/newsfirstlive-kannada/media/post_attachments/wp-content/uploads/2024/05/RCB-vs-CSK.jpg)
ಮೇ 18ರ ಮೆಗಾಫೈಟ್ಗೂ ಮುನ್ನ ಆರ್ಸಿಬಿ ಕ್ಯಾಂಪ್ನಲ್ಲಿ ಟೆನ್ಶನ್ ಶುರುವಾಗಿದೆ. ಸತತ 5 ಪಂದ್ಯ ಗೆದ್ದ ಆತ್ಮವಿಶ್ವಾಸದ ಅಲೆಯಲ್ಲಿದ್ರೂ, ಚೆನ್ನೈ ಎದುರಿನ ಕದನ ಡುಪ್ಲೆಸಿ ಪಡೆಯಲ್ಲಿ ಆತಂಕ ಸೃಷ್ಟಿಸಿದೆ. ಇದಕ್ಕೆಲ್ಲಾ ಕಾರಣ ಇತಿಹಾಸ. ಈ ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶಿಸಬೇಕಂದ್ರೆ, ಡುಪ್ಲೆಸಿ ಪಡೆ ಇತಿಹಾಸವನ್ನೇ ಬದಲಿಸಬೇಕಿದೆ.
ಐಪಿಎಲ್ ಇತಿಹಾಸದ ಮದಗಜಗಳ ನಡುವಿನ ಕಾದಾಟಕ್ಕೆ ಕೌಂಟ್ಡೌನ್ ಶುರುವಾಗಿದೆ. ಚಿನ್ನಸ್ವಾಮಿ ಅಂಗಳದಲ್ಲಿ ನಡೆಯೋ ಮಾಡು ಇಲ್ಲವೇ ಮಡಿ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು - ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗ್ತಿವೆ. ಫಿನಿಕ್ಸ್ನಂತೆ ಎದ್ದು ಬಂದಿರುವ ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಡೋ ಕನವರಿಕೆಯಲ್ಲಿದ್ರೆ, ಆರ್ಸಿಬಿ ಓಟಕ್ಕೆ ಬ್ರೇಕ್ ಹಾಕಿ, ಪ್ಲೇ ಆಫ್ ಪ್ರವೇಶಿಸೋ ಲೆಕ್ಕಾಚಾರ ಚೆನ್ನೈದ್ದಾಗಿದೆ.
ಇದನ್ನೂ ಓದಿ:ಪ್ಲೇ ಆಫ್ಗೆ ಎಂಟ್ರಿಕೊಟ್ಟ SRH; ಸಿಎಸ್ಕೆ ವಿರುದ್ಧ ಭಾರೀ ಅಂತರದಿಂದ ಗೆದ್ದರೆ ಮಾತ್ರ ಆರ್ಸಿಬಿಗೆ ಚಾನ್ಸ್..!
ಮಾಡು ಇಲ್ಲವೇ ಮಡಿ ಕದನ.. ಒತ್ತಡದಲ್ಲಿ ಆರ್ಸಿಬಿ
ಈ ಸೀಸನ್ ಐಪಿಎಲ್ನಲ್ಲಿ ಸೋತು ಸುಣ್ಣವಾಗಿದ್ದ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೇ ಸ್ಥಾನದಲ್ಲಿತ್ತು. ಆರ್ಸಿಬಿ ಕಥೆ ಖತಂ ಎಂದು ತೀರ್ಮಾನಿಸಲಾಗಿತ್ತು. ಎಲ್ಲಾ ಲೆಕ್ಕಾಚಾರಗಳನ್ನ ಸುಳ್ಳಾಗಿಸಿದ ಆರ್ಸಿಬಿ, ಯಾರೂ ನಿರೀಕ್ಷಿಸದ ರೀತಿಯಲ್ಲಿ ರಣರೋಚಕ ಕಮ್ಬ್ಯಾಕ್ ಮಾಡಿದೆ. ಆರ್ಸಿಬಿಯ ಆಟ ನೋಡಿ ಕ್ರಿಕೆಟ್ ಲೋಕ ದಂಗಾಗಿದೆ. ಪರದಾಡ್ತಿದ್ದ ಆಟಗಾರರೆಲ್ಲಾ ಸಾಲಿಡ್ ಫಾರ್ಮ್ಗೆ ಮರಳಿದ್ದಾರೆ. ಆದ್ರೂ, ಡು ಆರ್ ಡೈ ಕದನಕ್ಕೂ ಮುನ್ನ ತಂಡದಲ್ಲಿ ಟೆನ್ಶನ್ ಹೆಚ್ಚಾಗಿದೆ. ಇದಕ್ಕೆ ಕಾರಣ ಇತಿಹಾಸ.
ಇತಿಹಾಸ ಬದಲಿಸಿದ್ರಷ್ಟೇ ಪ್ಲೇ ಆಫ್ಗೆ ಎಂಟ್ರಿ
ಮೇ18ರಂದು ನಡೆಯೋ ಪಂದ್ಯದಲ್ಲಿ ಗೆಲುವು ಸಾಧಿಸಿದ್ರೆ ಸಾಕು ಚೆನ್ನೈ ಕ್ವಾಲಿಫೈ ಆಗಲಿದೆ. ಬೆಂಗಳೂರು ಕ್ವಾಲಿಫೈ ಆಗಬೇಕಂದ್ರೆ ಬಿಗ್ ಮಾರ್ಜಿನ್ ವಿಕ್ಟರಿ ಬೇಕಿದೆ. ತಂಡದ ಪ್ರಮುಖ ಆಟಗಾರ ವಿಲ್ ಜಾಕ್ಸ್ ಅಲಭ್ಯತೆ, ಪಂದ್ಯಕ್ಕಿರೋ ಮಳೆ ಭೀತಿಯ ಜೊತೆಗೆ ಇತಿಹಾಸ ಕೂಡ ಆರ್ಸಿಬಿ ಕ್ಯಾಂಪ್ನಲ್ಲಿ ಟೆನ್ಶನ್ ಹೆಚ್ಚಿಸಿದೆ.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?
ಕಳೆದ 5 ಪಂದ್ಯದಲ್ಲಿ ಕೇವಲ 1ರಲ್ಲಿ ಮಾತ್ರ ಗೆಲುವು
ಈ ಸೀಸನ್ನ ಮೊದಲ ಪಂದ್ಯ ಮಾತ್ರವಲ್ಲ. ಕಳೆದ 5 ಐಪಿಎಲ್ ಮುಖಾಮುಖಿಗಳಲ್ಲಿ ಆರ್ಸಿಬಿ, ಚೆನ್ನೈ ಎದುರು ಗೆದ್ದಿರೋದು ಕೇವಲ 1 ಪಂದ್ಯ ಮಾತ್ರ. ಉಳಿದ ಪಂದ್ಯಗಳಲ್ಲಿ ಆರ್ಸಿಬಿ ಸೋಲಿಗೆ ಶರಣಾಗಿದೆ. ಜೊತೆಗೆ ಒಟ್ಟಾರೆ ಐಪಿಎಲ್ ಮುಖಾಮುಖಿಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ದರ್ಬಾರ್ ನಡೆಸಿದೆ. ಈ ಅಂಕಿ-ಅಂಶಗಳೇ ಆರ್ಸಿಬಿ ಪಾಳಯದಲ್ಲಿ ಟೆನ್ಶನ್ ಹೆಚ್ಚಿಸಿದೆ.
RCB vs CSK ಮುಖಾಮುಖಿ
ಐಪಿಎಲ್ ಟೂರ್ನಿಯಲ್ಲಿ ಈವರೆಗೆ ಆರ್ಸಿಬಿ ಹಾಗೂ ಸಿಎಸ್ಕೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಸಿಎಸ್ಕೆ 21 ಪಂದ್ಯ ಗೆದ್ದಿದ್ರೆ, ಆರ್ಸಿಬಿ 10 ಪಂದ್ಯ ಜಯಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೇ ಅಂತ್ಯಕಂಡಿದೆ.
ಚಿನ್ನಸ್ವಾಮಿಯಲ್ಲಿ ದರ್ಬಾರ್ ನಡೆಸಿರೋ ಚೆನ್ನೈ
ಒಟ್ಟಾರೆಯಾಗಿ ಮಾತ್ರವಲ್ಲ.. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲೂ ಚೆನ್ನೈ ಸೂಪರ್ ಆಟವಾಡಿದೆ. ಆರ್ಸಿಬಿಗೆ ಟಕ್ಕರ್ ಕೊಟ್ಟು ಚೆನ್ನೈ ಮೇಲುಗೈ ಸಾಧಿಸಿದೆ. ರೆಕಾರ್ಡ್ಸ್ ನೋಡಿದ್ರೆ, ಇದು ಬೆಂಗಳೂರು ಹೋಮ್ಗ್ರೌಂಡಾ.? ಚೆನ್ನೈನದ್ದಾ.? ಅನ್ನೋ ಡೌಟ್ ಬರದೇ ಇರಲ್ಲ. ಚಿನ್ನಸ್ವಾಮಿ ಮೈದಾನದಲ್ಲಿ ಈವರೆಗೆ 10 ಪಂದ್ಯಗಳಲ್ಲಿ ಸಿಎಸ್ಕೆ ಹಾಗೂ ಆರ್ಸಿಬಿ ಮುಖಾಮುಖಿಯಾಗಿವೆ. ಸಿಎಸ್ಕೆ 5 ಪಂದ್ಯ ಗೆದ್ದಿದ್ರೆ, ಆರ್ಸಿಬಿ 4 ಪಂದ್ಯ ಗೆದ್ದಿದೆ. 1 ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ.
ಇದನ್ನೂ ಓದಿ:ಟಿಕೆಟ್ ತೋರಿಸಿ ಎಂದಿದ್ಕೆ ಚಾಕು ಹಾಕೇ ಬಿಟ್ಟ.. ಚಾಲುಕ್ಯ ರೈಲಿನಲ್ಲಿ ನಡೀತು ಬರ್ಬರ ಕೊಲೆ
ಇತಿಹಾಸದ ಲೆಕ್ಕಾಚಾರದಲ್ಲಿ ಆರ್ಸಿಬಿ ಎದುರು ಚೆನ್ನೈ ಸೂಪರ್ ಕಿಂಗ್ಸ್ ದರ್ಬಾರ್ ನಡೆಸಿದೆ ಅನ್ನೋದನ್ನ ಅಂಕಿ-ಅಂಶಗಳು ಸಾರಿ ಸಾರಿ ಹೇಳ್ತಿವೆ. ಈ ಸೀಸನ್ನಲ್ಲಿ ಆರಂಭದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಆರ್ಸಿಬಿ, ರಣರೋಚಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿರೋದನ್ನ ನೋಡಿದ್ರೆ ಇತಿಹಾಸವನ್ನೇ ಬದಲಿಸೋ ಎಲ್ಲಾ ಲಕ್ಷಣಗಳು ಕಾಣ್ತಿವೆ. ಅದೃಷ್ಟ ದೇವತೆ ಕೂಡ ಆರ್ಸಿಬಿ ಪರವೇ ಇರೋದ್ರಿಂದ ಗೆಲುವಿನ ಸಾಧ್ಯತೆ ಹೆಚ್ಚಿದೆ. ಅಭಿಮಾನಿಗಳ ಕುತೂಹಲ ಕೂಡ ದುಪ್ಪಟ್ಟಾಗಿದ್ದು, ಆರ್ಸಿಬಿಯ ಆಟ ಹೇಗಿರುತ್ತೆ ಕಾದು ನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ