/newsfirstlive-kannada/media/media_files/2025/10/15/kruthika_father-2025-10-15-19-15-03.jpg)
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಡೆರ್ಮೆಟಾಲಜಿಸ್ಟ್ ಆಗಿದ್ದ ಡಾ. ಕೃತಿಕಾರನ್ನು ಅವರ ಗಂಡನೇ ಮುಗಿಸಿರುವುದು ಎಫ್​ಎಸ್​ಎಲ್​ ವರದಿಯಿಂದ ಬಹಿರಂಗವಾಗಿದೆ. ಸದ್ಯ ವರದಿ ಬಹಿರಂಗವಾದ ಬೆನ್ನಲ್ಲೇ ಡಾ. ಕೃತಿಕಾ ಅವರ ತಂದೆ ಮುನಿರೆಡ್ಡಿ ಅವರು ತಮ್ಮ ಮನೆಯನ್ನು ಇಸ್ಕಾನ್​ ದೇವಾಲಯಕ್ಕೆ ದಾನ ಮಾಡಿದ್ದಾರೆ.
ಬೆಂಗಳೂರು ನಗರದ ಮಾರತಹಳ್ಳಿಯಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಅವರ ಕೊಲೆ ಪ್ರಕರಣದ ಎಫ್​ಎಸ್​ಎಲ್​ ವರದಿ ಇಂದು ಬಹಿರಂಗವಾಗಿತ್ತು. ಈ ವರದಿಯಲ್ಲಿ ಕೃತಿಕಾ ರೆಡ್ಡಿಯನ್ನು ಆಕೆಯ ಗಂಡ ಮಹೇಂದ್ರ ರೆಡ್ಡಿಯೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. 6 ತಿಂಗಳ ಬಳಿಕ ಈ ವರದಿ ಹೊರ ಬಿದ್ದಿದೆ. ಸದ್ಯ ಇದರಿಂದ ಮನನೊಂದಿದ್ದ ಅವರ ಕುಟುಂಬಸ್ಥರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಇವತ್ತು ಕೃತಿಕಾ ಕೊಲೆ ಆಗಿರುವುದು ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಅವರ ತಂದೆ ಮುನಿರೆಡ್ಡಿ ಅವರು ಮಗಳು ವಾಸವಿದ್ದ ಮನೆಯನ್ನು ಇಸ್ಕಾನ್ ದೇವಾಲಯಕ್ಕೆ ದಾನ ಮಾಡಿದ್ದಾರೆ. ಪದೇ ಪದೇ ಮಗಳ ನೆನಪು ಕಾಡುತ್ತದೆ ಎಂದು ಮುನಿರೆಡ್ಡಿ ಅವರು ಮನೆ ದಾನ ಮಾಡುವ ನಿರ್ಧಾರ ಮಾಡಿದ್ದಾರೆ.
ಡಾಕ್ಟರ್ ಕೃತಿಕಾ ಅವರ ತಂದೆ ಮುನಿರೆಡ್ಡಿ ಅವರು ನ್ಯೂಸ್​ಫಸ್ಟ್​ ಜೊತೆ ಮಾತನಾಡಿ, ಕೃತಿಕಾಳನ್ನು ಕಳೆದುಕೊಂಡ ಮೇಲೆ ನಾನಾಗಲಿ, ನನ್ನಶ್ರೀಮತಿಯಾಗಲಿ, ನನ್ನ ದೊಡ್ಡ ಮಗಳು ಆಗಲಿ ನೆಮ್ಮದಿಯಿಂದ ಇರೋಕೆ ಆಗುತ್ತಿಲ್ಲ. 28 ವರ್ಷದ ಕೃತಿಕಾ 10th ಅಲ್ಲಿ ಟಾಪರ್, ಪಿಯುಸಿ ಟಾಪರ್, ಮೆಡಿಸನ್ ಎಂಬಿಬಿಎಸ್​ ಟಾಪರ್, ಎಂಡಿ ಅಲ್ಲೂ ಟಾಪರ್ ಆಗಿದ್ದಳು. ರಾಜೀವ್ ಗಾಂಧಿ ಫೆಲೋಶಿಪ್​ನಲ್ಲಿ ನನ್ನ ಮಗಳು ಟಾಪರ್ ಆಗಿದ್ದಳು ಎಂದು ನೋವು ಹೊರ ಹಾಕಿದರು.
ಕೃತಿಕಾ 4 ಡಿಗ್ರಿಗಳನ್ನು ಕಂಪ್ಲೀಟ್ ಮಾಡಿ ಇನ್ನು 10 ದಿನಗಳಲ್ಲಿ ಸ್ವಂತ ಕ್ಲಿನಿಕ್ ಓಪನ್ ಮಾಡುತ್ತಿದ್ದಳು. ಮಗಳು ಅಷ್ಟೊಂದು ಬ್ರಿಲಿಯಂಟ್, ಹಾರ್ಡ್​ವರ್ಕಿಂಗ್ ಮಾಡುತ್ತಿದ್ದಳು. ಕಾಯಿಲೆ ಅಂತದೂ ಏನು ಇರಲಿಲ್ಲ. ಅದೆಲ್ಲ ಸೃಷ್ಟಿ. ಹುಡುಗನು ಡಾಕ್ಟರ್ ಆಗಿರಲಿ ಎಂದು ಆಯ್ಕೆ ಮಾಡಿ ಮದುವೆ ಮಾಡಿದ್ದೇವು. ಗಂಡ ಏನು ಮಾಡಿದರೂ ಯಾವತ್ತೂ ಮಗಳು ನನ್ನ ಬಳಿ ಹೇಳಿಕೊಳ್ಳಲಿಲ್ಲ. ನಮಗೆ ನೋವು ಆಗಬಾರದು ಎಂದು ಏನನ್ನು ಹೇಳಿಕೊಂಡಿಲ್ಲ ಎಂದು ಮುನಿರೆಡ್ಡಿ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ