/newsfirstlive-kannada/media/media_files/2025/08/01/usa-prez-donald-trump-and-modi-2025-08-01-14-12-31.jpg)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಡೀ ವಿಶ್ವದ ಜೊತೆ ತೆರಿಗೆಯ ಹುಚ್ಚಾಟಕ್ಕೆ ಇಳಿದಿದ್ದಾರೆ. ತೆರಿಗೆ ಎಂಬ ಅಂಕುಶ ಹಿಡಿದು ವಿಶ್ವದ ಸೋ ಕಾಲ್ಡ್ ದೊಡ್ಡಣ್ಣ ಎಲ್ಲಾ ದೇಶಗಳನ್ನ ಗಿರಗಿಟ್ಲೆ ಆಡಿಸ್ತಿದ್ದಾರೆ. ಇದೀಗ ಭಾರತದ ಮೇಲೂ ಟ್ರಂಪ್ ತೆರಿಗೆ ಕೆಂಗಣ್ಣು ಬಿದ್ದಿದೆ. ರಷ್ಯಾ ಜೊತೆಗಿನ ಭಾರತದ ಸ್ನೇಹ ಟ್ರಂಪ್‌ನ ತಲೆತಿರುಗಿಸಿದೆ. ಇದಕ್ಕೆ ಪರ್ಯಾಯ ಮಾರ್ಗಕ್ಕಾಗಿ ಮೋದಿ ಸರ್ಕಾರ ಸಿದ್ಧತೆ ನಡೆಸಿದೆ.
ಭಾರತದ ಉತ್ಪನ್ನಗಳಿಗೆ ಶೇ.50ರಷ್ಟು ತೆರಿಗೆ!
ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೇ.. ಅಮೆರಿಕ-ರಷ್ಯಾ ನಡುವಿನ ಶೀತಲ ಸಮರ ಭಾರತಕ್ಕೆ ಪೆಟ್ಟು ಬಿದ್ದಿದೆ. ರಷ್ಯಾದಿಂದ ಭಾರತ ತೈಲೋತ್ಪನ್ನಗಳನ್ನ ಆಮದು ಮಾಡಿಕೊಳ್ತಿರೋದು ಟ್ರಂಪ್ ಹೊಟ್ಟೆ ಉರಿಗೆ ಕಾರಣವಾಗಿದೆ. ಇದೇ ನೆಪವೊಡ್ಡಿ ಭಾರತದ ಉತ್ಪನ್ನಗಳ ಮೇಲಿದ್ದ ತೆರಿಗೆಯನ್ನ ಅಧಿಕೃತವಾಗಿ ಏರಿಕೆ ಮಾಡಿದ್ದಾರೆ. ನಾಳೆಯಿಂದ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳಿಗೆ ಹೆಚ್ಚುವರಿ ತೆರಿಗೆ ಬರೆ ಬೀಳಲಿದೆ.
ಇದನ್ನೂ ಓದಿ: ಗಣೇಶನ ಮುಳುಗಿಸಲು ಬೆಂಗಳೂರಲ್ಲಿ ಖಡಕ್ ರೂಲ್ಸ್.. ಎಲ್ಲೆಲ್ಲಿ ವಿಸರ್ಜನೆಗೆ ಅವಕಾಶ..?
ನಾಳೆಯಿಂದ ಅಮೆರಿಕ ತೆರಿಗೆ ಬರೆ!
ಈಗಾಗಲೇ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ಟ್ಯಾರಿಫ್ ಏರಿಕೆ ಮಾಡಿರೋದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ರು. ಇದೀಗ ನಾಳೆ ಅಂದ್ರೆ ಆಗಸ್ಟ್ 27ರ ರಾತ್ರಿ 12 ಗಂಟೆ 01 ನಿಮಿಷಕ್ಕೆ ಅಮೆರಿಕ ತೆರಿಗೆ ಏರಿಕೆ ನೀತಿ ಜಾರಿಯಾಗಲಿದೆ. ಶೇಕಡ 25ರಷ್ಟು ಇದ್ದ ತೆರಿಗೆಯನ್ನ ಮತ್ತೆ ಶೇಕಡ 25ಕ್ಕೆ ಯುಎಸ್ಎ ಏರಿಸಿದೆ. ಈ ಮೂಲಕ ಭಾರತದ ಉತ್ಪನ್ನಗಳಿಗೆ ಟ್ರಂಪ್ ಶೇ.50ರಷ್ಟು ತೆರಿಗೆ ವಿಧಿಸಿದಂತೆ ಆಗಲಿದೆ. ಭಾರತದ ಮೇಲೆ USA ಹೇರಿದ ತೆರಿಗೆ ಆದೇಶ ನಾಳೆಯಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.
ಟ್ರಂಪ್‌ಗೆ ಪ್ರಧಾನಿ ಮೋದಿ ದಿಟ್ಟ ಉತ್ತರ
ಡೊನಾಲ್ಡ್ ಟ್ರಂಪ್ ಆಡ್ತಿರೋ ತೆರಿಗೆ ಆಟ ಭಾರತವನ್ನ ಬಡಿದೆಬ್ಬಿಸಿದೆ. ಮಿತ್ರನಂತೆ ವರ್ತಿಸುತ್ತಾ ಹಿತಶತ್ರುವಿನಂತೆ ಕಾಡ್ತಿರೋ ಅಮೆರಿಕ ಅಧ್ಯಕ್ಷನಿಗೆ ಭಾರತದ ಪ್ರಧಾನಿ ದಿಟ್ಟ ಉತ್ತರ ಕೊಟ್ಟಿದ್ದಾರೆ. ಗುಜರಾತ್‌ನಲ್ಲಿ ಮಾತನಾಡಿರೋ ನಮೋ, ಭಾರತದ ಮಧ್ಯಮ ವರ್ಗ ಮತ್ತು ರೈತರ ಹಿತದೃಷ್ಟಿಗೆ ದಕ್ಕೆಯಾಗದಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಚೀನಾಕ್ಕೂ ಶೇ.200ರಷ್ಟು ತೆರಿಗೆ ಏರಿಕೆ ಬ್ಲ್ಯಾಕ್‌ಮೇಲ್!
ಭಾರತಕ್ಕಷ್ಟೇ ಅಲ್ಲ.. ನೆರೆಯ ರಾಷ್ಟ್ರ ಚೀನಾಕ್ಕೂ ಅಮೆರಿಕ ಅಧ್ಯಕ್ಷ ಟ್ರಂಪ್ ತೆರಿಗೆ ಏರಿಸುವ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ. ಚೀನಾ ಏನಾದ್ರು ಅಮೆರಿಕಾಗೆ ಅಪರೂಪದ ಖನಿಜವನ್ನ ರಫ್ತು ಮಾಡೋದನ್ನ ನಿರ್ಬಂಧಿಸಿದ್ರೆ ಶೇ200 ರಷ್ಟು ತೆರಿಗೆಯನ್ನ ವಿಧಿಸುತ್ತೇವೆ ಅಂತ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ. ಇದ್ರ ಮಧ್ಯೆಯೂ ಚೀನಾದ 6 ಲಕ್ಷ ವಿದ್ಯಾರ್ಥಿಗಳಿಗೆ ಯುಎಸ್‌ನಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ನೀಡೋದಾಗಿ ಟ್ರಂಪ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟ್ರಂಪ್ ಒಂದು ರೀತಿಯ ವಿಶ್ವಕ್ಕೆ ಬ್ಲ್ಯಾಕ್‌ಮೇಲರ್ ರೀತಿ ಕಾಣಿಸುತ್ತಿದ್ದಾರೆ. ಒಂದ್ಕಡೆ ಶಾಂತಿದೂತ ಎನ್ನುತ್ತಾ ವಿಶ್ವದ ನೆಮ್ಮದಿಗೆ ಭಂಗ ತರ್ತಿದ್ದಾರೆ. ಟ್ರಂಪ್ ತೆರಿಗೆ ಆಟಾಟೋಪಕ್ಕೆ ವಿಶ್ವದ ರಾಷ್ಟ್ರಗಳ ಟಕ್ಕರ್ ಹೇಗಿರುತ್ತೋ ನೋಡ್ಬೇಕು.
ಇದನ್ನೂ ಓದಿ: ವಸಂತ್ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೇಸ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ