ಬೆಂಗಳೂರಿನಲ್ಲಿನ ಪ್ರತಿ ಮಗು ಕೂಡ ಕನ್ನಡದಲ್ಲೇ ಕಲಿಯಬೇಕು- ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು

ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಬೇಕು ಅಷ್ಟೇ. ಆದರೆ ಇತರೆ ವಿಷಯಗಳಾದ ಗಣಿತ, ಇತಿಹಾಸ ಹಾಗೂ ಡಾಕ್ಟರ್​ ಕೋರ್ಸ್​ಗಳಂತವುಗಳನ್ನ ಇಂಗ್ಲಿಷ್​ನಲ್ಲಿ ಕಲಿಸುವುದು ಅರ್ಥಹೀನ ಎಂದು ಹೇಳಿದ್ದಾರೆ.

author-image
Bhimappa
SCHOOL (6)
Advertisment

ನವದೆಹಲಿ: ಇಂಗ್ಲಿಷ್​ಗಿಂತ ಸ್ಥಳೀಯ ಭಾಷೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಬೆಂಗಳೂರಲ್ಲಿ ಪ್ರತಿ ಮಗು ಕೂಡ ಕನ್ನಡದಲ್ಲೇ ಓದಬೇಕು. ಆಂಗ್ಲ ಮಾಧ್ಯಮ ವ್ಯಾಮೋಹಕ್ಕೆ ಒಳಗಾಗಬಾರದು ಎಂದು ಸ್ಥಳೀಯ ಭಾಷೆಯ ಪ್ರಾಮುಖ್ಯತೆ ಬಗ್ಗೆ ಜೊಹೊ (Zoho) ಕಂಪನಿಯ ಸಂಸ್ಥಾಪಕ ಶ್ರೀಧರ್ ವೆಂಬು ಅವರು ಒತ್ತಿ  ಹೇಳಿದ್ದಾರೆ. 

ಜೊಹೊ (Zoho) ಸಂಸ್ಥಾಪಕ ಶ್ರೀಧರ್ ವೆಂಬು ಅವರು ಪ್ರಾದೇಶಿಕ ಭಾಷೆಗಳಿಗೆ ಮೊದಲ ಆದ್ಯತೆ ಕೊಡಬೇಕು ಎಂದು ಹೇಳಿರುವುದು ಚರ್ಚೆ ಹುಟ್ಟು ಹಾಕಿದೆ. ಈ ಬಗ್ಗೆ ಎಕ್ಸ್​ ಅಕೌಂಟ್​ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಶ್ರೀಧರ್ ವೆಂಬು ಅವರು, ಬೆಂಗಳೂರಿನಲ್ಲಿ ಇರುವ ಪ್ರತಿ ಮಗು, ಕನ್ನಡದಲ್ಲೇ ಓದಬೇಕು. ಚೆನ್ನೈನಲ್ಲಿ ಕಲಿಯುವಂತಹ ಮಗು ತಮಿಳಿನಲ್ಲೇ ಕಲಿಯಬೇಕು. ಇಂಗ್ಲಿಷ್‌ ಭಾಷೆ ಮೇಲಿನ ಅತಿಯಾದ ಅವಲಂಬನೆಯು ದೇಶಕ್ಕೆ ಒಳ್ಳೆಯದು ಅಲ್ಲ ಎಂದು ಹೇಳಿದ್ದಾರೆ. 

ಇಂಗ್ಲಿಷ್‌ಗೆ ಅವಲಂಬನೆಯಾದರೆ ಅದು ವಸಾಹತುಶಾಹಿ ಪರಂಪರೆಯಾಗುತ್ತದೆ. ಇದು ನಗರ ಮತ್ತು ಗ್ರಾಮೀಣ ಯುವಕರು, ಜನರ ಮಧ್ಯೆ ಅಂತರವನ್ನು ಹೆಚ್ಚಿಸುತ್ತದೆ. ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಬೇಕು ಅಷ್ಟೇ. ಆದರೆ ಇತರೆ ವಿಷಯಗಳಾದ ಗಣಿತ, ಇತಿಹಾಸ ಹಾಗೂ ಡಾಕ್ಟರ್​ ಕೋರ್ಸ್​ಗಳಂತವುಗಳನ್ನ ಇಂಗ್ಲಿಷ್​ನಲ್ಲಿ ಕಲಿಸುವುದು ಅರ್ಥಹೀನ ಎಂದು ಹೇಳಿದ್ದಾರೆ. 

ಇದನ್ನೂ ಓದಿ:NIMHANS ಅಲ್ಲಿ ಉದ್ಯೋಗ ಅವಕಾಶ.. ಈ ಕೋರ್ಸ್​ ಪೂರ್ಣವಾಗಿದ್ರೆ ಅಪ್ಲೇ ಮಾಡಬಹುದು

SCHOOLS

ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವುದರಿಂದ ಸಾಂಸ್ಕೃತಿಕತೆ ಹೆಚ್ಚುತ್ತದೆ. ನಾವು, ನಮ್ಮದು ಎನ್ನುವುದು ಎಲ್ಲರಲ್ಲೂ ಮೂಡುತ್ತದೆ. ಜಾಗತಿಕ ಸ್ಪರ್ಧಾತ್ಮಕತೆಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣವೇ ಏಕೈಕ ಮಾರ್ಗ ಎನ್ನುವುದು ತಪ್ಪು. ಈ ಬಗ್ಗೆ ನೆದರ್‌ಲ್ಯಾಂಡ್ಸ್‌ ಅನ್ನು ಉದಾಹರಣೆಯಾಗಿ ಕೊಟ್ಟಿರುವ ಶ್ರೀಧರ್ ವೆಂಬು  ಅವರು, ತಮಿಳುನಾಡಿನ ಜನಸಂಖ್ಯೆಯ ಕಾಲು ಭಾಗದಷ್ಟು ಇರುವ ನೆದರ್‌ಲ್ಯಾಂಡ್ಸ್, ಶಾಲೆಗಳಲ್ಲಿ ಡಚ್​ ಭಾಷೆಯಲ್ಲೇ ಬೋಧನೆಯನ್ನು ಕಡ್ಡಾಯಗೊಳಿಸಿದೆ. ಜೊತೆಗೆ ಮಕ್ಕಳಿಗೆ ಅನುಕೂಲಕರ, ಬೇಗನೆ ಹೊಂದಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

Sridhar_Vembu

 ತಮಿಳುನಾಡಿಗೆ ಉದ್ಯೋಗಕ್ಕಾಗಿ ಬರುವ ಇಂಜಿನಿಯರ್​ಗಳು ತಮಿಳು ಕಲಿಯುವ ಮೂಲಕ ಎಲ್ಲರೊಂದಿಗೆ ಬೆರೆಯುತ್ತಾರೆ. ಭಾರತೀಯರು ಕೂಡ ವಿದೇಶಗಳಿಗೆ ಹೋದಾಗ ಅಲ್ಲಿನ ಅವಶ್ಯಕತೆಗಾಗಿ ಸ್ಥಳೀಯ ಭಾಷೆಯನ್ನು ಕಲಿತು ಮಾತನಾಡುತ್ತಾರೆ. ಅದರಂತೆ ನಮ್ಮ ನಾಡು, ನಮ್ಮ ನೆಲದಲ್ಲಿ ನಮಗೆ ಯಾಕೆ ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ಶ್ರೀಧರ್ ವೆಂಬು ಅವರು ಪ್ರಶ್ನೆ ಮಾಡಿದ್ದಾರೆ.   

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sridhar Vembu
Advertisment