Advertisment

RTI ಮೇಲ್ಮನವಿ ಅರ್ಜಿ ತ್ವರಿತ ವಿಲೇವಾರಿ.. ಶೂನ್ಯಕ್ಕಿಳಿಸಲು ಜಿಲ್ಲಾ ಮಟ್ಟದಲ್ಲೇ ಅದಾಲತ್; ರುದ್ರಣ್ಣ ಹರ್ತಿಕೋಟೆ

ರಾಜ್ಯದಲ್ಲಿ ಸರಿಯಾಗಿ ಮಾಹಿತಿ ನೀಡದ 10,699 ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಗಳಿಗೆ ಈವರೆಗೆ 10,08,46,450 ರೂ ರಷ್ಟು ದಂಡ ಆಯೋಗ ವಿಧಿಸಿದೆ. ಈ ಪೈಕಿ 2119 ಅಧಿಕಾರಿಗಳು 2.45 ಕೋಟಿ ದಂಡ ಪಾವತಿಸಿದ್ದು, ಉಳಿದ ಅಧಿಕಾರಿಗಳು ದಂಡ ಪಾವತಿ ಮಾಡುವಂತೆ ಸೂಚಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ

author-image
Bhimappa
RTI
Advertisment

ಚಿಕ್ಕಬಳ್ಳಾಪುರ: ಮಾಹಿತಿ ಹಕ್ಕು ಕಾಯ್ದೆ ಅಡಿ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಜಿಲ್ಲಾ ಮಟ್ಟದಲ್ಲಿಯೇ ಅದಾಲತ್ ನಡೆಸುವ ಚಿಂತನೆಯನ್ನು ಆಯೋಗ ಹೊಂದಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು ತಿಳಿಸಿದ್ದಾರೆ.

Advertisment

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರುದ್ರಣ್ಣ ಹರ್ತಿಕೋಟೆ, ಕಳೆದ 7 ತಿಂಗಳ ಹಿಂದೆ ರಾಜ್ಯ ಮಾಹಿತಿ ಆಯೋಗದಲ್ಲಿ ಸುಮಾರು 54 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೆವಾರಿಗೆ ಬಾಕಿ ಇದ್ದವು. ಈ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಿ ಅರ್ಜಿದಾರರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಹಲವು ಯುಕ್ತ ಕ್ರಮಗಳನ್ನು ಆಯೋಗ ತೆಗೆದುಕೊಂಡು 12,896 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಪ್ರಸ್ತುತ 41,104ಕ್ಕೆ ಮಾಹಿತಿ ಹಕ್ಕು ಅರ್ಜಿಗಳನ್ನು ಇಳಿಸಲಾಗಿದೆ. ಈ 41,104 ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವ ಉದ್ದೇಶದಿಂದ ಮಾಹಿತಿ ಆಯುಕ್ತರೇ ಜಿಲ್ಲಾ ಮಟ್ಟಕ್ಕೆ ಆಗಮಿಸಿ ಅದಾಲತ್ ತೆಗೆದುಕೊಂಡು ಸ್ಥಳದಲ್ಲೇ ಅರ್ಜಿದಾರರಿಗೆ ಮಾಹಿತಿ ತಲುಪಿಸುವ ಕಾರ್ಯ ಮುಂದಿನ ಕನ್ನಡ ರಾಜ್ಯೋತ್ಸವದ ವೇಳೆಗೆ ಆರಂಭವಾಗಬಹುದು ಎಂದು ಭರವಸೆ ನೀಡಿದ್ದಾರೆ.

RTI_2

ಪ್ರಸ್ತುತ ರಾಜ್ಯದಲ್ಲಿ ಪ್ರತಿ ತಿಂಗಳು ಸರಾಸರಿ 1500 ಮಾಹಿತಿ ಹಕ್ಕು ಅರ್ಜಿಗಳು ಆಯೋಗಕ್ಕೆ ಸ್ವೀಕಾರವಾಗುತ್ತಿವೆ. ಈ ಅರ್ಜಿಗಳನ್ನು ಸಹ ಕಾಲೋಚಿತವಾಗಿ ಇತ್ಯರ್ಥ ಪಡಿಸುವ ಜೊತೆ ಜೊತೆಗೆ ಪ್ರಸ್ತುತ ಬಾಕಿ ಇರುವ 41,104 ಅರ್ಜಿಗಳನ್ನು ವಿಲೇವಾರಿ ಮಾಡಿ ಶೂನ್ಯಕ್ಕಿಳಿಸುವ ಮೂಲಕ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರಲು ಆಯೋಗ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯು ಜಾರಿಗೆ ಬಂದಿರುವುದು ಭ್ರಷ್ಟಾಚಾರ ನಿವಾರಣೆಗೆ ಹೆಚ್ಚು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.

10 ಕೋಟಿಗೂ ಹೆಚ್ಚು ದಂಡ

ರಾಜ್ಯದಲ್ಲಿ ಸರಿಯಾಗಿ ಮಾಹಿತಿ ನೀಡದ 10,699 ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಗಳಿಗೆ ಈವರೆಗೆ 10,08,46,450 ರೂ ರಷ್ಟು ದಂಡ ಆಯೋಗ ವಿಧಿಸಿದೆ. ಈ ಪೈಕಿ  2119 ಅಧಿಕಾರಿಗಳು 2.45 ಕೋಟಿ ದಂಡ ಪಾವತಿಸಿದ್ದು, ಉಳಿದ ಅಧಿಕಾರಿಗಳು ದಂಡ ಪಾವತಿ ಮಾಡುವಂತೆ ಸೂಚಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ರುದ್ರಣ್ಣ ಹರ್ತಿಕೋಟೆ ಅವರು ಮಾಹಿತಿ ನೀಡಿದ್ದಾರೆ. 

Advertisment

ಮಾಹಿತಿ ಆಯುಕ್ತ ರಾಜಶೇಖರ.ಎಸ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿ ಉತ್ತಮವಾಗಿದೆ. ಕಳೆದ ಏಪ್ರಿಲ್​ನಿಂದ ಈ ವರೆಗೆ 10,777 ಮಾಹಿತಿ ಹಕ್ಕು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 9,837 ರಷ್ಟು ಅರ್ಜಿಗಳು ವಿಲೆವಾರಿಯಾಗಿ 772 ಅರ್ಜಿಗಳು ಮಾತ್ರ ಬಾಕಿ ಇವೆ. ಜಿಲ್ಲೆಯಲ್ಲಿ ಸ್ವೀಕಾರಗೊಂಡಿರುವ ಮಾಹಿತಿ ಅರ್ಜಿಗಳ ಪೈಕಿ ಪಂಚಾಯತ್ ರಾಜ್ ಇಲಾಖೆಯಡಿ 368, ಕಂದಾಯ ಇಲಾಖೆಯಡಿ 212, ಸಮಾಜ ಕಲ್ಯಾಣ ಇಲಾಖೆಯಡಿ 33, ನಾಗರಾಭಿವೃದ್ಧಿ ಇಲಾಖೆಯಡಿ 31, ಜಲ ಸಂಪನ್ಮೂಲ ಇಲಾಖೆಯಡಿ 21, ಕೃಷಿ ಇಲಾಖೆಯ 19, ಅರಣ್ಯ ಇಲಾಖೆಯಡಿ 18, ಲೋಕೋಪಯೋಗಿ ಇಲಾಖೆಯಡಿ 17 ಅರ್ಜಿಗಳಿವೆ ಹಾಗೂ ಇತರ ಇಲಾಖೆಗಳಲ್ಲಿ ಪ್ರಕರಣಗಳು ಬಾಕಿ ಇವೆ. ಈ ಎಲ್ಲಾ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿಯೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಾಗೂ ಕಂದಾಯ ಇಲಾಖೆಯಡಿ ಮಾಹಿತಿ ಹಕ್ಕು ಅರ್ಜಿಗಳು ಅತಿ ಹೆಚ್ಚಾಗಿ ಸ್ವೀಕಾರವಾಗಿವೆ. ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಬೇಕಾದ ಮಾಹಿತಿ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಸಾರ್ವಜನಿಕರು ಕೇಳಿದ ಸಾರ್ವಜನಿಕ ಹಿತಾಸಕ್ತಿಯುಳ್ಳ ಮಾಹಿತಿಯನ್ನು ನೀಡಲು ಅಧಿಕಾರಿಗಳು ನಿರಾಕರಿಸಿದರೆ ಅಥವಾ ಅಲಕ್ಷ್ಯ ವಹಿಸಿದರೆ ಆಯೋಗ ದಂಡ ವಿಧಿಸಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಿಯಾಗಿ ಮಾಹಿತಿ ನೀಡದ 287 ಅಧಿಕಾರಿಗಳಿಗೆ  28,70,000 ರೂ ದಂಡ ವಿಧಿಸಲಾಗಿದ್ದು ಈ ಪೈಕಿ 69 ಅಧಿಕಾರಿಗಳು 6,90,000 ರೂ. ದಂಡ ಪಾವತಿಸಿದ್ದಾರೆ ಎಂದು ಮಾಹಿತಿ ಆಯುಕ್ತರಾದ ರಾಜಶೇಖರ.ಎಸ್ ತಿಳಿಸಿದ್ದಾರೆ.

ಇದನ್ನೂ ಓದಿ:ಸಾಧಾರಣ ಗುರಿ​ ನೀಡಿದ ಪಾಕಿಸ್ತಾನ.. ಸೂರ್ಯಕುಮಾರ್ ಪಡೆಗೆ ಎಷ್ಟು ಟಾರ್ಗೆಟ್..?

Advertisment

RTI_1

ಮಾಹಿತಿ ಹಕ್ಕು ಅರ್ಜಿ ವಿಲೇವಾರಿ ಮಾಡದಿದ್ದರೆ ಆಗುವ ತೊಂದರೆಗಳೇನು?

ಪತ್ರಿಕಾಗೋಷ್ಠಿಗೂ ಮುನ್ನ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ಪ್ರಥಮ ಮಾಹಿತಿ ಹಕ್ಕು ಅಧಿಕಾರಿ ಮತ್ತು ಮೇಲ್ಮನವಿ ಮಾಹಿತಿ ಹಕ್ಕು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಸ್ವಿಕಾರವಾಗುವ ಅರ್ಜಿಗಳ ವಿಲೆವಾರಿ ಮಾಡುವ ಪ್ರಕ್ರಿಯೆಯನ್ನು ನಿದರ್ಶನಗಳ ಸಹಿತವಾಗಿ ವಿವರಿಸಲಾಯಿತು. ಮಾಹಿತಿ ಹಕ್ಕು ಅರ್ಜಿಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕು. ಮಾಡದೆ ಇದ್ದರೆ ಸೇವಾ ಅವಧಿಯಲ್ಲಿ ಆಗುವ ತೊಂದರೆಗಳೇನು, ಪಿಂಚಣಿಯ ಮೇಲೆ ಆಗುವ ಪರಿಣಾಮಗಳೇನು, ದಂಡ ಹೇಗೆ ಬೀಳುತ್ತದೆ ಎಂದು ತಿಳಿಸಿಕೊಟ್ಟು ಆಯೋಗದ ವೆಬ್ ಸೈಟ್​ನಲ್ಲಿರುವ ಮಾಹಿತಿ ಹಕ್ಕು ಕಾಯ್ದೆಯ ಕುರಿತ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಂಡು ಅಧ್ಯಯನ ಮಾಡುವಂತೆ ಹಾಗೂ  ಅರ್ಜಿದಾರರಿಗೆ ಮಾಹಿತಿಯನ್ನು ಸಕಾಲಕ್ಕೆ ನಿಯಮಾವಳಿ ರೀತ್ಯ ನೀಡುವ ಮೂಲಕ ಜನಪರ ಆಡಳಿತ ನೀಡಲು ಆಡಳಿತ ವರ್ಗ ಮುಂದಾಗುವಂತೆ ಮಾಹಿತಿ ಆಯುಕ್ತರು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವೈ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore Kannada News
Advertisment
Advertisment
Advertisment