/newsfirstlive-kannada/media/media_files/2026/03/09/shoaib-akhtar-3-2026-03-09-17-29-18.jpg)
ಉಡುಪಿ: 2026ರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೂ, ನಮ್ಮ ಕರಾವಳಿಯ ಉಡುಪಿಗೂ ಬಿಡಿಸಲಾರದ ನಂಟಿದೆ. ವಿಶ್ವ ಗೆದ್ದ ಕ್ಯಾಪ್ಟನ್ ಬೇರಾರೂ ಅಲ್ಲ, ಅವರು ನಮ್ಮ ಉಡುಪಿಯ ಅಳಿಯ. ಜೊತೆಗೆ ಕಾಪು ಹೊಸ ಮಾರಿಗುಡಿ ಅಮ್ಮನವರ ಪರಮ ಭಕ್ತ!
ಕರಾವಳಿಯ ಅಳಿಯ ಸೂರ್ಯ
ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ (Devisha Shetty). ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನವರಾದ ದೇವಿಶಾ ಅವರ ಕುಟುಂಬ ಸದ್ಯ ಮುಂಬೈನಲ್ಲಿ ನೆಲೆಸಿದೆ. ಈ ಕುಟುಂಬ ಕಾಪು ಹೊಸ ಭಾರಿಗುಡಿ (ಮಾರಿಗುಡಿ) ಅಮ್ಮನವರ ಪರಮ ಭಕ್ತರು. ಪತ್ನಿಯ ಊರಿನ ಮೇಲಿನ ಪ್ರೀತಿ ಹಾಗೂ ದೇವಿಯ ಮೇಲಿನ ಅಪಾರ ಭಕ್ತಿಯಿಂದ ಸೂರ್ಯಕುಮಾರ್ ಯಾದವ್ ದಂಪತಿ ಈವರೆಗೆ ಎರಡು ಬಾರಿ ಕಾಪು ಮಾರಿಗುಡಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಅರ್ಜಿ ಕೋರ್ಟ್ ನಲ್ಲಿ ವಜಾ: ಮುತ್ಯಾ, ಭಕ್ತರಿಗೆ ಭಾರಿ ಅಘಾತ
/filters:format(webp)/newsfirstlive-kannada/media/media_files/2026/03/09/shoaib-akhtar-2-2026-03-09-17-31-16.jpg)
9 ದಿನದಲ್ಲಿ ಸತ್ಯವಾಯ್ತು ಅರ್ಚಕರ ನುಡಿ!
ಇದು ಕಾಪು ಮಾರಿಯಮ್ಮನ ಪವಾಡ ಎಂದೇ ಹೇಳಬಹುದು. 2024ರ ಜುಲೈ 9ರಂದು ಸೂರ್ಯಕುಮಾರ್ ಯಾದವ್ ಅವರು ಪತ್ನಿ ಸಮೇತರಾಗಿ ಕಾಪು ಮಾರಿಗುಡಿಗೆ ಭೇಟಿ ನೀಡಿ ಅಮ್ಮನವರ ಆಶೀರ್ವಾದ ಪಡೆದಿದ್ದರು. ಈ ವೇಳೆ ಪೂಜೆ ಸಲ್ಲಿಸಿದ ದೇಗುಲದ ಅರ್ಚಕರು, "ನೀವು ಶೀಘ್ರದಲ್ಲೇ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಲಿ" ಎಂದು ಶುಭಹಾರೈಸಿ ಪ್ರಸಾದ ನೀಡಿದ್ದರು.
ಅಚ್ಚರಿ ಎಂದರೆ, ದೇವಿಯ ಸನ್ನಿಧಿಯಲ್ಲಿ ಅರ್ಚಕರು ಆಡಿದ ಈ ನುಡಿ ಕೇವಲ 9 ದಿನಗಳಲ್ಲಿ ಸತ್ಯವಾಯಿತು! ಜುಲೈ 18ರಂದು ಬಿಸಿಸಿಐ ಸೂರ್ಯಕುಮಾರ್ ಅವರನ್ನು ಭಾರತೀಯ ಟಿ20 ತಂಡದ ನಾಯಕರನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿತ್ತು.
ದೇಗುಲಕ್ಕೆ ಕಂಬ ದಾನ ನೀಡಿದ್ದ ಸ್ಕೈ ದಂಪತಿ
ದೇವಿಶಾ ಕುಟುಂಬದ ಆರಾಧ್ಯಕ್ಷೇತ್ರವಾಗಿರುವ ಕಾಪು ಹೊಸ ಮಾರಿಗುಡಿಯನ್ನು ಇತ್ತೀಚೆಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿ ಮರುನಿರ್ಮಾಣ ಮಾಡಲಾಗಿದೆ. ವಿಶೇಷ ಎಂದರೆ, ಹೊಸ ಮಾರಿಗುಡಿ ನಿರ್ಮಾಣದ ವೇಳೆ ಸೂರ್ಯಕುಮಾರ್ ಯಾದವ್ ಹಾಗೂ ದೇವಿಶಾ ದಂಪತಿ ದೇಗುಲಕ್ಕೆ ಸುಂದರವಾದ ಕಂಬವೊಂದನ್ನು (Pillar) ಕೊಡುಗೆಯಾಗಿ ದಾನ ನೀಡಿದ್ದಾರೆ.
ವಿಶ್ವಕಪ್ ಗೆದ್ದ ಹಿನ್ನೆಲೆ 'ತುಲಾಭಾರ' ಹರಕೆ ಸಂಕಲ್ಪ
ಕ್ಯಾಪ್ಟನ್ ಆದ ಬಳಿಕ ಸೂರ್ಯಕುಮಾರ್ ಯಾದವ್ ಅವರು ಟಿ20 ವಿಶ್ವಕಪ್ ಗೆದ್ದು ಬರಲಿ ಎಂದು ದೇಗುಲದ ಪ್ರಮುಖರು ದೇವಿಯ ಮುಂದೆ ಸಂಕಲ್ಪ ಮಾಡಿದ್ದರು. ಇದೀಗ ಭಾರತ ವಿಶ್ವಕಪ್ ಗೆದ್ದಿರುವುದರಿಂದ, ಮುಂದಿನ ದಿನಗಳಲ್ಲಿ ಸೂರ್ಯಕುಮಾರ್ ಯಾದವ್ ದಂಪತಿ ಕ್ಷೇತ್ರಕ್ಕೆ ಆಗಮಿಸಿದಾಗ ಅವರಿಗೆ 'ಬೆಲ್ಲ ಮತ್ತು ಸಕ್ಕರೆ ತುಲಾಭಾರ' ನಡೆಸುವ ಸಂಕಲ್ಪವನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರು ಹೊಂದಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ವಿನಯ್ ಗೆ ಕಪಾಳ ಮೋಕ್ಷ : ವಕೀಲರಿಂದ ಕೋರ್ಟ್ ಕಾರಿಡಾರ್ ನಲ್ಲಿ ಕಪಾಳ ಮೋಕ್ಷ
ಒಟ್ಟಿನಲ್ಲಿ, ಮೈದಾನದಲ್ಲಿ ಬ್ಯಾಟ್ ಬೀಸಿ ವಿಶ್ವಕಪ್ ಗೆದ್ದುಕೊಟ್ಟ ನಾಯಕನ ಬೆನ್ನಹಿಂದೆ ಕರಾವಳಿಯ ಆರಾಧ್ಯ ದೈವ ಕಾಪು ಮಾರಿಯಮ್ಮನ ಆಶೀರ್ವಾದವೂ ಇದೆ ಎಂಬುದು ಕರಾವಳಿಗರ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us