ತಿದೆ. ಪ್ರತಿ ವರ್ಷ ಬಂದಾಗ ಹೆಚ್ಚು ಜನ ಇರುತ್ತಿತ್ತು. ಅದರಂತೆ ಈ ಬಾರಿಯೂ ಜನರ ಮಧ್ಯೆ ನಿಂತುಕೊಂಡು ದೇವರ ದರ್ಶನ ಮಾಡಿದ್ದೇವೆ. ದರ್ಶನದಿಂದ ನೆಮ್ಮದಿ ಸಿಕ್ಕಿದೆ.
ರಮ್ಯಾ, ಭಕ್ತರು
ಆಗಸ್ಟ್ 10ರಂದು ಪೂರ್ವಾರಾಧನೆ ನಡೆಯಲಿದ್ದು, ತಿರುಪತಿಯಿಂದ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಿಸಲಾಗುತ್ತೆ. ಆ.11ರಂದು ಸೋಮವಾರ ಮಧ್ಯಾರಾಧನೆ, ಆಗಸ್ಟ್ 12 ರಂದು ಉತ್ತರಾಧನೆ ದಿನ ಮಠದ ರಥ ಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ.
ಹುಟ್ಟಿದ ಪಾಪುವಿನಿಂದ ಈವರೆಗೂ ಇಲ್ಲಿಗೆ ಬರಬೇಕು ಎಂದು ಅಂದುಕೊಳ್ಳುತ್ತಿದ್ದೆ. ಈಗ ಬಂದಿದ್ದೇನೆ. ಬಹಳ ತೃಪ್ತಿಯಾಗಿದೆ. ಈಗ ಎರಡ್ಮೂರು ಸಲ ಬಂದಿದ್ದೇನೆ. ದೇವಾಲಯ ತುಂಬಾ ಅಭಿವೃದ್ಧಿಯಾಗಿದೆ. ಸ್ವಚ್ಛತೆಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಮತ್ತೆ ಇಲ್ಲಿಗೆ ಬರಬೇಕು ಅನಿಸುತ್ತಿದೆ.
ಬಾಬು, ಭಕ್ತರು
ಇನ್ನು ಮಂತ್ರಾಲಯದಲ್ಲಿ ರಾಯರ 354 ಆರಾಧನಾ ಮಹೋತ್ಸವಕ್ಕೆ ಶ್ರೀ ಸುಬುಧೇಂದ್ರ ತೀರ್ಥರು ಚಾಲನೆ ನೀಡಿ ಶ್ರೀಮಠದ ಎಲ್ಲಾ ಕಚೇರಿಗಳಲ್ಲಿ ಪೂಜೆ ಸಲ್ಲಿಸಿ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ದಿನವೇ ಅರ್ಚಕನ ಮನೆಗೆ ಕನ್ನ.. ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿ
ಸಾರ್ವಜನಿಕ ವಸತಿಯ ಡಾರಮೆಟ್ರಿಗಳ ಸಮರ್ಪಣೆ. ನೂತನವಾಗಿ ನಿರ್ಮಾಣ ಮಾಡಲಾಗಿದ್ದು ಇದಕ್ಕೆ ಭಕ್ತರ ಸಹಕಾರ, ಸಹಯೋಗದೊಂದಿಗೆ ಪರಿಬಳ ಪುಷ್ಕರಣಿಯ ವೀಕ್ಷಣೆ, ನಾಳೆ ದಿನ ತೆಪ್ಪೋತ್ಸವ, ಮೊದಲಾದ ಕಾರ್ಯಕ್ರಮಗಳು ಎಲ್ಲವೂ ಕೂಡ ಆರಾಧಾನೋತ್ಸವದ ಅಂಗವಾಗಿ ನಡೆಯಲಿದೆ. ಎಲ್ಲಿರಿಗೂ ಶುಭವಾಗಲಿ.
ಶ್ರೀ ಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠ
ಏಳು ದಿನಗಳ ಕಾಲ ಎಲ್ಲೆಡೆ ಗುರುಸಾರ್ವಭೌಮರ ನಾಮಸ್ಮರಣೆ ಅನುರಣಿಸಲಿದೆ. ಏಳು ದಿನ ಕಾಲ ಪ್ರತಿನಿತ್ಯ ಮಠದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವಿಸಲಿದ್ದು ವೈಕುಂಠವೇ ಧರೆಗಿಳಿದಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ