/newsfirstlive-kannada/media/post_attachments/wp-content/uploads/2024/09/WOLF-ATTACK.jpg)
ಉತ್ತರ ಪ್ರದೇಶದ ಬೆಹ್ರೀಚ್ ಜಿಲ್ಲೆ ಈಗ ತೋಳಗಳ ಕಾಟದಿಂದ ನಲುಗಿ ಹೋಗಿದೆ. ಸರಯೂ ಹಾಗೂ ಘಗರಾ ನದಿಯ ತೀರದಲ್ಲಿರುವ ಈ ಜಿಲ್ಲೆ ಈಗ ತೋಳಗಳ ನಿರಂತರ ದಾಳಿಯಿಂದಾಗಿ ಜೀವ ಕೈಯಲ್ಲಿ ಹಿಡಿದು ಅಲೆದಾಡುವಂತಾಗಿದೆ. ಮಕ್ಕಳನ್ನು ಸೇರಿ ಇದುವರೆಗೂ ತೋಳಗಳು ಒಟ್ಟು 10 ಜನರನ್ನು ಬಲಿ ತೆಗೆದುಕೊಂಡಿವೆ. ಯಾವಾಗ ಹೇಗೆ ದಾಳಿ ಮಾಡುತ್ತವೋ ತಿಳಿಯದಂತೆ ಕಂಗಾಲಾಗಿದ್ದಾರೆ ಜನರು.
ದಯವಿಟ್ಟು ತೋಳಗಳ ದಾಳಿಯಿಂದ ನಮ್ಮನ್ನು ಕಾಪಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರೆ ಯೋಗಿ ಸರ್ಕಾರದ ಮಂತ್ರಿ ಬೇಬಿ ರಾಣಿ ಮೌರ್ಯ, ತೋಳಗಳು ನಮ್ಮ ಸರ್ಕಾರಕ್ಕಿಂತ ಬುದ್ಧಿವಂತ ಇವೆ. ಹೀಗಾಗಿ ಅವುಗಳನ್ನು ಸೆರೆ ಹಿಡಿಯುವುದರಲ್ಲಿ ನಮಗೆ ಸಾಕಷ್ಟು ವಿಳಂಬವಾಗುತ್ತಿದೆ ಎಂಬ ಮಾತನ್ನು ಹೇಳಿ ನಗೆಪಾಟಲಿಗೆ ಈಡಾಗಿದ್ದಾರೆ. ಸದ್ಯ ಬೆಹ್ರೀಚ್ ಅನ್ನು ತೋಳಗಳ ಕಾಟದಿಂದ ಕಾಪಾಡಲು ಸರ್ಕಾರ ಹರಸಾಹಸ ಪಡುತ್ತಿದೆ. ಆದ್ರೆ ಇಷ್ಟು ದಿನ ಇಲ್ಲದ ಈ ತೋಳಗಳ ಕಾಟ ಈಗ ಬೆಹ್ರೀಚ್ನಲ್ಲಿ ವಿಪರೀತಕ್ಕೆ ಹೋಗಿದ್ದು ಏಕೆ. ಅದಕ್ಕೆ ಕಾರಣ ತೋಳಗಳಲ್ಲಿರುವ ಪ್ರತೀಕಾರದ ಗುಣ ಎನ್ನುತ್ತಾರೆ ಉತ್ತರಪ್ರದೇಶದ ಅರಣ್ಯ ನಿಗಮದ ವ್ಯವಸ್ಥಾಪಕ ಸಂಜಯ್ ಪಾಠಕ್.
ಇದನ್ನೂ ಓದಿ:ಭಾರತದಲ್ಲೂ ಮೊದಲ ಶಂಕಿತ ಮಂಕಿಪಾಕ್ಸ್ ಪತ್ತೆ.. ವಿದೇಶದಿಂದ ಬಂದ ವ್ಯಕ್ತಿ ಐಸೋಲೇಟ್; ಎಚ್ಚರಿಕೆ!
ಸಂಜಯ್ ಪಾಠಕ್ ಹೇಳುವ ಪ್ರಕಾರ ತೋಳಗಳು ಸೇಡು ತೀರಿಸಿಕೊಳ್ಳುವ ಗುಣವನ್ನು ಹೊಂದಿರುತ್ತವೆ. ಒಂದು ವೇಳೆ ಮನುಷ್ಯನಿಂದ ಅವುಗಳು ನೆಲೆಸುವ ಜಾಗ ಹಾಗೂ ಅವುಗಳ ಮರಿಗಳಿಗೆ ಏನಾದರೂ ತೊಂದರೆ, ಹಾನಿ ಉಂಟಾದಲ್ಲಿ ಅವುಗಳು ಮಾನವ ಸಮಾಜದ ಮೇಲೆ ಸೇಡಿನ ಯುದ್ಧ ಸಾರುತ್ತವೆ. ಹೀಗಾಗಿಯೇ ಬೆಹ್ರೀಚ್ನಲ್ಲಿ ಇಂತಹ ಘಟನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಬೆಹ್ರೀಚ್ನ ಕಬ್ಬಿನ ಗದ್ದೆಯೊಂದರಲ್ಲಿ ಒಂದಿಷ್ಟು ತೋಳದ ಮರಿಗಳು ಕಾಣಿಸಿಕೊಂಡಿದ್ದವು. ಘಗರಾ ನದಿಯಲ್ಲಿ ಪ್ರವಾಹ ಉಂಟಾದ ಕಾರಣ ಗದ್ದಗೆ ನುಗ್ಗಿದ ನೀರು ತೋಳದ ಮರಿಗಳನ್ನು ಕೊಚ್ಚಿಕೊಂಡು ಹೋಗಿದೆ. ಅಷ್ಟು ಮಾತ್ರವಲ್ಲದೇ ಅವುಗಳು ನೆಲೆಸುತ್ತಿದ್ದ ಪ್ರದೇಶವೂ ಕೂಡ ಈಗ ಪ್ರವಾಹದಿಂದ ಸುತ್ತುವರಿದೆ. ಇದೇ ಕಾರಣಕ್ಕಾಗಿಯೇ ತೋಳಗಳು ಮನುಷ್ಯನಿರುವ ಪ್ರದೇಶಕ್ಕೆ ನುಗ್ಗಿ ಕಂಡ ಕಂಡವರ ಮೇಲೆ ದಾಳಿ ಮಾಡಿ ಸಾಯಿಸುತ್ತಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ದಿಢೀರ್ ಬೆಲೆ ಏರಿಕೆ; ಮಟನ್ ಬಿರಿಯಾನಿ, ಚಿಪ್ಸ್ ಮಾರಾಟ ನಿಲ್ಲಿಸಿದ ಸೆಂಟ್ರಲ್ ಜೈಲು!
1996ರಲ್ಲಿ ಉತ್ತರಪ್ರದೇಶದ ಪ್ರತಾಪಗಢದಲ್ಲಿಯೂ ಕೂಡ ಇದೇ ಮಾದರಿಯ ತೋಳಗಳ ದಾಳಿ ನಡೆದಿತ್ತು. 10 ಜನರ ಸಾವಿಗೆ ಕಾರಣವಾಗಿದ್ದವು ತೋಳಗಳು. ಏಕಾಏಕಿ ಈ ರೀತಿ ದಾಳಿಗೆ ಕಾರಣವೇನ ಎಂದು ನೋಡಿದಾಗ, ಪ್ರತಾಪಗಢದ ಊರಾಚೆ ಸಣ್ಣ ಗುಹೆಯಲ್ಲಿ ರೈತರಿಗೆ ತೋಳದ ಮರಿಗಳು ಇರೋದು ಕಂಡಿತ್ತು. ಇದರಿಂದ ಆತಂಕಗೊಂಡ ರೈತರು ಅವುಗಳನ್ನು ಅಲ್ಲಿಂದ ಓಡಿಸಿ ಅವುಗಳ ವಾಸವಿದ್ದ ಆ ಸಣ್ಣ ಗುಹೆಯನ್ನು ಧ್ವಂಸಗೊಳಿಸಿದ್ದರು. ಅಂದಿನಿಂದ ಪ್ರತಾಪಗಢದಲ್ಲಿ ತೋಳಗಳ ದಾಳಿ ಶುರುವಾಗಿತ್ತು.
ಕ್ರೂರ ಪ್ರಾಣಿಗಳು ತಮ್ಮ ವಲಯವನ್ನು ಬಿಟ್ಟು ಎಂದಿಗೂ ಕೂಡ ಆಚೆ ಬರುವುದಿಲ್ಲ. ಅವು ಆಚೆ ಬರುವಂತೆ ಮಾಡುವುದೇ ಮನುಷ್ಯರು ಪ್ರಕೃತಿಯ ಮೇಲೆ ಮಾಡುತ್ತಿರುವ ಅನಾಚಾರ. ಕಾಡುನಾಶದಿಂದ ಸೇರಿ ಹವಾಮಾನ ಬದಲಾವಣೆಯವರೆಗೂ ಪ್ರಕೃತಿಗೆ ಮನುಷ್ಯನ ಕರಾಳ ಕೊಡುಗೆ ಇದೆ. ವಿಪರೀತ ಮಳೆ, ಭೀಕರ ಬರಗಾಲದಂತಹ ಸನ್ನಿವೇಶಗಳು ಕ್ರೂರ ಪ್ರಾಣಿಗಳು ಮಾನವ ವಾಸಸ್ಥಳಗಳಿಗೆ ನುಗ್ಗುವಂತ ಅನಿವಾರ್ಯತೆ ಸೃಷ್ಟಿ ಮಾಡುತ್ತವೆ. ಈಗ ಉತ್ತರಪ್ರದೇಶದ ಬೆಹ್ರೀಚ್ನಲ್ಲಿ ನಡೆಯುತ್ತಿರುವುದು ಕೂಡ ಅದೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ