/newsfirstlive-kannada/media/media_files/2025/10/08/teacher-2025-10-08-10-40-41.jpeg)
ಒಂದ್ಕಡೆ ಸೈಬರ್ ವಂಚಕರ ಹಾವಳಿ ದಿನೇ ದಿನೇ ಹೆಚ್ಚಾಗ್ತಿದೆ. ಇನ್ನೊಂದೆಡೆ ಮ್ಯಾಟ್ರಿಮೊನಿಯಲ್ಲಿ ಮದುವೆಯ ಹೆಸರಿನಲ್ಲಿ ಸುಳ್ಳುಗಳ ಕಂತೆಗಳನ್ನು ಹೆಣೆದು ದುಡ್ಡು ಮಾಡುವ ವಂಚಕರ ಜಾಲ ಕೂಡ ಹೆಚ್ಚಾಗ್ತಿದೆ. ಇಂತದ್ದೇ ಪ್ರಕರಣ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ..?
ಗಂಡ ತೀರಿಹೋದ ಬಳಿಕ ಒಂಟಿಯಾಗಿದ್ದ 59 ವರ್ಷದ ಶಿಕ್ಷಕಿಯೊಬ್ಬರು, ಮ್ಯಾಟ್ರಿಮೊನಿಯಲ್ಲಿ ಮದುವೆಯಾಗುವುದಾಗಿ ನಂಬಿಸಿದ್ದ ವಂಚಕನಿಂದ ಮೋಸ ಹೋಗಿದ್ದಾರೆ. ಒಂಟಿ ಜೀವನದಿಂದ ಬೇಸತ್ತಿದ್ದ ಶಿಕ್ಷಕಿ ಎರಡನೇ ಮದುವೆಯಾಗಲು ನಿರ್ಧರಿಸಿದ್ದರು. ಆದ್ರೆ ಮ್ಯಾಟ್ರಿಮೊನಿ ಸೈಟ್ ನಲ್ಲಿ 2019ರ ಡಿಸಂಬರ್​ನಲ್ಲಿ ಅಹಾನ್ ಕುಮಾರ್ ಎಂಬ ಪ್ರೊಫೈಲ್ ನೇಮ್‌ನ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ನಂತರ ಕೆಲವೇ ದಿನಗಳಲ್ಲಿ ಇವರಿಬ್ಬರ ಫ್ರೆಂಡ್ಶಿಪ್ ಬೆಳೆದು ವಾಟ್ಸಾಪ್​ನಲ್ಲಿ ಚಾಟಿಂಗ್ ಕೂಡ ಮಾಡಿದ್ದರು. ಆದ್ರೆ ಇದಾದ ನಂತರ ಶಿಕ್ಷಕಿಗೆ ಆಗಿದ್ದು ಮಾತ್ರ ಮಹಾ ವಂಚನೆ.
ವಂಚಕನ ಮಾತಿಗೆ ಮಾರುಹೋದ ಶಿಕ್ಷಕಿ..!
ವಂಚನೆಗೊಳಗಾದ ಶಿಕ್ಷಕಿಗೆ ಒಬ್ಬ ಮಗ ಕೂಡ ಇದ್ದ. ಆದ್ರೆ ಅವನೂ ಕೂಡ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾನೆ. ಒಂಟಿಯಾದ ಬಾಳಿಗೆ ಬೆಳಕಾಗಿ ಬರುತ್ತಾನೆ ಎಂದು ಶಿಕ್ಷಕಿ ನಂಬಿದ್ದ ವಂಚಕ, ಅಮೆರಿಕದ ಅಟ್ಲಾಂಟಾದಲ್ಲಿ ತೈಲ ಕಂಪನಿಯಲ್ಲಿ ಎಂಜಿನಿಯರ್ ಎಂದು ಬೊಗಳೆ ಬಿಟ್ಟಿದ್ದ. ವಂಚಕನ ಮೋಡಿ ಮಾತುಗಳಿಗೆ ಮಾರು ಹೋಗಿದ್ದ ಶಿಕ್ಷಕಿ ಇದನ್ನೆಲ್ಲ ನಂಬಿದ್ದರು.
ಮುಂದೇನಾಯ್ತು..?
ವಂಚಕನ ಮಾತಿಗೆ ಕ್ಲೀನ್ ಬೌಲ್ಡ್ ಆಗಿದ್ದ ಶಿಕ್ಷಕಿಗೆ, ವಂಚಕ ಸಮಸ್ಯೆಯ ನೆಪದಲ್ಲಿ 2020ರ ಜನವರಿಯಲ್ಲಿ ಹಣದ ಸಹಾಯ ಕೇಳಿದ್ದಾನೆ. ಇನ್ನೇನು ತನ್ನ ಭಾವಿ ಪತಿಗೆ ಹಣ ಕೊಡುತ್ತಿದ್ದೇನೆ ಅಲ್ವಾ ಎಂದು ಶಿಕ್ಷಕಿ ತನ್ನ ಎರಡು ಖಾತೆಯಿಂದ ಇಲ್ಲಿಯವರೆಗೂ ಸುಮಾರು 2.3 ಕೋಟಿ ಹಣವನ್ನು ನೀಡಿದ್ದಾರೆ. ದಿನೇ ದಿನೇ ವಂಚಕರ ವರಸೆ ಬದಲಾವಣೆಯಾದ ಹಿನ್ನಲೆ ಶಿಕ್ಷಕಿಗೆ ಅನುಮಾನ ಬಂದು ಕೊಟ್ಟ ಹಣವನ್ನು ಹಿಂದಿರುಗಿಸಲು ಕೇಳಿದ್ದಾರೆ. ವಂಚಕ ಶಿಕ್ಷಕಿಗೆ ಮತ್ತೆ 3.5 ಲಕ್ಷ ಕೊಡುವಂತೆ ಬೇಡಿಕೆಯಿಟ್ಟಿದ್ದಾನೆ. ಇದೀಗ ಶಿಕ್ಷಕಿಯ ಪರಿಸ್ಥಿತಿ ಇಂಗು ತಿಂದ ಮಂಗನಂತಾಗಿದ್ದು, ಹಣ ವಾಪಾಸ್ ಕೊಡಿಸಲು ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.