/newsfirstlive-kannada/media/media_files/2025/09/08/lunar_eclipse-2-2025-09-08-07-12-31.jpg)
ಬೆಂಗಳೂರು: ಭಾನುವಾರ ಅದು ಹುಣ್ಣಿಮೆಯ ದಿನದಂದು ಆಕಾಶದಲ್ಲಿ ಖಗ್ರಾಸ ರಾಹುಗ್ರಸ್ತ ಚಂದ್ರ ಗ್ರಹಣ ಸಂಭವಿಸಿತು. 3 ಗಂಟೆ 29 ನಿಮಿಷಗಳ ಕಾಲ ಸುದೀರ್ಘವಾಗಿ ಚಂದ್ರ ತನ್ನ ಬಣ್ಣ ಬದಲಿಸುತ್ತಾ ಸಾಗಿದನು. ಕ್ಷಣ ಕ್ಷಣಕ್ಕೂ ಇದನ್ನೆಲ್ಲ ಕಣ್ತುಂಬಿಕೊಂಡ ಜನರು ಬರಿಗಣ್ಣಿನಿಂದ ಚಂದ್ರಗ್ರಹಣವನ್ನು ನೋಡಿ ಸಂತಸ ಪಟ್ಟರು. ಮೊದಲ ಬಾರಿಗೆ ಇಂತಹ ವಿಸ್ಮಯ ಕಂಡ ಮಕ್ಕಳಂತೂ ಚಂದಮಾಮನ ಪ್ರೀತಿಯಲ್ಲೇ ಉಳಿದುಕೊಂಡರು.
ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ ದಶಕಗಳಲ್ಲೇ ಅತ್ಯಂತ ದೊಡ್ಡ ಹಾಗೂ ವರ್ಷದ ಎರಡನೇ ಹಾಗೂ ಕೊನೆಯ ಭಾದ್ರಪದ ಮಾಸದ ಚಂದ್ರಗ್ರಹಣ ಇದಾಗಿತ್ತು. ಅಪರೂಪದ ವಿದ್ಯಮಾನಕ್ಕೆ ವಿವಿಧ ದೇಶಗಳ ಜೊತೆಗೆ ಭಾರತ ಕೂಡ ಸಾಕ್ಷಿಯಾಯಿತು. ದೇಶದ ವಿವಿಧ ನಗರಗಳಲ್ಲಿ ಜನರು ವೀಕ್ಷಣೆ ಮಾಡಿದರು. ಹುಣ್ಣಿಮೆಯ ರಾತ್ರಿಯಲ್ಲಿ ಆಕಾಶದಲ್ಲಿ ಬಿಳಿ ಬಣ್ಣದಲ್ಲಿ ಕಾಣಿಸುತ್ತಿದ್ದ ಶಶಿ, ನಿನ್ನೆ ಭೂಮಿತಾಯಿಯ ನೆರಳು ಹೊದ್ದು ಕೆಂಪು ಬಣ್ಣದಲ್ಲಿ ಗೋಚರಿಸಲ್ಪಟ್ಟನು.
ಭಾನುವಾರ ರಾತ್ರಿ 9.57ಕ್ಕೆ ಸರಿಯಾಗಿ ನಭೋಮಂಡಲದಲ್ಲಿ ಗ್ರಹಣ ಸ್ಪರ್ಶ ಆರಂಭವಾಯಿತು. ರಾತ್ರಿ 10 ಗಂಟೆ ವೇಳೆಗೆ ಅರ್ಧಚಂದ್ರಾಕೃತಿಯಲ್ಲಿ ಕಾಣಿಸಿಕೊಂಡ ಚಂದಿರ ಬಳಿಕ ರಾತ್ರಿ 11 ಗಂಟೆ ವೇಳೆಗೆ ನಿಧಾನಕ್ಕೆ ರಕ್ತಬಣ್ಣಕ್ಕೆ ತಿರುಗಲು ಆರಂಭಿಸಿನು. ಮಧ್ಯರಾತ್ರಿ 11.41ಕ್ಕೆ ಗ್ರಹಣದ ಮಧ್ಯಕಾಲ ಆಗಿದ್ದು ಒಂದು ನಿಮಿಷದ ಬಳಿಕ ಭಾರತದೆಲ್ಲೆಡೆ ರಾತ್ರಿ 11.42ಕ್ಕೆ ಕಡುಗೆಂಪು ಬಣ್ಣದಲ್ಲಿ ಪೂರ್ಣ ಚಂದ್ರಗ್ರಹಣ ಗೋಚರಿಸಿತು. ಮಧ್ಯ ರಾತ್ರಿ 1.27 ಸುಮಾರಿಗೆ ಗ್ರಹಣ ಮುಕ್ತಾಯವಾಯಿತು. ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ ಆಕಾಶದಲ್ಲಿ ಭಾರೀ ಕೌತುಕದೊಂದಿಗೆ ಸಂಪನ್ನವಾಯಿತು. 3 ಗಂಟೆ 29 ನಿಮಿಷಗಳ ಕಾಲ ಸುದೀರ್ಘ ಚಂದ್ರಗ್ರಹಣ ಸಂಭವಿಸಿದ್ದು ವಿಶೇಷ ಎನಿಸಿತು.
ಭಾರತದಲ್ಲಿ ಎಷ್ಟು ಗಂಟೆ ಚಂದ್ರಗ್ರಹಣ ಗೋಚರ ಆಯಿತು?
82 ನಿಮಿಷಗಳ ಕಾಲ ಭಾರತದಲ್ಲಿ ಚಂದ್ರಗ್ರಹಣ ಗೋಚರವಾಯಿತು. ಭಾಗಶಃ ಚಂದ್ರಗ್ರಹಣ ರಾತ್ರಿ 9:57ಕ್ಕೆ ಆರಂಭವಾಗಿ, ಪೂರ್ಣ ಚಂದ್ರಗ್ರಹಣ ರಾತ್ರಿ 11:00 ಗಂಟೆಗೆ ಕಂಡುಬಂದಿತು. ಗರಿಷ್ಠ ಗ್ರಹಣ ಅಂದರೆ ಸಂಪೂರ್ಣ ಗ್ರಹಣವು 11:41ಕ್ಕೆ, ಪೂರ್ಣ ಗ್ರಹಣವು ನಡುರಾತ್ರಿ 12:22 ಮುಕ್ತಾಯವಾಯಿತು. ಭಾಗಶಃ ಗ್ರಹಣವು ನಡುರಾತ್ರಿ 1 ಗಂಟೆ 26 ನಿಮಿಷಕ್ಕೆ ಕೊನೆಯಾಯಿತು. ಕೊನೆಯದಾಗಿ, ಉಪಚ್ಛಾಯಾ ಗ್ರಹಣವು 2 ಗಂಟೆ 25 ನಿಮಿಷಕ್ಕೆ ಮುಕ್ತಾಯವಾಗಿದೆ.
ಇದನ್ನೂ ಓದಿ: ಶಿವನ ಭಕ್ತರಿಗೆ ಗುಡ್ನ್ಯೂಸ್.. ವಿಶೇಷ ರೈಲ್ವೆ ಪ್ಯಾಕೇಜ್, 7 ಜ್ಯೋತಿರ್ಲಿಂಗಗಳ ದರ್ಶನ
ಖಗ್ರಾಸ ಚಂದ್ರಗ್ರಹಣದ ವೇಳೆ ಕೆಲವು ಮೌಢ್ಯ ಆಚರಿಸೋದು ಸರ್ವೇಸಾಮಾನ್ಯ. ಊಟ ಮಾಡಬಾರದು, ಬರಿ ಗಣ್ಣಿನಿಂದ ಗ್ರಹಣ ನೋಡಬಾರದು ಇತ್ಯಾದಿ ಮೌಢ್ಯಗಳಿವೆ. ಇಂಥಹ ಮೌಢ್ಯತೆಯ ವಿರುದ್ಧ ಪ್ರಗತಿಪರರು ಜನ ಜಾಗೃತಿ ಮೂಡಿಸಿದರು. ಗ್ರಹಣದ ವೇಳೆ ಬೆಂಗಳೂರಿನ ಟೌನ್‌ಹಾಲ್ ಮುಂಭಾಗ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 150ಕ್ಕೂ ಹೆಚ್ಚು ಪ್ರಗತಿಪರರು ಬಗೆ ಬಗೆಯ ಆಹಾರ ಸೇವಿಸಿ ಜಾಗೃತಿಯನ್ನ ಮೂಡಿಸಿದರು. ಹಾಡುಗಳನ್ನ ಹಾಡುತ್ತಾ ಊಟ ಸೇವಿಸುತ್ತಾ, ಮಕ್ಕಳಿಗೂ ಊಟ ತಿನ್ನಿಸುತ್ತಾ ಮೌಢ್ಯಗಳ ತೊಲಗಲಿ. ವಿಜ್ಞಾನ, ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವಂತೆ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ