/newsfirstlive-kannada/media/media_files/2025/08/21/robot-2025-08-21-13-17-46.jpg)
ವಿಶ್ವದಲ್ಲಿ ವಿಜ್ಞಾನ ಅದ್ಭುತ ಪ್ರಗತಿ ಸಾಧಿಸಿ, ದೇವರೇ ಅಚ್ಚರಿ ಪಡುವಷ್ಟು ಶಕ್ತಿಶಾಲಿಯಾಗಿ ಬೆಳೆದಿದೆ. ಮೊನ್ನೆ ಮೊನ್ನೆಯಷ್ಟೇ ಗಗನಯಾನಿಗಳು ಅಂತರಿಕ್ಷದಲ್ಲಿ ಬೀಜ ಮೊಳಕೆಯೊಡೆಯುವುದನ್ನು ಪ್ರಯೋಗ ಮಾಡಿದ್ದು ಗೊತ್ತೇ ಇದೆ. ಇದೀಗ ಚೀನಾದ ವಿಜ್ಞಾನಿಗಳು ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದಾರೆ.
ಪುರುಷನ ಸಂಪರ್ಕವಿಲ್ಲದೇ ಐವಿಎಫ್ (In Vitro Fertilization) ಮೂಲಕ ಸಂತಾನೋತ್ಪತ್ತಿ ಸಾಧಿಸಿದ ವಿಜ್ಞಾನಿಗಳಿಗೆ ಈಗ ತಾಯಂದಿರ ಅಗತ್ಯವೇ ಇಲ್ಲದೇ ಮಗು ಹುಟ್ಟಿಸಲು ಮುಂದಾಗಿದ್ದಾರೆ. ಇನ್ನು ಮುಂದೆ ತಾಯಂದಿರಿಂದ ಅಲ್ಲ, ಬದಲಾಗಿ ಯಂತ್ರಗಳಿಂದ ಜನಿಸುವ ಜಗತ್ತು ಕಲ್ಪಿಸಿಕೊಳ್ಳಿ. ಚೀನಿ ವಿಜ್ಞಾನಿಗಳು ಮಹಿಳೆಯ ಸಹಾಯವಿಲ್ಲದೇ ಗರ್ಭಧಾರಣೆಯ ರೋಬೋಟ್ ಆವಿಷ್ಕಾರಕ್ಕೆ ಮುಂದಾಗಿದ್ದಾರೆ.
ಹೊಟ್ಟೆಯೊಳಗೆ ಗರ್ಭಧಾರಣೆಗೆ ತಂತ್ರಜ್ಞಾನ
ವಿಜ್ಞಾನಿ ಡಾ.ಜಾಂಗ್ ಕಿಫೆಂಗ್ ನೇತೃತ್ವದ ಗುವಾಂಗ್ಝೌ ಮೂಲದ ಕೈವಾ ಟೆಕ್ನಾಲಜಿ ಇಂಥದ್ದೊಂದು ಯೋಜನೆಗೆ ಕೈ ಹಾಕಿದೆ. ಹುಮನಾಯ್ಡ್ ರೋಬೋಟ್ನ ಹೊಟ್ಟೆಯೊಳಗೆ ಗರ್ಭಧಾರಣೆಗೆ ತಂತ್ರಜ್ಞಾನ ಸಿದ್ಧವಾಗುತ್ತಿದೆ ಎಂಬ ಮಾಹಿತಿಯನ್ನು ವಿಜ್ಞಾನಿ ಡಾ.ಜಾಂಗ್ ನೀಡಿದ್ದಾರೆ.
ರೊಬೊಟ್ನ ಕೃತಕ ಗರ್ಭದಲ್ಲಿ ಕೃತಕ ಆಮ್ನಿಯೊಟಿಕ್ ದ್ರವದಲ್ಲಿ ಭ್ರೂಣ ಸಿದ್ಧವಾಗಲಿದೆ. ರೋಬೋಟ್ ನ ಹೊಟ್ಟೆಯಲ್ಲಿ ಗರ್ಭಾಶಯದಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದು ಭ್ರೂಣವನ್ನು ಬಾಹ್ಯ ಆಘಾತಗಳಿಂದ ರಕ್ಷಿಸುವ ದ್ರವವಾಗಿದೆ. ಭ್ರೂಣಕ್ಕೆ ಸ್ಥಿರ ತಾಪಮಾನ ನೀಡಿ, ಅದರ ಬೆಳವಣಿಗೆಗೂ ಸಹಾಯ ಮಾಡುತ್ತದೆ. ರೊಬೊಟ್ ಗರ್ಭಾಶಯಕ್ಕೆ ಪೋಷಕಾಂಶ ಮತ್ತು ಆಮ್ಲಜನಕವನ್ನು ಹೊಕ್ಕುಳಬಳ್ಳಿಯಂತೆ ಕೊಳವೆಯ ಮೂಲಕ ಪೂರೈಸಲಾಗುತ್ತದೆ ಅಂತೆ.
2017ರಲ್ಲಿ ಅಮೆರಿಕದ ವಿಜ್ಞಾನಿಗಳು ದ್ರವದಿಂದ ತುಂಬಿದ್ದ ಬಯೋಬ್ಯಾಗ್ನಲ್ಲಿ ಕುರಿಮರಿಗಳನ್ನ ಜೀವಂತವಾಗಿ ಇಟ್ಟಿದ್ದರು. ಅದರ ಮುಂದುವರೆದ ಭಾಗವೇ ಮಗು ಹೆರುವ ರೋಬೋಟ್.
ಇದನ್ನೂ ಓದಿ: ಸಮಾಜವಾದದ ಆಲದ ಮರ CM ಸಿದ್ದರಾಮಯ್ಯ.. ನನ್ನ ಸನ್ಮಾನ, ಗೌರವಗಳೆಲ್ಲ ಅವರಿಗೆ ಅರ್ಪಣೆ: ಕೆ.ವಿ ಪ್ರಭಾಕರ್
2026ಕ್ಕೆ ಮೂಲ ಮಾದರಿ ರಿಲೀಸ್
ಬೀಜಿಂಗ್ನಲ್ಲಿ ನಡೆದ ವಿಶ್ವ ರೋಬೋಟ್ನ ಸಮ್ಮೇಳನದಲ್ಲಿ ಮಾಹಿತಿ ನೀಡಿರುವ ವಿಜ್ಞಾನಿ ಡಾ.ಜಾಂಗ್, 2026ರ ವೇಳೆಗೆ ಮೂಲ ಮಾದರಿ ಬಿಡುಗಡೆ ಮಾಡುತ್ತೇವೆ ಅಂತ ಘೋಷಿಸಿದ್ದಾರೆ. ಇದಕ್ಕೆ ಬೆಲೆಯೂ ನಿಗದಿ ಮಾಡಿದ್ದಾರೆ. ಇದರ ಬೆಲೆ 100,000 ಯುವಾನ್ ಅಂದರೆ 12 ಲಕ್ಷ ರೂಪಾಯಿ ಇರಲಿದೆ.
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಇದೀಗ ಜನಸಂಖ್ಯೆ ಕುಗ್ಗುವ ಆತಂಕವೂ ಎದುರಾಗಿದೆ. ಚೀನಾದಲ್ಲಿ ಇತ್ತೀಚೆಗೆ ಬಂಜೆತನದ ಪ್ರಮಾಣವೂ ಹೆಚ್ಚುತ್ತಿದೆ. ಕೃತಕ ಗರ್ಭಾಶಯ ತಂತ್ರಜ್ಞಾನ ಬಂಜೆತನ ಹೊಂದಿರುವ ದಂಪತಿಗೆ ಭರವಸೆ ಹುಟ್ಟಿಸುತ್ತಿದೆ. ಇದು ಸಂತಾನೋತ್ಪತ್ತಿಗೆ ಸಹಾಯ ಮಾಡಬಹುದಾದರೂ ಈ ತಂತ್ರಜ್ಞಾನ ನೈತಿಕ ಪರಿಣಾಮದ ಕುರಿತು ಚರ್ಚೆ ಹುಟ್ಟು ಹಾಕಿದೆ. ಭ್ರೂಣ-ತಾಯಿಯ ಸಂಬಂಧಗಳು, ಅದರಿಂದ ಜನಿಸುವ ಮಕ್ಕಳ ಮನೋವಿಜ್ಞಾನದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಶೇಷ ವರದಿ:ವಿಶ್ವನಾಥ್ ಜಿ.ನ್ಯೂಸ್ ಫಸ್ಟ್, ಸೀನಿಯರ್ ಕಾಪಿ ಎಡಿಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ