/newsfirstlive-kannada/media/media_files/2025/09/23/uk_lpg-2025-09-23-20-16-14.jpg)
ಉತ್ತರ ಕನ್ನಡ: ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿ ಮಲಗಿದ್ದ ಯುವತಿ ಒಬ್ಬಳು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಶಿರಸಿ ತಾಲೂಕಿನ ಮುರ್ಕಿನಕೊಡ್ಲಿನಲ್ಲಿ ನಡೆದಿದೆ.
ಶಿರಸಿಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದ ರಂಜನಾ ದೇವಾಡಿಗ ( 21 ) ಜೀವ ಕಳೆದುಕೊಂಡವರು. ನಾಗಪ್ಪ ಹಾಗೂ ನಾಗವೇಣಿ ದೇವಾಡಿಗ ದಂಪತಿಯ ಸಾಕು ಪುತ್ರಿ ಆಗಿದ್ದರು. ಮನೆಯಲ್ಲಿ ಮಧ್ಯಾಹ್ನ ಮಲಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತ ರಂಜನಾ ತಲೆನೋವಿನ ಕಾರಣ ಮಂಗಳವಾರ ಕಾಲೇಜಿಗೆ ರಜೆ ಹಾಕಿದ್ದಳು. ತಂದೆ ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದರು. ಹೀಗಾಗಿ ಊಟ ಮಾಡಿ ಮಲಗಿದ್ದ ರಂಜನಾ ಸಿಲಿಂಡರ್ ಸ್ಫೋಟವಾದಾಗ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದ್ದಾಳೆ. ಗುರುತೇ ಸಿಗಂತೆ ಆಗೋಗಿದೆ. ಸ್ಫೋಟದ ರಭಸಕ್ಕೆ ಮನೆ ಕೂಡ ಬಿರುಕು ಬಿಟ್ಟಿದ್ದು, ಅಡುಗೆ ಮನೆಯ ಪಕಾಸು, ಹಂಚು ತೀವ್ರತೆಗೆ ಹಾರಿ ಹೋಗಿದೆ. ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಓಡಿ ಬಂದು ಮನೆ ಬಾಗಿಲು ಒಡೆದು ಒಳಗೆ ನೋಡಿದಾಗ ದೇಹ ಗುರುತೇ ಸಿಗದೇ ರೀತಿಯಲ್ಲಿತ್ತು.
ಮಾಹಿತಿ ತಿಳಿದು ತಕ್ಷಣ ಅಗ್ನಿ ಶಾಮಕದವರು ಆಗಮಿಸಿದ್ದಾರೆ. ಆದರೆ ಅಷ್ಟರೊಳಗೆ ಯುವತಿ ಮೃತಪಟ್ಟದ್ದಳು. ಬಳಿಕ ಬೆಂಕಿ ನಂದಿಸಲಾಗಿದ್ದು, ಮನೆ ಸುಟ್ಟ ಪರಿಣಾಮ ಲಕ್ಷಾಂತರ ರೂಪಾಯಿ ಸಹ ನಷ್ಟವಾಗಿದೆ. ಇನ್ನು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್​ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇಟಗುಳಿ ಗ್ರಾಮ ಪಂಚಾಯತ ಸದಸ್ಯೆ ಗೀತಾ ಭೋವಿ ಸ್ಥಳದಲ್ಲೇ ಇದ್ದರು. ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ