/newsfirstlive-kannada/media/media_files/2026/01/23/ksrtc-bus-accident-2026-01-23-15-11-55.jpg)
ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಸಾರಿಗೆ ಸಂಸ್ಥೆಯ ಬಸ್ ಹರಿದು ನಾಲ್ಕು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆಯ ವಿವರ:
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಗೂಗಲ್ ಗ್ರಾಮದಿಂದ ದೇವದುರ್ಗಕ್ಕೆ ತೆರಳುತ್ತಿದ್ದ ಕೆಕೆಆರ್ಟಿಸಿ (KKRTC) ಬಸ್ಸಿಗೆ ಬಾಲಕಿ ಏಕಾಏಕಿ ಅಡ್ಡ ಬಂದಿದ್ದಾಳೆ. ಮಗು ರಸ್ತೆ ದಾಟಲು ಮುಂದಾದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ಸಿನ ಚಕ್ರ ಮಗುವಿನ ಮೇಲೆ ಹರಿದಿದೆ.
ಸ್ಥಳದಲ್ಲೇ ಮೃತಪಟ್ಟ ಬಾಲಕಿ
ಮೃತಪಟ್ಟ ಬಾಲಕಿಯನ್ನು ಗಬ್ಬೂರು ಗ್ರಾಮದ ನಿವಾಸಿ ವಿದ್ಯಾಶ್ರೀ (4 ವರ್ಷ) ಎಂದು ಗುರುತಿಸಲಾಗಿದೆ. ಬಸ್ ಚಕ್ರ ಮೈಮೇಲೆ ಹರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ವಿದ್ಯಾಶ್ರೀ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಮಗುವಿನ ಅಕಾಲಿಕ ಮರಣದಿಂದ ಮದರಕಲ್ ಮತ್ತು ಗಬ್ಬೂರು ಗ್ರಾಮಗಳಲ್ಲಿ ಶೋಕ ಮಡುಗಟ್ಟಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸ್ ಭೇಟಿ, ಪ್ರಕರಣ ದಾಖಲು
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಗಬ್ಬೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ರಸ್ತೆ ದಾಟುವಾಗ ಚಾಲಕನ ನಿರ್ಲಕ್ಷ್ಯವೋ ಅಥವಾ ಮಗು ದಿಢೀರನೆ ಬಂದಿದ್ದೇ ಈ ಘಟನೆಗೆ ಕಾರಣವೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಸ್ಮೃತಿ ಮಂದಾನ ಜೊತೆ ಮದುವೆ ರದ್ದು ಬಳಿಕ ಪಲಾಶ್ ಮುಚ್ಚಾಲ್ ರಿಂದ ಮತ್ತೊಂದು ವಿವಾದ : ಹಣ ಕೊಡದೇ ವಂಚನೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us