/newsfirstlive-kannada/media/media_files/2025/08/26/biklu_shiva_case-2025-08-26-10-22-51.jpg)
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವನ ಜೀವ ತೆಗೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ಸಿಐಡಿ ಅಧಿಕಾರಿಗಳು ಕೊನೆಗೂ ಅರೆಸ್ಟ್ ಮಾಡಿದ್ದಾರೆ. ಬಿಕ್ಲು ಶಿವನನ್ನ ಮುಗಿಸಿದ ಮೇಲೆ ಜಗ್ಗ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದನು.
ರೌಡಿಶೀಟರ್ ಬಿಕ್ಲು ಶಿವ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಜಗ್ಗ ಕೃತ್ಯ ನಡೆದ ಮೇಲೆ ನಾಪತ್ತೆ ಆಗಿದ್ದನು. ಈ ಸಂಬಂಧ ಸಿಐಡಿ ಪೋಲೀಸರು ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿ ಹುಡುಕಾಟ ನಡೆಸಿದ್ದರು. ಅದರಂತೆ ಇಂದು ಜಗ್ಗನನ್ನು ಅರೆಸ್ಟ್ ಮಾಡಲಾಗಿದ್ದು ದೆಹಲಿಯ ಏರ್ಪೋರ್ಟ್ನಿಂದ ಕರೆತರಲಾಗುತ್ತಿದೆ. ಎಸ್ಪಿ ವೆಂಕಟೇಶ್ ನೇತೃತ್ವದ ತಂಡದಿಂದ ಜಗ್ಗನನ್ನು ಅರೆಸ್ಟ್ ಮಾಡಲಾಗಿದೆ.
ಬಿಕ್ಲು ಶಿವ ಕೇಸ್ನಲ್ಲಿ ಶಾಸಕ ಬೈರತಿ ಬಸವರಾಜ್ ಹೆಸರು ಕೂಡ ಇದ್ದು ಎ5 ಆರೋಪಿಯಾಗಿದ್ದಾರೆ. ನಗರದ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಐವರ ವಿರುದ್ಧ ದೂರು ದಾಖಲಾಗಿದೆ. ಜಗದೀಶ್ ಅಲಿಯಾಸ್ ಜಗ್ಗ ಎ1, ಕಿರಣ್ ಎ2, ವಿಮಲ್ ಎ 3, ಅನಿಲ್ ಎ4 ಹಾಗೂ ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಎ5 ಆರೋಪಿಗಳು ಆಗಿದ್ದಾರೆ. ಈಗಾಗಲೇ ಬೈರತಿ ಬಸವರಾಜ್ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ:ನಿಲ್ಲದ ವರದಕ್ಷಿಣೆ ಕಿರುಕುಳ.. ಪೆಟ್ರೋಲ್ ಸುರಿದು 3 ವರ್ಷದ ಮಗಳ ಜೊತೆ ಬೆಂಕಿ ಹಚ್ಚಿಕೊಂಡ ತಾಯಿ
ಬೈರತಿ ಬಸವರಾಜ್ ಆಪ್ತನಾಗಿರುವ ಜಗ್ಗ ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದನು. ವಿದೇಶದಲ್ಲಿರುವುದು ಮಾಹಿತಿ ಅಧಿಕಾರಿಗಳಿಗೆ ಇತ್ತು ಎನ್ನಲಾಗಿದೆ. ಹೀಗಾಗಿಯೇ ಜಗ್ಗನ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಅನ್ನು ಅಧಿಕಾರಿಗಳು ಹೊರಡಿಸಿದ್ದರು. ಸದ್ಯ ದೆಹಲಿಯ ಏರ್ಪೋರ್ಟ್ನಿಂದ ಆರೋಪಿಯನ್ನು ಕರೆತರಲಾಗುತ್ತಿದೆ.
ಬೆಂಗಳೂರಿನ ಹಲಸೂರು ಕೆರೆ ಬಳಿ ಜುಲೈ 15 ರಂದು ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನ ಮುಗಿಸಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಜೀವ ತೆಗೆಯಲಾಗಿತ್ತು. ಜಮೀನು ವಿಚಾರಕ್ಕೆ ಈ ಕೃತ್ಯ ನಡೆಸಲಾಗಿದೆ ಎಂದು ಮೃತ ಶಿವಪ್ರಕಾಶ್ ತಾಯಿ ದೂರು ನೀಡಿದ್ದರು. ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ