ವಿಶ್ವದ ದೈತ್ಯ ಬಾಡಿಬಿಲ್ಡರ್ ಎಂದೇ ಖ್ಯಾತಿ ಪಡೆದಿದ್ದ ಗೋಲೆಮ್ ಇನ್ನಿಲ್ಲ
ಹೃದಯಾಘಾತದಿಂದ 36ನೇ ವಯಸ್ಸಿನಲ್ಲಿಯೇ ಮೃತಪಟ್ಟ ದೈತ್ಯದೇಹಿ
ಬಾಡಿಬಿಲ್ಡರ್ಗಳಲ್ಲಿಯೇ ಅತಿಹೆಚ್ಚು ಹೃದಯಾಘಾತಗಳು ಕಾಣುತ್ತಿರುವುದೇಕೆ
ದಷ್ಟಪುಷ್ಟ ದೇಹ, ಬೆಟ್ಟವನ್ನೆ ಕುಟ್ಟಿ ಪುಡಿ ಮಾಡಬಲ್ಲಂತಹ ರಟ್ಟೆಗಳು. ನಿತ್ಯ ಜಿಮ್ನಲ್ಲಿ ಬೆವರನ್ನು ನೀರಿನಂತೆ ಹರಿಸಿ, ದೇಹವನ್ನು ಕಡೆದಿಟ್ಟ ಶಿಲೆಯಂತೆ ಹುರಿಗೊಳಿಸಿ ಸದೃಢ ದೇಹದಲ್ಲಿಯೇ ಸದೃಢ ಮನಸ್ಸು ಇರುತ್ತದೆ ಎಂದು ಸಾಬೀತುಮಾಡುತ್ತಾರೆ ಬಾಡಿ ಬಿಲ್ಡರ್ಗಳು. ಹೀಗೆಯೇ ನಿತ್ಯ ಜಿಮ್ನಲ್ಲಿ ಕಸರತ್ತಿಗೆ ದೇಹವನ್ನೊಡ್ಡಿ, ಹಲವು ವ್ಯಾಯಾಮಗಳಲ್ಲಿ ತೊಡಗಿಸಿಕೊಂಡು ದೇಹವನ್ನು ಅಕ್ಷರಶಃ ವಜ್ರಕಾಯದಂತೆ ಹುರಿಗೊಳಿಸಿದ್ದ, ವಿಶ್ವದ ದೈತ್ಯ ಬಾಡಿಬಿಲ್ಡರ್ ಎಂದೇ ಖ್ಯಾತಿ ಪಡೆದಿದ್ದ ಗೋಲೆಮ್ ಯೆಫಿಮ್ಚ್ಕಿ ತಮ್ಮ 36ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸೆಪ್ಟಂಬರ್ 6 ರಂದು ಈ ದೈತ್ಯಕಾಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಕೋಮಾಗೆ ಜಾರಿದ್ದ ಗೋಲೆಮ್ ಕೆಲವು ದಿನಗಳ ನಂತರ ಇಹಲೋಕವನ್ನು ತ್ಯಜಿಸಿದ್ದಾರೆ. ಸದಾ ಜಿಮ್ನಲ್ಲಿ ದೇಹವನ್ನು ಹುರಿಗೊಳಸುತ್ತಿದ್ದ ಗೋಲೆಮ್ ಯಾವುದೇ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಎಂದಿಗೂ ಭಾಗವಹಿಸಿದ್ದಿಲ್ಲ. ಆದರೂ ಪ್ರೊಫೆಷನಲ್ ಬಾಡಿ ಬಿಲ್ಡರ್ಗಳೇ ನಾಚುವಂತಹ ದೇಹವನ್ನಿಟ್ಟುಕೊಂಡಿದ್ದರು ಗೋಲೆಮ್. ಆದರೆ ತಮ್ಮ ದೇಹದಾರ್ಢ್ಯದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅವರಿಗೆ ಅಲ್ಪಸ್ವಲ್ಪ ಆದಾಯ ಹುಟ್ಟಿಕೊಳ್ಳುತ್ತಿತ್ತು.
ಬೆಲುರಸ್ನ ಈ ಬಾಡಿಬಿಲ್ಡರ್ನ ರಟ್ಟೆಯ ಗಾತ್ರ ಅಂದ್ರೆ ಬೈಸಿಪ್ಸ್ 25 ಇಂಚಿನಷ್ಟು ಇತ್ತು ಅಂದ್ರೆ ಊಹಿಸಿಕೊಳ್ಳಿ ಅವರ ಡಯಟ್ ಹಾಗೂ ವರ್ಕೌಟ್ ಯಾವ ಮಟ್ಟದ್ದಿರಬೇಕು ಅಂತ. ಅವರು ನಿತ್ಯ 16,500 ಕ್ಯಾಲರೀಸ್ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಅವರು 273 ಕೆಜಿ ಬೆಂಚ್ಪ್ರೆಸ್, 318 ಕೆಜಿಯ ಡೆಡ್ಲಿಫ್ಟ್ ಹಾಗೂ 318 ಕೆಜಿ ಸ್ಕ್ವಾಟ್ ವರ್ಕೌಟ್ ಮಾಡಿದ್ದರು ಎನ್ನಲಾಗುತ್ತಿದೆ
ಬಾಡಿಬಿಲ್ಡರ್ಗಳಿಗೇಕೆ ಕಾಡುತ್ತಿದೆ ಈ ಪೀಡೆ..?
ನಮಗೆ ಕರ್ನಾಟಕ ರತ್ನ ಪುನಿತ್ ರಾಜಕುಮಾರ್ ಅವರ ಸಾವನ್ನು ಇಂದಿಗೂ ಕೂಡ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಕೂಡ ಹೀಗೆ ವ್ಯಾಯಾಮ ಮಾಡುವಾಗಲೇ ಎದೆನೋವು ಬಂದು ಹೃದಯಸ್ತಂಭನಗೊಂಡು ನಮ್ಮನ್ನು ಅಗಲಿ ಹೋದರು. ಅಂದಿನಿಂದಲೂ ಈ ಜಿಮ್ ವಿಚಾರದಲ್ಲಿ ಒಂದು ಅನುಮಾನ ಸದಾ ಸುದ್ದಿಯಲ್ಲಿಯೇ ಇರುತ್ತದೆ. ಆದ್ರೆ ಇದು ಅಪ್ಪುವಿಗೆ ಮಾತ್ರವಲ್ಲ ಅನೇಕ ಬಾಡಿಬಿಲ್ಡರ್ಗಳು ಕೂಡ ಹಾರ್ಟ್ ಅಟ್ಯಾಕ್ನಿಂದ ತೊಂದರೆಗೆ ಒಳಗಾಗಿದ್ದಾರೆ. ಸಾವನ್ನೂ ಅಪ್ಪಿದ್ದಾರೆ. ಆದ್ರೆ ಬಾಡಿಬಿಲ್ಡರ್ಗಳಲ್ಲಿ ಈ ರೀತಿಯಾದ ಅಪಾಯಗಳು ಹೆಚ್ಚು ಕಾಣುತ್ತಿರುವುದು ಕೋವಿಡ್ 19 ಮಹಾಮಾರಿ ಬಂದು ಹೋದ ನಂತರ ಎಂದು ಒಂದಿಷ್ಟು ಸ್ಪಷ್ಟನೆಗಳು ದೊರೆಯತ್ತಿವೆ
ಆದ್ರೆ ಒಬ್ಬ ವ್ಯಕ್ತಿ ನಿತ್ಯ ಸರಿಯಾಗಿ ವ್ಯಾಯಾಮ ಮಾಡಿ, ಸರಿಯಾದ ಆಹಾರ ಸೇವಿಸಿ ಸರಿಯಾದ ಜೀವನಶೈಲಿಯನ್ನು ತಮ್ಮದಾಗಿಸಿಕೊಂಡರೂ ಕೂಡ 30ಸೆಕೆಂಡ್ನ ಆ ಒಂದು ಹಾರ್ಟ್ ಅಟ್ಯಾಕ್ ಅವರ ಬದುಕನ್ನು ಕಸಿದುಕೊಳ್ಳುತ್ತಿದೆ. ಇದು ಯಾಕೆ ಅನ್ನೋದು ಇನ್ನೂ ಕೂಡ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಅದರಲ್ಲೂ ವೇಟ್ ಲಿಫ್ಟಿಂಗ್ನಂತ ಕಸರತ್ತು ಮಾಡುವ ಬಾಡಿಬಿಲ್ಡರ್ಗಳು ಈ ರೀತಿಯ ಅಪಾಯಕ್ಕೆ ಹೆಚ್ಚು ಸಿಲಕುತ್ತಿದ್ದಾರೆ ಅತಿಯಾಗಿ ದೇಹವನ್ನು ದುಡಿಸುವುದರಿಂದ ನಾವು ಎಷ್ಟೇ ಆಹಾರ ಶೈಲಿ ಜೀವನ ಶೈಲಿ ಪಾಲಿಸಿದರೂ ಕೂಡ ಇಂತಹ ಸಮಸ್ಯೆಗಳು ಸೃಷ್ಟಿಯಾಗುವ ಸಂಭವ ಇರುತ್ತವೆ ಎನ್ನುತ್ತಾರೆ ಕಾರ್ಡಿಯಾಲಜಿ ಫೋರ್ಟಿಸ್ ಆಸ್ಪತ್ರೆಯ ಪ್ರಧಾನ ನಿರ್ದೇಶಕರಾದ ಡಾ ಮುಂಜಿಧರ್ ಸಿಂಗ್ ಸಂಧು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ