/newsfirstlive-kannada/media/post_attachments/wp-content/uploads/2024/09/PRANAYAMA.jpg)
ಪ್ರಾಣಾಯಾಮ ಎಂಬುದು ಒಂದು ಯೋಗ ಸಾಧನೆ. ಅದನ್ನು ತಪಸ್ವಿಗಳು, ಋಷಿಗಳು ಮಾತ್ರ ಮಾಡಬೇಕು ಅಂತೇನಿಲ್ಲ. ನೀವು ನಿತ್ಯ ಪ್ರಾಣಾಯಾಮ ಮಾಡುವುದರಿಂದ ಹಲವು ಉಪಯೋಗಗಳಿವೆ. ಬ್ಲಡ್ ಪ್ರೆಶರ್ನಂತಹ ಸಮಸ್ಯೆಗಳಿಂದ ನೀವು ದೂರವಾಗಲಿದ್ದೀರಿ. ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಲಿಯಗಳಿಂದ ನೀವು ಮುಕ್ತರಾಗಲಿದ್ದೀರಿ. ಹಾಗಿದ್ರೆ ಪ್ರಾಣಾಯಾಮದಿಂದ ಆಗಲಿರುವ ಆ 8 ಪ್ರಯೋಜನಗಳು ಏನು ಅನ್ನೋದನ್ನ ನಾವು ನಿಮಗೆ ಚಿಕ್ಕದಾಗಿ ವಿವರಣೆ ಕೊಡುತ್ತೇವೆ ನೋಡಿ.
ಪ್ರಾಣಾಯಾಮದಿಂದ ಒತ್ತಡ ನಿರ್ವಹಣೆ
ಇದು ಸ್ಪರ್ಧಾತ್ಮಕ ಜಗತ್ತು. ಅದರ ವೇಗಕ್ಕೆ ತಕ್ಕಂತೆ ನಾವು ಓಡಲೇಬೇಕು. ಇಲ್ಲವಾದಲ್ಲಿ ನಮ್ಮ ಬದುಕಿನ ಬಂಡಿ ಉಳಿದವರಿಗಿಂತ ಹಿಂದೆ ಉಳಿದು ಬಿಡುತ್ತದೆ ಅನ್ನೋ ವೇಗದಲ್ಲಿಯೇ ನಾವು ಓಡುತ್ತೇವೆ. ನೂರೆಂಟು ಒತ್ತಡಗಳ ನಡುವೆ ಒದ್ದಾಡಿಕೊಂಡು ಬದುಕನ್ನು ನೂಕುತ್ತಿರುತ್ತೇವೆ. ಇಂತಹ ಒತ್ತಡವನ್ನು ನಿರ್ವಹಣೆ ಮಾಡಬಲ್ಲ ದೊಡ್ಡ ಅಸ್ತ್ರ ಅಂದರೆ ಅದು ಪ್ರಾಣಾಯಾಮ. ನಿತ್ಯ ಪ್ರಾಣಾಯಾಮದಿಂದಾಗಿ ನೀವು ಒಂದೇ ಕಡೆ ಗಮನವನ್ನು ಕೇಂದ್ರಿಕರೀಸುವುದರಿಂದ ಒತ್ತಡದಂತ ಸಮಸ್ಯೆಗಳು ದೂರವಾಗಿ ರಕ್ತದೊತ್ತಡದಂತಹ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.
ಇದನ್ನೂ ಓದಿ: ICMR ನಿಂದ ಭಾರತೀಯರ ಡಯಟ್ ಬಗ್ಗೆ ಮಾರ್ಗಸೂಚಿ ಬಿಡುಗಡೆ; ನಾವು ಸೇವಿಸುವ ಆಹಾರ ಹೇಗಿರಬೇಕು ಗೊತ್ತಾ?
ನಿದ್ರಾಹೀನತೆಯಿಂದ ಮುಕ್ತಿ ನೀಡುವ ಪ್ರಾಣಾಯಾಮ
ನೂರೆಂಟು ಚಿಂತೆಗಳು, ಒತ್ತಡದ ಬದುಕಿನ ನಡುವೆ ಅನೇಕರು ನಿದ್ರೆಯ ತೊಂದರೆಯನ್ನು ಅನುಭವಿಸುತ್ತಾರೆ. ಅಂತವರು ಪ್ರಾಣಾಯಾಮ ಮಾಡುವ ಮೂಲಕ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಪ್ರಾಣಾಯಾಮ ಮಾಡುವಾಗ ನಿಮ್ಮ ಉಸಿರಿನ ಏರಿಳಿತದ ಮೇಲೆ ಗಮನವಿರಬೇಕು. ದೀರ್ಘ ಉಸಿರನ್ನು ಒಳೆಗೆ ಎಳೆದುಕೊಂಡು ಆಚೆ ಬಿಡುವ ಈ ಪ್ರಕ್ರಿಯಿಂದಾಗಿ ನೀವು ನೆಮ್ಮದಿಯ ನಿದ್ದೆಯನ್ನು ನಿಮ್ಮದಾಗಿಸಿಕೊಳ್ಳಬಹುದು
ಅತೀ ಚಿಂತೆಗಳನ್ನು ದೂರ ಮಾಡುತ್ತದೆ
ಮನುಷ್ಯನ ಬದುಕು ಚಿಂತೆಗಳ ಸಂತೆ. ಬದುಕಲ್ಲಿ ಎದುರಾಗುವ ಒಂದಲ್ಲಾ ಒಂದು ಸಮಸ್ಯೆಗಳನ್ನು ನಮ್ಮನ್ನು ದೀರ್ಘ ಚಿಂತೆಗೆ ನೂಕುತ್ತವೆ. ಒಮ್ಮೊಮ್ಮೆ ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಚಿಂತೆಗಳನ್ನು ಮಾಡುತ್ತಾನೆ. ಇಂತಹ ಮಾನಸಿಕ ನೆಮ್ಮದಿಯನ್ನು ಕೆಡೆಸುವ ಸಮಸ್ಯೆಗಳಿಂದ ಪ್ರಾಣಾಯಾಮ ಮಾಡುವ ಮೂಲಕ ಪಾರಾಗಬಹುದು.
ಇದನ್ನೂ ಓದಿ:Beetroot Benefits ಈ ಆರು ಆರೋಗ್ಯದ ಪ್ರಯೋಜನಗಳಿಗಾಗಿ ನೀವು ಬೀಟ್ರೂಟ್ ತಿನ್ನಲೇಬೇಕು
ಬ್ಲಡ್ ಪ್ರೆಶರ್ ನಿಯಂತ್ರಿಸುವ ಪ್ರಾಣಾಯಾಮ
ರಕ್ತದೊತ್ತಡ ಸಾಮಾನ್ಯವಾಗಿ ಕಂಡು ಬರುವುದು ಅತಿಯಾದ ಸ್ಟ್ರೆಸ್ ತೆಗೆದುಕೊಳ್ಳುವ ಮೂಲಕ. ನೀವು ಸ್ಟ್ರೇಸ್ನ್ನು ಕೊಲ್ಲದಿದ್ದಲ್ಲಿ ಈ ರೋಗದಿಂದ ಮುಕ್ತಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಪ್ರಾಣಾಯಾಮ ನಿಮ್ಮನ್ನು ಒತ್ತಡದ ಬದುಕಿನಿಂದ ಪಾರು ಮಾಡುತ್ತದೆ. ಆ ಮೂಲಕ ಬ್ಲಡ್ ಪ್ರೆಶರ್ನಂತಹ ಸಮಸ್ಯೆಗಳಿಂದಲೂ ನಿಮ್ಮನ್ನು ದೂರವಿಡುತ್ತದೆ. ಮನಸ್ಸು ಸದಾ ಪ್ರಫುಲ್ಲವಾಗಿ ಶಾಂತವಾಗಿ ಇರಬೇಕು ಅಂದ್ರೆ ನಿತ್ಯ ಪ್ರಾಣಾಯಾಮ ಮಾಡುವುದನ್ನು ಮಿಸ್ ಮಾಡಬೇಡಿ.
ಶ್ವಾಸಕೋಶದ ಆರೋಗ್ಯ ಕಾಪಾಡುತ್ತದೆ.
ದೀರ್ಘ ಉಸಿರಾಟದ ಈ ವ್ಯಾಯಾಮದಿಂದಾಗಿ ನಾವು ಶ್ವಾಸಕೋಶದ ಸಮಸ್ಯೆಗಳು ದೂರವಾಗುತ್ತವೆ. ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ದೂರವಾಗುತ್ತವೆ. ಶ್ವಾಸಕೋಶವು ಸಮರ್ಥವಾಗಿ ಕಾರ್ಯನಿರ್ವಹಿಸುವಲ್ಲಿ ಪ್ರಾಣಾಯಾಮ ತುಂಬಾ ಉಪಯುಕ್ತ. ಹೀಗಾಗಿ ದಿನಕ್ಕೆ ಒಂದು ಅರ್ಧಗಂಟೆಯಾದ್ರೂ ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಾಗಬಹುದು.
ಸೀನಸ್ ಸಮಸ್ಯೆಗಳು ಇದರಿಂದ ದೂರ
ಸಿನಸ್ (Sinus) ನಂತಹ ಕಾಯಿಲೆಗಳಿಂದ ನೀವು ದೂರ ಇರಬೇಕಾದ್ರೆ ಪ್ರಾಣಾಯಾಮವನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಸದಾ ಸೋರುವ ಮೂಗು, ನಿಲ್ಲದ ಶೀತದಂತಹ ಸಮಸ್ಯೆಗಳಿದ್ರೆ ತಪ್ಪದೇ ಪ್ರಾಣಾಯಾಮ ಮಾಡಿ.
ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಪ್ರಾಣಾಯಾಮದಿಂದಾಗಿ ನೀವು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಬಹುದು. ಮುಂಜಾನೆಯದ್ದು ಮಾಡುವ ಪ್ರಾಣಾಯಾಮದಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಎಂದು ಯೋಗಾ ಎಕ್ಸ್ಪರ್ಟ್ಸ್ ಹೇಳುತ್ತಾರೆ.
ಹಾರ್ಮೊನಲ್ ಬ್ಯಾಲನ್ಸ್
ನಿತ್ಯ ನಿರಂತರವಾಗಿ ಮಾಡುವ ಪ್ರಾಣಾಯಾಮ ದೇಹದಲ್ಲಿ ಹ್ಯಾಪಿ ಹಾರ್ಮೊನ್ಸ್ ರಿಲೀಸ್ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿತ್ಯ ಇದನ್ನು ಮಾಡುವುದರಿಂದ ನಿಮ್ಮ ಹಾರ್ಮೋನಲ್ ಬ್ಯಾಲನ್ಸ್ ಕೂಡ ಆಗುತ್ತದೆ.
ಪ್ರಾಣಾಯಾಮ ಅನ್ನೋದು ನಿಮ್ಮಿಂದ ದೊಡ್ಡ ಸಮಯವನ್ನೇನು ಕೇಳೋದಿಲ್ಲ. ದಿನಕ್ಕೆ 20 ನಿಮಿಷದಿಂದ ಅರ್ಧಗಂಟೆ ಅದಕ್ಕೆ ಸಮಯ ನೀಡಿದ್ರೆ ಸಾಕು. ನೀವು ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು. ಆಸ್ತಿಕರು, ದೇವರನ್ನು ನಂಬುವವರು ಮಾತ್ರ ಮಾಡುವ ವ್ಯಾಯಾಮ ಇದಲ್ಲ. ಇದು ಕೂಡ ನೀವು ನಿತ್ಯ ಮಾಡುವ ದೈಹಿಕ ವ್ಯಾಯಾಮದಲ್ಲಿಯೇ ಸೇರುತ್ತದೆ. ನಿತ್ಯ ಪ್ರಾಣಾಯಾಮದಿಂದಾಗಿ ನಿಮಗೆ ಹಲವು ಪ್ರಯೋಜನೆಗಳಿವೆ. ಮೇಲೆ ಹೆಸರಿಸಿರುವ ಯಾವುದೇ ಸಮಸ್ಯೆಗಳು ನಿಮ್ಮಲ್ಲಿದ್ರೆ ಇಂದಿನಿಂದಲೇ ಪ್ರಾಣಾಯಾಮ ಮಾಡಲು ಶುರು ಮಾಡಿ.
ವಿಶೇಷ ಸೂಚನೆ: ಎಲ್ಲಾ DTH ಮತ್ತು Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ