/newsfirstlive-kannada/media/media_files/2025/08/02/jagadeesh_ashok_prajwal-2025-08-02-20-06-57.jpg)
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸಂಸದರ, ಶಾಸಕರ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದೊಡ್ಡ ಮೊತ್ತದ ದಂಡವನ್ನು ವಿಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟು ಸಾಕ್ಷ್ಯಗಳನ್ನು ಇಲ್ಲಿ ಪರಿಗಣಿಸಲಾಗಿತ್ತು, ಮತ್ತು ಯಾರು ಯಾರು ಸರ್ಕಾರಿ ಅಭಿಯೋಜಕರು, ವಕೀಲರು ವಾದ ಮಂಡಿಸಿದರು ಎನ್ನುವ ವಿವರ ಇಲ್ಲಿದೆ.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಒಟ್ಟು 26 ಸಾಕ್ಷಿಗಳು, 9 ವಸ್ತು ರೂಪದ ಸಾಕ್ಷಿಗಳನ್ನು ಪರಿಶೀಲನೆ ಮಾಡಲಾಗಿದೆ. ಇದರ ಜೊತೆಗೆ ದಾಖಲೆ ಸಾಕ್ಷಿಗಳು ಎಂದು 180 ಸಾಕ್ಷ್ಯಗಳನ್ನು ಗುರುತಿಸಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆಯನ್ನು 2025ರ ಮೇ 02 ರಿಂದ 2025ರ ಜುಲೈ 18ರ ವರೆಗೆ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವಾದ ಗೌರವಾನ್ವಿತ 81 ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ (82 ಸಿಸಿಹೆಚ್) ಸಂತೋಷ ಗಜಾನನ್ ಭಟ್ ಅವರು ನಡೆಸಿದರು.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣಗೆ ಕಠಿಣ ಶಿಕ್ಷೆ ಬಗ್ಗೆ SIT ಮುಖ್ಯಸ್ಥ ಬಿಜಯ್ ಕುಮಾರ್ ಸಿಂಗ್ ಏನಂದ್ರು?
ಇನ್ನು ಸರ್ಕಾರದ ಪರವಾಗಿ ಕೋರ್ಟ್ನಲ್ಲಿ ವಿಚಾರಣೆಯನ್ನು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಜಗದೀಶ್ ಬಿ.ಎನ್ ಮತ್ತು ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ಎನ್. ನಾಯಕ್ ಅವರು ನಡೆಸಿದರು. ಇವರಿಗೆ ಸಹಾಯಕರಾಗಿ ವಕೀಲರಾದ ವಿಶಾಲ್ ಬಿ.ಎಂ, ಊರ್ಮಿಳಾ ಪುಲ್ಲತ್, ಮಾಳವಿಕಾ, ಸಾಕಿನ್ ಮೌಸಿನ್ ಮತ್ತು ಮಹಾಲಕ್ಷ್ಮಿ ಅವರು ಕಾರ್ಯನಿರ್ವಹಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ತನಿಖೆ ಮತ್ತು ವಿಚಾರಣೆ ಸಮಯದಲ್ಲಿ ಹೈಕೋರ್ಟ್ಗೆ ಕೆಲವು ಕ್ರಿಮಿನಲ್ ಮತ್ತು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಈ ವೇಳೆ ಕೋರ್ಟ್ನಲ್ಲಿ ಹಿರಿಯ ವಕೀಲರಾದ ಪ್ರೊ.ರವಿವರ್ಮ ಕುಮಾರ್, ಬಿಎನ್ ಜಗದೀಶ್ ಮತ್ತು ಬೆಳ್ಳಿ ರವಿವರ್ಮ ಕುಮಾರ್ ಇವರ ತಂಡ ವಾದ ಮಂಡನೆ ಮಾಡಿದ್ದರು. ಸೆಷನ್ಸ್ ಮತ್ತು ಉನ್ನತ ನ್ಯಾಯಾಲಯಗಳಲ್ಲಿ ಪರಿಣಾಮಕಾರಿ ಆಕ್ಷೇಪಣೆಗಳು ಮತ್ತು ವಾದಗಳಿಂದಾಗಿ ಕೋರ್ಟ್ ಪ್ರಜ್ವಲ್ ರೇವಣ್ಣಗೆ ಜಾಮೀನು ನಿರಾಕರಣೆ ಮಾಡಿತ್ತು. ಹೀಗಾಗಿ ಅರೆಸ್ಟ್ ಆದಗಿನಿಂದ ಈವರೆಗೆ ನ್ಯಾಯಾಂಗ ಬಂಧನದಲ್ಲೇ ಇದ್ದರು. ಈ ಎಲ್ಲದರ ಬಳಿಕ ಇಂದು ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ