/newsfirstlive-kannada/media/post_attachments/wp-content/uploads/2024/10/BARACK-OBAMA-WITH-KAMALA.jpg)
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಕಳೆದ ಹಲವು ತಿಂಗಳುಗಳಿಂದ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ನಾನಾ, ನೀನಾ ಅನ್ನೋ ಯುದ್ಧವೊಂದು ಈಗ ಉಭಯ ಪಕ್ಷಗಳಲ್ಲಿ ಜಾರಿಯಲ್ಲಿದೆ. ಇದರ ಬೆನ್ನಲ್ಲೆ ಈಗ ಕಮಲಾ ಹ್ಯಾರಿಸ್ಗೆ ಹೊಸದೊಂದು ಬಲ ಸಿಕ್ಕಂತಾಗಿದೆ.
ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಇದೇ ಮೊದಲ ಬಾರಿಗೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಪತ್ನಿ ಮಿಚೆಲ್ ಒಬಾಮಾ ಜೊತೆ ಪ್ರಚಾರ ಮಾಡಲಿದ್ದಾರೆ. ಮುಂದಿನ ವಾರ ಎರಡು ಪ್ರತ್ಯೇಕ ಸಭೆಗಳಲ್ಲಿ ಈ ಜೋಡಿ ಪ್ರಚಾರದ ಕಣಕ್ಕೆ ಇಳಿಯಲಿದೆ.
ಇದನ್ನೂ ಓದಿ:ಹಮಾಸ್ ಮುಖ್ಯಸ್ಥ ಸಿನ್ವರ್ನನ್ನು ಹೊಡೆದುರುಳಿಸಿದ ಇಸ್ರೇಲ್; ಯಾರು ಈ ಯಾಹ್ಯಾ ಸಿನ್ವರ್?
ಡೆಮಾಕ್ರಟಿಕ್ ಪಕ್ಷದಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಪತ್ನಿ ಇಂದಿಗೂ ಕೂಡ ಅತ್ಯಂತ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದಾರೆ. ಈ ಜೋಡಿ ಅಖಾಡಕ್ಕೆ ಇಳಿಯುವುದರಿಂದ ಡೆಮಾಕ್ರಟಿಕ್ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದವರ ವೋಟುಗಳು ಪಕ್ಕಾ ಆಗಲಿರುವ ಜೊತೆ ಜೊತೆಗೆ ಎಲ್ಲಿ ಈ ಪಕ್ಷದ ವೋಟುಗಳು ಕಡಿಮೆ ಬರುತ್ತವಿಯೋ ಅಲ್ಲಿಯೂ ಕೂಡ ಧನಾತ್ಮಕ ಪರಿಣಾಮ ಬೀರಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ಇದನ್ನೂ ಓದಿ:ಗೆದ್ದ ಮಗಳ ತಬ್ಬಿ ಕಣ್ಣೀರು ಹಾಕಿದ ಅಬುಧಾಬಿ ರಾಜಕುಮಾರ; ತಂದೆ ಮಮತೆ ಕಂಡು ಭಾವುಕರಾದ ಜನ
ಈ ಚುನಾವಣೆಯಲ್ಲಿ ಮಿಚೆಲ್ ಒಬಾಮಾ ಮೊದಲ ಬಾರಿಗೆ ಕ್ಯಾಂಪೇನ್ಗೆ ಇಳಿದಿದ್ದಾರೆ. ಅಕ್ಟೋಬರ್ 26 ಶನಿವಾರದಂದು ಮಿಚಿಗನ್ನಲ್ಲಿ ಮಿಚೆಲ್ ಒಬಾಮಾ ಕಮಲಾ ಹ್ಯಾರಿಸ್ ಪರ ಪ್ರಚಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಅಮೆರಿಕಾದ ಮಾಜಿ ಪ್ರಥಮ ಮಹಿಳೆ ಈ ಹಿಂದೆ ಚಿಕ್ಯಾಗೋದಲ್ಲಿ ನಡೆದಿದ್ದ ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್ನಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಗುಡುಗಿದ್ದರು. ಅವರೊಬ್ಬರು ಭಯದ ವ್ಯಾಪಾರಿಯೆಂದೇ ಪಂಚ್ ಕೊಟ್ಟಿದ್ದರು. ಇಂತಹ ಮೊನಚು ಮಾತಿನ ಕಲೆ ಹೊಂದಿರುವ ಮಿಚೆಲ್ ಒಬಾಮಾ ಈಗ ಮಿಚಿಗನ್ನಲ್ಲಿ ಕಮಲಾ ಹ್ಯಾರಿಸ್ ಪರ ಪ್ರಚಾರಕ್ಕೆ ನಿಂತಿರುವುದು ಡೆಮಾಕ್ರಟಿಕ್ ಪಕ್ಷಕ್ಕೆ ಮತ್ತೊಂದು ಬಲ ಸಿಕ್ಕಂತಾಗಿದೆ.
ಮುಂದಿನ ಗುರುವಾರ ಜಾರ್ಜಿಯಾದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕಮಲಾ ಹ್ಯಾರಿಸ್ ಪರ ಪ್ರಚಾರ ನಡೆಸಲಿದ್ದಾರೆ. ಈ ಹಿಂದೆ ಮಾಡಿದ ಒಂದು ಪ್ರಚಾರದಲ್ಲಿ ಬರಾಕ್ ಒಬಾಮಾ ಒಂದಿಷ್ಟು ಟೀಕೆಗಳನ್ನು ಮಾಡಿದ್ದರು. ಕೆಲವು ಕಪ್ಪು ಪುರುಷರು ಒಬ್ಬ ಮಹಿಳೆಯನ್ನು ಈ ದೇಶದ ಅಧ್ಯಕ್ಷೆಯನ್ನಾಗಿ ನೋಡಲು ಇಷ್ಟಪಡುತ್ತಿಲ್ಲ ಎಂಬ ಟೀಕೆಗಳನ್ನು ಮಾಡಿದ್ದರು. ಇದು ಡೆಮಾಕ್ರಟಿಕ್ ಪಕ್ಷದ
ನಿಷ್ಠಾವಂತ ಮತದಾರರ ಮೇಲೆ ಋಣಾತ್ಮಕ ಪರಿಣಾಮ ಬೀರಿತ್ತು ಎಂದು ಹೇಳಲಾಗುತ್ತಿದೆ. ಈ ಹಿಂದೆ 2008ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ವೇಳೆ ಕಮಲಾ ಹ್ಯಾರಿಸ್ ಬರಾಕ್ ಒಬಾಮಾಗೆ ದೊಡ್ಡ ಬೆಂಬಲವಾಗಿ ನಿಂತಿದ್ದರು. ಅದೇ ಕಾರಣದಿಂದಾಗಿ ಇಂದು ಬರಾಕ್ ಒಬಾಮಾ ತೆರೆಯ ಹಿಂದಿನಿಂದ ಕಮಲಾ ಹ್ಯಾರಿಸ್ಗೆ ಬೆಂಬಲ ನೀಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ