/newsfirstlive-kannada/media/media_files/2026/02/26/mallikarjuna-mutya-1-2026-02-26-14-04-10.jpg)
ಯಾದಗಿರಿ: ತಮ್ಮನ್ನು ತಾವು ಪವಾಡ ಪುರುಷ, ದೇವರ ಸ್ವರೂಪ ಎಂದು ಬಿಂಬಿಸಿಕೊಂಡು ಅಪಾರವಾದ ಭಕ್ತರ ಹೊಂದಿದ್ದ ಯಾದಗಿರಿ ಜಿಲ್ಲೆಯ ಮಲ್ಲಿಕಾರ್ಜುನ ಮುತ್ಯಾ ಇದೀಗ ‘ಪೋಕ್ಸೋ’ (POCSO) ಪ್ರಕರಣದಲ್ಲಿ ಸಿಲುಕಿದ್ದಾರೆ.
ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸಿದ ಆರೋಪದ ಮೇಲೆ ಮುತ್ಯಾ ವಿರುದ್ಧ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಹಾಗೂ ಬಿಎನ್ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಮುತ್ಯಾ ಪರಾರಿಯಾಗಿದ್ದು, ಪೊಲೀಸರು ಮಹಲ್ ರೋಜಾ ಮಠಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ.
ಮಲ್ಲಿಕಾರ್ಜುನ ಮುತ್ಯಾ ಯಾರು?
ಕೇವಲ 25 ವಯಸ್ಸಿನ ಮಲ್ಲಿಕಾರ್ಜುನ ಮುತ್ಯಾನನ್ನು ಯಾದಗಿರಿ, ಕಲಬುರಗಿ, ವಿಜಯಪುರ ಸೇರಿದಂತೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಲಕ್ಷಾಂತರ ಭಕ್ತರು ‘ದೇವರು’ ಎಂದೇ ನಂಬುತ್ತಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಮಹಲ್ ರೋಜಾದ ಚಾಂಗದೆವ್ ಮಠದ ಪೀಠಾಧಿಪತಿಯಾಗಿರುವ ಈತನಿಗೆ ದೊಡ್ಡ ಭಕ್ತ ವರ್ಗವೇ ಇದೆ. ಈತನ ತಂದೆ ಅಲೈ ದೇವರು ಭಕ್ತರಿಗೆ ಪ್ರವಚನ ನೀಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಅಲೈ ದೇವರ ಹ*ತ್ಯೆಯಾಗಿತ್ತು. ತಂದೆಯ ಹ*ತ್ಯೆ ಬಳಿಕ ಮಠದ ಪೀಠಾಧಿಪತಿಯಾದ ಮಲ್ಲಿಕಾರ್ಜುನ ಮುತ್ಯಾ, ಭಕ್ತರ ಮುಖ ನೋಡುತ್ತಲೇ ಅವರ ಅಂತರಂಗದ ಮಾತು ಹೇಳುತ್ತಾನೆ ಎನ್ನಲಾಗಿದೆ. ಆತನ ಮಾತು ಸತ್ಯವಾಗುತ್ತದೆ ಎಂಬುದು ಭಕ್ತರ ನಂಬಿಕೆ.
ಇದನ್ನೂ ಓದಿ:ದೇವರಕೊಂಡ ಮಾತಿಗೆ ನಾಚಿ ನೀರಾದ ರಶ್ಮಿಕಾ ಮಂದಣ್ಣ -ವಿಡಿಯೋ ವೈರಲ್
/filters:format(webp)/newsfirstlive-kannada/media/media_files/2026/02/26/mallikarjuna-mutya-2026-02-26-14-05-17.jpg)
ಮಠಕ್ಕೆ ನಿತ್ಯವೂ ಸಾವಿರಾರು ಭಕ್ತರು ಹರಿದು ಬರುತ್ತಾರೆ. ರಾಜಕಾರಣಿಗಳು, ಜನಪ್ರತಿನಿಧಿಗಳು ಕೂಡ ಆಶೀರ್ವಾದ ಪಡೆದು ಹೋಗುತ್ತಿದ್ದರು. ದೂರದಿಂದ ಬಂದ ಭಕ್ತರಿಗೆ ನಿತ್ಯವೂ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಮುತ್ಯಾನ ಕಾರಿನ ಹಿಂದೆ ಹತ್ತಾರು ಕಾರುಗಳ ಕಾನ್ವಾಯ್ ಇರುತ್ತಿತ್ತು. ದಿಢೀರನೆ ಕಾರು ಇಳಿದು ಭಕ್ತರ ಮನೆಯತ್ತ ಮುತ್ಯಾ ಓಡುತ್ತಿದ್ದರೆ, ಆತನ ಹಿಂದೆ ಜನರ ಹಿಂಡೇ ಓಡೋಡಿ ಹೋಗುತ್ತಿತ್ತು. ಇಂತಹ ಹಲವು ವಿಡಿಯೋಗಳು ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿದ್ದವು.
ವೈರಲ್ ವಿಡಿಯೋ ಮತ್ತು ಪೋಕ್ಸೋ ಕೇಸ್
ಇತ್ತೀಚೆಗೆ ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಮುತ್ಯಾ ಇರುವ ವಿಡಿಯೋವೊಂದು ವೈರಲ್ ಆಗಿತ್ತು. ಬಾಲಕಿಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಸ್ಪರ್ಶಿಸಿರುವ ಆರೋಪ ಕೇಳಿಬಂದು, ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಪರಿಶೀಲನೆ ನಡೆಸುವಂತೆ ಯಾದಗಿರಿ ಡಿಸಿಗೆ ಸೂಚನೆ ನೀಡಿತ್ತು. ಯಾದಗಿರಿ ಡಿಸಿ ಅಧ್ಯಕ್ಷತೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಮನ್ವಯತೆ ಸಭೆ ನಡೆಸಿ, ವೀಡಿಯೋ ಪರಿಶೀಲಿಸಿ ಸೂಕ್ತ ತನಿಖೆ ನಡೆಸಲು ನಿರ್ದೇಶನ ನೀಡಲಾಗಿತ್ತು. ಇದರ ಬೆನ್ನಲ್ಲೇ ಗೋಗಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಡಿಯೋ ಹಿಂದಿನ ಅಸಲಿ ರಹಸ್ಯ ಬಟಾಬಯಲು
ಪೊಲೀಸರ ತನಿಖೆ ವೇಳೆ ವಿಡಿಯೋ ಕುರಿತಾದ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಆಂಧ್ರಪ್ರದೇಶ ಮೂಲದ 8 ಜನರ ಕುಟುಂಬವೊಂದು ಫೆಬ್ರವರಿ 19ರಂದು ಬಾಲಕಿಯ ಚಿಕ್ಕಮ್ಮಳ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿತ್ತು. ಈ ವೇಳೆ ಪೋಷಕರ ಎದುರೇ 7 ವರ್ಷದ ಆ ಬಾಲಕಿ ಜೊತೆ ಮುತ್ಯಾ ಸಲುಗೆಯಿಂದ ವರ್ತಿಸಿದ್ದ. ಅಚ್ಚರಿ ಎಂದರೆ, ಆ ವೀಡಿಯೋವನ್ನು ಸ್ವತಃ ಬಾಲಕಿಯ ಪೋಷಕರೇ ಚಿತ್ರೀಕರಣ ಮಾಡಿಕೊಂಡಿದ್ದರು! ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಾಕಿದರೆ ಹೆಚ್ಚಿನ ಲೈಕ್ಸ್ ಮತ್ತು ವ್ಯೂವ್ಸ್ ಬರುತ್ತವೆ ಎಂಬ ಕಾರಣಕ್ಕೆ ತಾವೇ ವೀಡಿಯೋ ಮಾಡಿದ್ದಾಗಿ ಪೋಷಕರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಪರ-ವಿರೋಧ ಚರ್ಚೆ
- ಈ ಪ್ರಕರಣ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ವಲಯದಲ್ಲಿ ಮುತ್ಯಾನ ಪರ ಮತ್ತು ವಿರೋಧದ ಚರ್ಚೆಗಳು ಜೋರಾಗಿವೆ.
- ಬಾಲಕಿ ಜೊತೆ ಮುತ್ಯಾ ಅಸಭ್ಯವಾಗಿ ವರ್ತಿಸಿದ್ದಾನೆ
- ಬಾಲಕಿಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಸ್ಪರ್ಶ ಮಾಡಿದ್ದಾನೆ
- ಕಾನೂನು ಉಲ್ಲಂಘನೆಯಾಗಿದ್ದು, ಮುತ್ಯಾ ವಿರುದ್ಧ ಕಠಿಣ ಕ್ರಮ ಆಗಲೇಬೇಕು
- ಮುತ್ಯಾ ಬೇಕಂತಲೇ ಈ ರೀತಿ ವಿಕೃತವಾಗಿ ವರ್ತಿಸಿದ್ದಾನೆ
ಮುತ್ಯಾ ಪರ ವಾದ
- ಮುತ್ಯಾ ಎಲ್ಲಾ ಭಕ್ತರ ಜೊತೆಗೂ, ಮಕ್ಕಳ ಜೊತೆಗೂ ಹೀಗೆಯೇ ಪ್ರೀತಿಯಿಂದ ವರ್ತಿಸುತ್ತಾನೆ
- ಸ್ವಚ್ಛ ಮನಸ್ಸಿನಿಂದ ನೋಡಿದರೆ ಅದರಲ್ಲಿ ಯಾವುದೇ ತಪ್ಪು ಕಾಣಿಸುವುದಿಲ್ಲ
- ಮುತ್ಯಾ ಯಾವುದೇ ತಪ್ಪು ಮಾಡಿಲ್ಲ. ಆತನದ್ದು ಮಗುವಿನಂತಹ ಮನಸ್ಸು
- ಮುತ್ಯಾನ ಜನಪ್ರಿಯತೆ ಸಹಿಸದೆ ಆತನನ್ನು ಸಿಕ್ಕಿಹಾಕಿಸಲು ಮಾಡಿರುವ ಷಡ್ಯಂತ್ರವಿದು
ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಮಲ್ಲಿಕಾರ್ಜುನ ಮುತ್ಯಾನ ಪತ್ತೆಗಾಗಿ ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us