/newsfirstlive-kannada/media/media_files/2025/08/07/uttarakhand_water-2025-08-07-09-31-38.jpg)
ದೇವಭೂಮಿಯ ಪುಟ್ಟ ಹಳ್ಳಿ ಹಿಮಚ್ಛಾಧಿತ ಭೂಮಿ ಧರಾಲಿ ಮೇಘಸ್ಫೋಟದಿಂದ ನರಕವಾಗಿ ಬದಲಾಗಿದೆ. ಗ್ರಾಮದಲ್ಲೀಗ ಸ್ಮಶಾನಮೌನ ಆವರಿಸಿದೆ. ಜೀವಕಳೆದುಕೊಂಡವರ ಸಂಖ್ಯೆ ಏರಿಕೆ ಆಗುತ್ತಿದೆ. ನೂರಾರು ಮಂದಿ ನಾಪತ್ತೆಯಾಗಿದ್ದು ಹುಡುಕಾಟ ಮುಂದುವರಿದಿದೆ.
ದೇವಭೂಮಿ ಸ್ವರ್ಗವೇ ಧರೆಯ ರೂಪದಲ್ಲಿ ಮೈದಳೆದಿರುವ ನೆಲೆ. ರೌದ್ರರೂಪ ತಾಳಿ ಉಕ್ಕಿ ಬಂದ ಜಲಪಾಶ ನರಕವನ್ನೇ ಸೃಷ್ಟಿಸಿದೆ. ಕ್ಷಣಾರ್ಧದಲ್ಲಿ ಮಧುರ ತಾಣ ಮಣ್ಣಿನಡಿ ಸಮಾಧಿಯಾಗಿದೆ. ಫಲಿತಾಂಶ ಸಾವು-ನೋವಿನ ದುರಂತಗಳು ನಡೆದಿವೆ. ಬದುಕು ಛಿದ್ರವಾಗಿದ್ದು ಅಳಿದುಳಿದವರಿಗಾಗಿ ಹುಡುಕಾಟ ಮುಂದುವರಿದಿದೆ.
ಉತ್ತರಕಾಶಿಯ ಧರಾಲಿ ಮೇಘಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ನಿನ್ನೆ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಜಲಪ್ರಳಯಕ್ಕೆ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ರಕ್ಷಣೆಗೆ ಬಂದಿದ್ದ 11 ಮಂದಿ ಸೈನಿಕರೂ ಸೇರಿದ್ದಾರೆ. ಸುಮಾರು 413 ಮಂದಿಯನ್ನು ರಕ್ಷಿಸಲಾಗಿದೆ. ರಜಪೂತ್ ರೈಫಲ್ಸ್ನ 150 ಸಿಬ್ಬಂದಿ, ಐಟಿಬಿಪಿಯ 100 ಸಿಬ್ಬಂದಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸೇರಿ 225 ಜನರ ರಕ್ಷಣಾ ತಂಡ ಕಾರ್ಯೋನ್ಮುಖ ಆಗಿದ್ದು ಎಡೆಬಿಡದೇ ಸುರಿಯುತ್ತಿರುವ ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ಪ್ರತಿಕೂಲ ಹವಾಮಾನ ಸುಗಮ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
200ಕ್ಕೂ ಹೆಚ್ಚು ಮಂದಿ ನೆರೆಪೀಡಿತ
ಮೇಘಸ್ಫೋಟ ಕೆಸರಿನ ಹೊಳೆ, ಭೂಕುಸಿತದಿಂದ ಮುಚ್ಚಿಹೋದ ಮನೆಗಳು, ರಸ್ತೆಗಳು. ಸದ್ಯ ಧರಾಲಿ ಗ್ರಾಮ ಬಾಹ್ಯ ಜಗತ್ತಿನ ಸಂಪರ್ಕ ಕಡಿದುಕೊಂಡಿದೆ. ಧರಾಲಿ ಗ್ರಾಮದ 200ಕ್ಕೂ ಹೆಚ್ಚು ಮಂದಿ ನೆರೆಪೀಡಿತ ಪ್ರದೇಶದಲ್ಲಿ ಸಿಲುಕಿದ್ದು ನಿರಂತರ ಮಳೆ, ಭೂಕುಸಿತದಿಂದ ಪ್ರವಾಹಪೀಡಿತ ಭಾಗಕ್ಕೆ ರಕ್ಷಣಾ ತಂಡಗಳು ಹೋಗುವುದು ಭಾರೀ ಸವಾಲಾಗಿದೆ.
ಇನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ಅಧಿಕಾರಿಗಳ ಜೊತೆ ವಿಪತ್ತು ನಿರ್ವಹಣಾ ಸಭೆ ನಡೆಸಿ ತುರ್ತು ಕ್ರಮಗಳ ಜೊತೆಗೆ ನಾಪತ್ತೆಯಾಗಿರುವವ ರಕ್ಷಣೆ ಕುರಿತು ಚರ್ಚಿಸಿದ್ದಾರೆ. ಧರಾಲಿ ಹಾಗೂ ಹಾರ್ಸಿಲ್ ಸೇರಿ ಪ್ರವಾಹಪೀಡಿತ ಭಾಗಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈ ಬೆನ್ನಲ್ಲೇ ಭಾರತೀಯ ವಾಯುಪಡೆಯ ಚಿನೋಕ್, MI-17, V5, ಚೀತಾ ವಿಮಾನಗಳು ಪರಿಹಾರ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಹೊತ್ತು ಆಗ್ರಾ ಹಾಗೂ ಚಂಡೀಗಢದಿಂದ ಹೊರಟು ಡೆಹ್ರಾಡೂನ್ ತಲುಪಿವೆ.
ಇದನ್ನೂ ಓದಿ:ಡಿ.ಕೆ ಶಿವಕುಮಾರ್ ಓಡಿಸಿದ್ದ ಬೈಕ್ ಮೇಲೆ ಭಾರೀ ದಂಡ.. ಟ್ರಾಫಿಕ್ ಪೊಲೀಸರು ಏನ್ ಮಾಡಿದ್ರು ಗೊತ್ತಾ?
ಕಿನ್ನೌರ್‌ನಲ್ಲಿ ಮೇಘಸ್ಫೋಟ..1,196 ಯಾತ್ರಿಕರ ರಕ್ಷಣೆ
ಪಕ್ಕದ ಹಿಮದ ನಾಡು ಹಿಮಾಚಲ ಪ್ರದೇಶದಲ್ಲೂ ಧಾರಾಕಾರ ಮಳೆ, ಭೂಕುಸಿತ ಮುಂದುವರಿದಿದೆ. ಕಿನ್ನೌರ್ ಜಿಲ್ಲೆಯಲ್ಲಿ ಮೇಘಸ್ಫೋಟ ಹಾಗೂ ಭಾರಿ ಮಳೆಯಲ್ಲಿ ಸಿಲುಕಿದ್ದ ಕೈಲಾಸ ಚಾರಣಕ್ಕೆ ತೆರಳುತ್ತಿದ್ದ 1,196 ಮಂದಿ ಯಾತ್ರಿಕರನ್ನು ರಕ್ಷಣಾ ಪಡೆಗಳು ರಕ್ಷಿಸಿವೆ.
ಚಾರಣ ಮಾರ್ಗದಲ್ಲಿದ್ದ ಎರಡು ತಾತ್ಕಾಲಿಕ ಸೇತುವೆಗಳು ಕೊಚ್ಚಿ ಹೋಗಿದ್ದರಿಂದ ಹಲವು ಪ್ರವಾಸಿಗರು ಸಿಲುಕಿಕೊಂಡಿದ್ದರು. ಎನ್ಡಿಆರ್ಎಫ್, ಐಟಿಬಿಪಿ ಜಂಟಿ ಕಾರ್ಯಾಚರಣೆ ಮೂಲಕ ಯಾತ್ರಿಕರನ್ನು ರಕ್ಷಿಸಿದ್ದಾರೆ. ಉತ್ತರಾಖಂಡ್ ಹಾಗೂ ಹಿಮಾಚಲಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿದ್ದು ಮತ್ತಷ್ಟು ಅನಾಹುತಗಳು ಆಗುವ ಆತಂಕ ಅಂತೂ ಇದ್ದೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ