/newsfirstlive-kannada/media/post_attachments/wp-content/uploads/2024/04/SIDDU_HDK-1.jpg)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಕೇಂದ್ರ ಸಚಿವ ಕುಮಾರಸ್ವಾಮಿಗೂ ಅಕ್ಷರಶಃ ಯುದ್ಧ ನಡೀತಿದೆ.. ಕಪ್ಪು ಚುಕ್ಕೆಯ ಕಾಳಗ ಅರೆಸ್ಟ್ ಪಾಲಿಟಿಕ್ಸ್ವರೆಗೂ ಹೋಗಿ ಮಹಾಯುದ್ಧದ ತೀವ್ರತೆ ಪಡ್ಕೊಂಡಿದೆ.. ಆರಂಭದಲ್ಲಿ ಡಿಕೆ ವರ್ಸಸ್ ಹೆಚ್ಡಿಕೆಯಂತಿದ್ದ ರಂಪಾಟ ಇದೀಗ ಸಿದ್ದುನೋ? ಹೆಚ್ಡಿಕೆನೋ? ಅನ್ನೋ ಮಟ್ಟಿಗೆ ಬದಲಾಗ್ತಿರೋದೇಕೆ? ಬಹುದೊಡ್ಡ ಶಪಥವೊಂದು ರಾಜ್ಯ ರಾಜಕಾರಣದ ದಿಕ್ಕು ದೆಸೆಗಳನ್ನೇ ಬದಲಿಸಲಿದೆಯೇ? ಮುಂದಿನ ಆರೇ ಆರು ತಿಂಗಳಲ್ಲಿ ಸಿದ್ದು ನೇತೃತ್ವದ ಸರ್ಕಾರವೇ ಉರುಳಲಿದೆಯೇ?
ರಾಜ್ಯ ರಾಜಕೀಯದ ಪಟ್ಟುಗಳ ಪಡಸಾಲೆ, ರಣವ್ಯೂಹಗಳ ಪ್ರೌಢಶಾಲೆ, ತಂತ್ರಗಾರಿಕೆಗಳ ತವರೂರಿನ ಸೀನಿಯರ್ಗೂ ಜ್ಯೂನಿಯರ್ಗೂ ಯುದ್ಧ ನಡೀತಿದೆ, ಒಂದೇ ಗರಡಿ ಮನೆಯ ಮಣ್ಣಿನಲ್ಲೇ ಕಸರತ್ತು ಮಾಡಿಕೊಂಡ ಕಲಿಗಳ ಮಧ್ಯೆ ಜಂಗೀಕುಸ್ತಿ ನಡೀತಿದೆ. ಯಾರ ಕೈಗೆ ಕಡಗ ಸಿಗುತ್ತೆ? ಯಾರ ಮೀಸೆ ಮಣ್ಣಾಗುತ್ತೆ? ಅನ್ನೋ ಕೌತುಕವಷ್ಟೇ ಕದನದ ಮಧ್ಯೆ ಉಳಿದಿದೆ.
ಇದನ್ನೂ ಓದಿ:ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ, ಡಿಸಿಎಂ; ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅಕ್ಷರಶಃ ರಾಜಕೀಯ ಸಂಗ್ರಾಮದಲ್ಲಿ ಕಾದಾಡುತ್ತಿದ್ದಾರೆ.. ಮೊದಲಿಗೆ ಇದು ಬರೀ ರಾಮನಗರದ ಯುದ್ಧ, ಒಕ್ಕಲಿಗ ನಾಯಕತ್ವದ ಸಂಗ್ರಾಮದಂತೆ ಕಂಡಿತ್ತು, ಆದ್ರೀಗ, ಯುದ್ಧದ ತೀವ್ರತೆ ಹೇಗಿದೆ ಅಂದ್ರೆ ತನ್ನಪ್ಪನೊಂದಿಗೆ ಪಟ್ಟುಗಳ ಪಾಳೇಗಾರಿಕೆ ಮಾಡಿದ್ದ ಸೀನಿಯರ್ ವಿರುದ್ಧವೇ ಹೆಚ್ಡಿಕೆ ತೊಡೆ ತಟ್ಟಿದ್ದಾರೆ.
ಮೇ 20, 2023 ಎರಡನೇ ಸಲ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಇಲ್ಲಿಯ ತನಕ ಅದೊಂದು ಚರ್ಚೆ ನಡೀತಾನೇ ಇದೆ. ಈ ಸರ್ಕಾರ ಜಾಸ್ತಿ ದಿನ ಇರೋದಿಲ್ಲ. ಈ ಸರ್ಕಾರದ ಆಯುಷ್ಯ ಮುಗೀತಾ ಬಂತು. ಆಪರೇಷನ್ ಕಮಲ ನಡೀತಿದೆ. ಹೀಗೆ ತರಹೇವಾರಿ ಬಾಂಬ್ಗಳು ಸಿಡಿಯುತ್ತಲೇ ಇದ್ವು.
ಯಾವಾಗ 2024 ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾ ದಳ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ತೋ. ಅದ್ಯಾವಾಗ 2 ಸ್ಥಾನ ಗೆದ್ದ ಜೆಡಿಎಸ್ಗೆ ಕೇಂದ್ರ ಮಂತ್ರಿ ಸ್ಥಾನವನ್ನ ಮೋದಿ, ಅಮಿತ್ ಶಾ ನೀಡಿದ್ರೋ..ಆ ಬಳಿಕ ಸಿದ್ದು ಸರ್ಕಾರ ಹೆಚ್ಚು ದಿನ ಇರೋದಿಲ್ಲ ಅನ್ನೋ ಚರ್ಚೆಗೆ ಜೀವ ಬಂದುಬಿಡ್ತು.. ಇತ್ತೀಚೆಗಂತೂ ಬಹಿರಂಗವಾಗಿಯೇ ಸಿಎಂ ಸಿದ್ದರಾಮಯ್ಯ ಇಂಥದ್ದೊಂದು ಆರೋಪ ಮಾಡ್ತಿದ್ದಾರೆ..
ಅಲ್ಪಸಂಖ್ಯಾತ, ಹಿಂದುಳಿದ, ದಲಿತರ ವಿರೋಧಿಗಳಿಗೆ ಈ ಸರ್ಕಾರ ಸುಸ್ಥಿರವಾಗಿರೋದು ಬೇಕಿಲ್ಲ. ಗ್ಯಾರಂಟಿಗಳನ್ನು ಬಡವರಿಗೆ ಕೊಡ್ತಿರೋದಕ್ಕೇ ಅವರಿಗೆ ಸಹಿಸೋಕೆ ಆಗ್ತಿಲ್ಲ. ಹಾಗಾಗಿಯೇ ನಮ್ಮ ಸರ್ಕಾರವನ್ನು ಕೆಡವೋದಕ್ಕೆ ಬಿಜೆಪಿ, ಜೆಡಿಎಸ್ ಷಡ್ಯಂತ್ರ ಮಾಡ್ತಿದೆ ಅನ್ನೋ ಮಾತನ್ನ ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದ್ರು. ಅಸಲಿಗೆ ದೆಹಲಿ ದರ್ಬಾರ್ನಲ್ಲೇ ಜಾತ್ಯಾತೀತ ಜನತಾದಳದ ವರಿಷ್ಠ ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ ದೇವೇಗೌಡ ಶಪಥ ಮಾಡಿದ್ದಾರೆ ಅನ್ನೋ ಸಂಗತಿ ಇದೀಗ ಹೊರ ಬಿದ್ದಿದೆ. ಹಾಗಾಗಿಯೇ ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಸೂಕ್ಷ್ಮವಾಗಿ ಒಂದು ಸುಳಿವನ್ನೂ ನೀಡಿದ್ದಾರೆ.
6 ತಿಂಗಳೊಳಗೆ ಸಿದ್ದರಾಮಯ್ಯ ಇಳಿಸೋ ಪ್ಲಾನ್ ಮಾಡಿದ್ರಾ ಅಪ್ಪ ಮಗ?
ಮುಂದಿನ ಆರೇ ಆರು ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯರನ್ನ ಕಿತ್ತು ಹಾಕ್ತೀವಿ. ಸಿದ್ದು ನೇತೃತ್ವದ ಸರ್ಕಾರವನ್ನು ಉರುಳಿಸ್ತೀವಿ ಅನ್ನೋ ಶಪಥವನ್ನು ದೆಹಲಿ ದರ್ಬಾರ್ನಲ್ಲಿ ಅಪ್ಪ ಮಗ ಮಾಡಿದ್ದಾರೆ ಎನ್ನಲಾಗುತ್ತಿದೆ.. ಸಿದ್ದು ಸರ್ಕಾರ ಕೆಡವೋ ಅಂತರ್ಯುದ್ಧಕ್ಕೆ ದೆಹಲಿ ದರ್ಬಾರ್ ಸಕಲ ಸವಲತ್ತುಗಳನ್ನೂ ನೀಡುತ್ತಿದೆಯಂತೆ.. ಇಂಥದ್ದೊಂದು ಸಂಗತಿ ಸಿಎಂ ಸಿದ್ದರಾಮಯ್ಯರ ಕಿವಿಗೆ ಬಿದ್ದು ಹಲವು ದಿನಗಳೇ ಉರುಳಿವೆ.. ಮೊದಲಿಗೆ ಡಿಕೆ ವರ್ಸಸ್ ಹೆಚ್ಡಿಕೆ ಅನ್ನೋ ಯುದ್ಧ ಆರಂಭವಾದಾಗ್ಲೇ ಸರ್ಕಾರವೂ ಕೂಡ ಎಚ್ಚೆತ್ತುಕೊಂಡಿತ್ತು. ಇದೀಗ ಯುದ್ಧದ ಅಸಲಿ ಮುಖ ಅನಾವರಣಗೊಂಡಿದೆ ಅನ್ನೋದನ್ನ ಅರಿತಿರೋ ಸಿದ್ದರಾಮಯ್ಯ ತಮ್ಮ ಸಂಪುಟಕ್ಕೆ ಒಂದು ಸಂದೇಶವನ್ನೂ ರವಾನಿಸಿದ್ದಾರಂತೆ.
ಇದನ್ನೂ ಓದಿ:ಚರ್ಚೆ ಮಾಡ್ಲಿ, ಧರಣಿ ಮಾಡ್ಲಿ, ಏನಾದ್ರೂ ಮಾಡ್ಲಿ.. ನೀರಿನ ದರ ಹೆಚ್ಚಳ ಮಾಡಿಯೇ ಮಾಡ್ತೀನಿ ಎಂದ ಡಿ.ಕೆ ಶಿವಕುಮಾರ್
"ಆ ದೇವೇಗೌಡರೇ ಬಂದ್ರೂ ಒಗ್ಗಟ್ಟಾಗಿರೋಣ" ಸಿದ್ದು ಸಮರ ಸಂದೇಶ!
ಪದೇ ಪದೇ ಸಿದ್ದರಾಮಯ್ಯ ಹೇಳುತ್ತಾ ಬಂದಿದ್ದು ಇದೇ.. ಹಿಂದುಳಿದವನೊಬ್ಬ. ಶೋಷಿತನೊಬ್ಬ. ಎರಡೆರಡು ಸಲ ಸಿಎಂ ಸ್ಥಾನಕ್ಕೇರಿದ್ರೆ ಪಟ್ಟಭದ್ರರು ಸಹಿಸೋದಿಲ್ಲ. ಪಾಳೇಗಾರಿಕೆ ಮನಃಸ್ಥಿತಿ ಅರಗಿಸಿಕೊಳ್ಳೋದಿಲ್ಲ. ಏನಾದ್ರೂ ಷಡ್ಯಂತ್ರ ಮಾಡಿ ಇಳಿಸೋ ಪ್ರಯತ್ನ ಮಾಡ್ತಾರೆ. ದೇವರಾಜ ಅರಸುಗೂ ಹೀಗೇ ಆಯ್ತು. ಸಾರೇಕೊಪ್ಪ ಬಂಗಾರಪ್ಪಗೂ ಹೀಗೇ ಆಯ್ತು. ಇದೀಗ ತನಗೂ ಹೀಗೇ ಆಗಲಿದೆ ಅನ್ನೋ ಸುಳಿವು ನೀಡುತ್ತಾ ಬಂದಿದ್ರು ಸಿದ್ದರಾಮಯ್ಯ. ಇದೀಗ ತಮ್ಮ ವಿರುದ್ಧ ಬಹುದೊಡ್ಡ ಆರೋಪ ಕೇಳಿಬಂದ ಸಮಯದಲ್ಲೇ , ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿದ್ದಾರೆ. ಅಲ್ಲಿ ಅತ್ಯಂತ ರೋಚಕ ಸಮರ ಸಂದೇಶವನ್ನೂ ತಮ್ಮ ಸಂಪುಟಕ್ಕೆ ನೀಡಿದ್ದಾರೆ ಎನ್ನಲಾಗ್ತಿದೆ. ಸಾಕ್ಷಾತ್ ದೇವೇಗೌಡರು ತಮ್ಮ ಮಗ ಕುಮಾರಸ್ವಾಮಿಯೊಂದಿಗೆ ಸಂಚು ಮಾಡಿ ನಮ್ಮ ಸರ್ಕಾರ ಕೆಡವೋದಕ್ಕೆ ಮುಂದಾಗ್ತಿದ್ದಾರೆ.
ಇದನ್ನೂ ಓದಿ:ಚನ್ನಪಟ್ಟಣ ಬೈಎಲೆಕ್ಷನ್ಗೆ ರೆಡಿಯಾದ್ರಾ ನಿಖಿಲ್ ಕುಮಾಸ್ವಾಮಿ..? ‘ಸೈನಿಕ’ ಬಿಗಿ ಪಟ್ಟು, ದಳಪತಿ ದಂಡಯಾತ್ರೆ
ಆರು ತಿಂಗಳಿನಿಂದ ನಮ್ಮ ಶಾಸಕರನ್ನು ಸೆಳೆಯೋ ಪ್ರಯತ್ನವನ್ನೂ ಮಾಡ್ತಿದ್ದಾರೆ. ಸಿದ್ದರಾಮಯ್ಯನ ಸರ್ಕಾರವನ್ನು ಆರು ತಿಂಗಳಲ್ಲಿ ಕಿತ್ತು ಬಿಸಾಕ್ತೀವಿ ಅಂತ ಅಮಿತ್ ಶಾ ಎದುರು ಶಪಥ ಮಾಡಿದ್ದಾರೆ.ಇದಕ್ಕೆ ರಾಜ್ಯ ಬಿಜೆಪಿ ಘಟಕವೂ ಸಹಕರಿಸುತ್ತಿದೆ.ಬಿ.ಎಲ್ ಸಂತೋಷ್ ಸಹ ಕುಮಾರಸ್ವಾಮಿಗೆ ಸಕಲ ಬೆಂಬಲಗಳನ್ನೂ ನೀಡಿದ್ದಾರೆ. ಇಂಥಾ ಹೊತ್ತಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇರೋಣ ಅನ್ನೋ ಸಮರ ಸಂದೇಶವನ್ನು ಸಿದ್ದು ನೀಡಿದ್ದಾರೆ ಎನ್ನಲಾಗುತ್ತಿದೆ.
ಸಿದ್ದು ಸರ್ಕಾರದ ಶವಯಾತ್ರೆ ಆರಂಭ ಅಂತಿದ್ರು ಕುಮಾರಸ್ವಾಮಿ!
ಸದ್ಯ, ಕಾಂಗ್ರೆಸ್ ವಲಯದಲ್ಲಿ ಚರ್ಚೆ ಆಗ್ತಿರೋ ಸಂಗತಿಗೆ ಪೂರಕ ಎನ್ನುವಂತೆಯೇ ಒಂದಷ್ಟು ಸಾಂದರ್ಭಿಕ ಸಾಕ್ಷ್ಯಗಳೂ ಸಹ ನಮ್ಮ ಕಣ್ಣೆದುರಿಗೆ ಸಿಗುತ್ತವೆ. ಸಿದ್ದು ವಿರುದ್ಧ ಕೇಳಿ ಬಂದ ಮುಡಾ ಹಗರಣ ಖಂಡಿಸಿ, ಸಿಎಂ ರಾಜೀನಾಮೆಗೆ ಒತ್ತಾಯಿಸಿ ಕಮಲ ದಳ ಮೈಸೂರು ಚಲೋ ಆರಂಭಿಸಿತ್ತು. ಬಿಜೆಪಿ ಜೆಡಿಎಸ್ನ ಪಾದಯಾತ್ರೆಯ ಆರಂಭದ ದಿನದಲ್ಲೇ ರಾಮನಗರದಲ್ಲಿ ಸಿದ್ದು ಸರ್ಕಾರದ ಶವ ಯಾತ್ರೆ ಮಾತಾಡುವ ಮೂಲಕ ಹೆಚ್ಡಿಕೆ ಸುಳಿವನ್ನೂ ನೀಡಿದ್ರು.
ನಿಮ್ಮ ಸರ್ಕಾರದ ಶವಯಾತ್ರೆ. ನಿಮ್ಮಗಳ ಶವಯಾತ್ರೆ ಶುರುವಾಯ್ತು ಅನ್ನೋ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಇಲ್ಲಿಂದ್ಲೇ ಕೊನೆ ಮೊಳೆ ಹೊಡೀತಿದ್ದೀವಿ ಅನ್ನೋ ಮಾತನ್ನ ಹೇಳಿದ್ರು ಕುಮಾರಸ್ವಾಮಿ.. ಇದೆಲ್ಲವನ್ನೂ ಸೂಕ್ಷ್ಮವಾಗಿ ನೋಡಿದ್ರೆ ಒಂದು ಅನುಮಾನವೂ ವ್ಯಕ್ತವಾಗ್ತಿತ್ತು. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಜೆಡಿಎಸ್ ನಡೆಸುತ್ತಿರೋ ಮುಡಾ ರಣಕೇಕೆಯೂ ಪೂರ್ವಾಗ್ರಹಪೀಡಿತ, ಪ್ರಚೋದಾನಾತ್ಮಕ, ಪೂರ್ವ ನಿಯೋಜಿತ ರಣತಂತ್ರದ ಒಂದು ಭಾಗವೇ ಅನ್ನೋ ಸಂಶಯವೂ ಸಹ ಬೇರೆಯದ್ದೇ ಕಥೆ ಹೇಳುತ್ತಿದೆ.. ಯಾಕಂದ್ರೆ, ಮೈಸೂರು ಚಲೋ ಯಾತ್ರೆಯ ಕೊನೆಯ ದಿನದ ಭಾಷಣದಲ್ಲೂ ಕುಮಾರಸ್ವಾಮಿ ಈ ಸರ್ಕಾರ ಕೆಡವೋದು ಖಚಿತ ಅನ್ನೋ ಮಾತನ್ನು ಹೇಳಿದ್ರು.
ಸಿಎಂಗೆ ಪ್ರಾಸಿಕ್ಯೂಷನ್ ಪರ್ಮೀಷನ್ ಮೂಲಕ ಚೆಕ್ಮೆಟ್ ಇಡಿಸಿದ್ರಾ?
ಅನುದಿನವೂ ಕಾಂಗ್ರೆಸ್ ಇದೇ ಆರೋಪ ಮಾಡುತ್ತಿದೆ.. ರಾಜ್ಯದ ಸಂವಿಧಾನದ ಮುಖ್ಯಸ್ಥರಾಗಿರೋ ರಾಜ್ಯಪಾಲರು ಕೈಗೊಂಬೆಯಾಗಿದ್ದಾರೆ. ಜಭವನವನ್ನು ಬಿಜೆಪಿ, ಜೆಡಿಎಸ್ ತಮ್ಮ ಭವನವನ್ನಾಗಿ ಮಾಡ್ಕೊಂಡಿದೆ. ಗಾಗಿಯೇ ಒತ್ತಡದ ಕಾರಣಕ್ಕೆ ಗೌರ್ನರ್ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ ಅನ್ನೋ ಆರೋಪ ಹೊರಿಸುತ್ತಿದೆ ಕಾಂಗ್ರೆಸ್. ತಿಂಗಳುಗಳ ಹಿಂದೆಯೇ ದೆಹಲಿ ದರ್ಬಾರ್ನಲ್ಲಿ ಅಮಿತ್ ಶಾ ಎದುರು ಅಪ್ಪ ಮಗ ಶಪಥ ಮಾಡಿದ್ರು ಅನ್ನೋ ಸಂಗತಿ ಚರ್ಚೆ ಆಗ್ತಿರೋ ಸಂದರ್ಭ ಮತ್ತೂ ಒಂದು ಅನುಮಾನ ವ್ಯಕ್ತವಾಗುತ್ತಿದೆ. ಇದೇ ಶಪಥದ ಮುಂದುವರೆದ ಭಾಗವೇ ಪ್ರಾಸಿಕ್ಯೂಷನ್ ಪರ್ಮೀಷನ್ನ ಚೆಕ್ಮೆಟ್ ಇರಬಹುದಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಹಾಗಾಗಿಯೇ ಸಿಎಂ ಸಿದ್ದರಾಮಯ್ಯ ಸಹ ಪವರ್ಫುಲ್ ಪಾನ್ ಮೂವ್ ಮಾಡೋ ಮೂಲಕ ಪಿಕ್ಚರ್ ಅಭೀ ಭಾಕಿ ಹೈ ಅಂತಿದ್ದಾರೆ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ದೆಹಲಿ ಯಾತ್ರೆ.. ಹೈಕಮಾಂಡ್ ಮಟ್ಟದಲ್ಲಿ ಹೋರಾಟಕ್ಕೆ ರಣತಂತ್ರ
ಯಾವಾಗ ಸಿಎಂ ಸಿದ್ದರಾಮಯ್ಯರ ಸರ್ಕಾರ ಕೆಡವೋದಕ್ಕೆ ದೆಹಲಿ ಬೆಂಬಲದೊಂದಿಗೆ ಕಮಲ ದಳ ಪ್ರಾಸಿಕ್ಯೂಷನ್ ಪರ್ಮೀಷನ್ ಪರ್ಕೊಂಡ್ರು ಅನ್ನೋ ಆರೋಪವಿದೆಯೋ? ಅದೇ ರೀತಿಯಲ್ಲೇ ರಾಜ್ಯದ ಆಡಳಿತಾರೂಢ ಸರ್ಕಾರವಾಗಿ ತಮಗಿರೋ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಒಗ್ಗೂಡಿಸಿಕೊಂಡು ಸಿದ್ದು ಸಹ ಕುಮಾರಸ್ವಾಮಿ ವಿರುದ್ಧದ ಕೇಸ್ಗೂ ಪ್ರಾಸಿಕ್ಯೂಷನ್ ಪರ್ಮೀಷನ್ ಅನ್ನ ರಾಜ್ಯಪಾಲರು ನೀಡುವಂಥಾ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಯಾವಾಗ ಗಣಿ ಗುತ್ತಿಗೆಗೆ ಭೂಮಿ ಮಂಜೂರು ಹಗರಣದ ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ದೂರು ಕೊಟ್ಟ ಕೂಡಲೇ ಕುಮಾರಸ್ವಾಮಿ ಪ್ರೆಸ್ಮೀಟ್ ಮಾಡಿ ಗುಡುಗಿದ್ರು.. ಒಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೇ ಕೇಂದ್ರ ಸಚಿವ ಸ್ಥಾನವೂ ಕುಮಾರಸ್ವಾಮಿ ಕಳೆದುಕೊಳ್ಳಬೇಕಾಗುತ್ತದೆ.. ಇದೇ ಕಾರಣಕ್ಕೇ ಇದೀಗ ಕುಮಾರಸ್ವಾಮಿ ಕಪ್ಪು ಚುಕ್ಕೆಯ ಕಾಳಗ ಆರಂಭಿಸಿದ್ದಾರೆ.. ಕಪ್ಪು ಚುಕ್ಕೆಯ ಕಾಳಗದ ಕ್ಲೈಮ್ಯಾಕ್ಸ್ ಆಗೋ ಸಾಧ್ಯತೆ ಇದೆಯೇ? ಹೌದು ಎನ್ನುತ್ತಿದೆ ಉಭಯ ನಾಯಕರ ಮಾತಿನ ಬ್ರಹ್ಮಾಸ್ತ್ರಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ