ಭಾರತದ ಬಾಸ್ಮತಿ ಅಕ್ಕಿಗೆ ಭಾರೀ ಪೆಟ್ಟು ಕೊಟ್ಟ ಇರಾನ್ ಸಂಘರ್ಷ..! ಹೇಗೆ..?

ಜಾಗತಿಕ ಮಟ್ಟದ ರಾಜಕೀಯ ಬೆಳವಣಿಗೆಗಳು ಭಾರತದ ರೈತರು ಮತ್ತು ಅಕ್ಕಿ ವ್ಯಾಪಾರಿಗಳ ಮೇಲೆ ಪ್ರಭಾವ ಬೀರತೊಡಗಿವೆ. ಇರಾನ್‌ನಲ್ಲಿ ನಡೆಯುತ್ತಿರುವ ನಾಗರಿಕ ಅಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅಮೆರಿಕ ವಿಧಿಸಿರುವ ಹೊಸ ಸುಂಕಗಳ ಹಿನ್ನೆಲೆಯಲ್ಲಿ ಭಾರತದ ಹೆಮ್ಮೆಯ ಬಾಸ್ಮತಿ ಅಕ್ಕಿ ರಫ್ತು ಮಾರುಕಟ್ಟೆ ನೆಲಕಚ್ಚಿದೆ.

author-image
Ganesh Kerekuli
basmati rice
Advertisment
  • ಇರಾನ್ ಪ್ರತಿಭಟನೆ ಮತ್ತು ಅಮೆರಿಕದ ಸುಂಕಗಳಿಂದ ರಫ್ತು ಸ್ಥಗಿತ
  • ಬಾಸ್ಮತಿ ಅಕ್ಕಿ ಬೆಲೆಯಲ್ಲಿ ಕೆ.ಜಿ.ಗೆ 5 ರಿಂದ 10 ರೂಪಾಯಿ ಇಳಿಕೆ
  • ವಿದೇಶಿ ಪಾವತಿ ವಿಳಂಬದಿಂದ ರಫ್ತುದಾರರಿಗೆ ಆರ್ಥಿಕ ಸಂಕಷ್ಟ

ಬೆಂಗಳೂರು: ಜಾಗತಿಕ ಮಟ್ಟದ ರಾಜಕೀಯ ಬೆಳವಣಿಗೆಗಳು ಈಗ ನೇರವಾಗಿ ಭಾರತದ ರೈತರು ಮತ್ತು ಅಕ್ಕಿ ವ್ಯಾಪಾರಿಗಳ ಮೇಲೆ ಪ್ರಭಾವ ಬೀರತೊಡಗಿವೆ. ಇರಾನ್‌ನಲ್ಲಿ ನಡೆಯುತ್ತಿರುವ ನಾಗರಿಕ ಅಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅಮೆರಿಕ ವಿಧಿಸಿರುವ ಹೊಸ ಸುಂಕಗಳ (Tariffs) ಹಿನ್ನೆಲೆಯಲ್ಲಿ ಭಾರತದ ಹೆಮ್ಮೆಯ ಬಾಸ್ಮತಿ ಅಕ್ಕಿ ರಫ್ತು ಮಾರುಕಟ್ಟೆ ನೆಲಕಚ್ಚಿದೆ.

ಇದನ್ನೂ ಓದಿ: ಉಗ್ರಂ ಮಂಜುಗೆ ಮದುವೆ ಸಂಭ್ರಮ.. ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್‌..!

ರಫ್ತಿಗೆ ಹಿನ್ನಡೆ ಉಂಟಾಗಿದ್ದು ಏಕೆ?

ಭಾರತದಿಂದ ಬಾಸ್ಮತಿ ಅಕ್ಕಿಯನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಇರಾನ್ ಪ್ರಮುಖವಾದುದು. ಆದರೆ ಇತ್ತೀಚಿನ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ಅಲ್ಲಿನ ಖರೀದಿದಾರರಲ್ಲಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಪಾವತಿ ವಿಳಂಬ (Payment Delay) ಮತ್ತು ಸಾಗಾಟದ ಅನಿಶ್ಚಿತತೆಯಿಂದಾಗಿ ರಫ್ತುದಾರರು ಇರಾನ್‌ಗೆ ಅಕ್ಕಿ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮವಾಗಿ ಭಾರತದ ವಿವಿಧ ಬಂದರುಗಳಲ್ಲಿ ರಫ್ತಾಗಬೇಕಿದ್ದ ಸಾವಿರಾರು ಟನ್ ಬಾಸ್ಮತಿ ಅಕ್ಕಿ ಹಡಗು ಹತ್ತಲಾಗದೆ ಅಲ್ಲಿಯೇ ಸಿಲುಕಿಕೊಂಡಿದೆ.
ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತ

ರಫ್ತು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿಯ ದಾಸ್ತಾನು ಹೆಚ್ಚಾಗಿದ್ದು, ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬೆಲೆ ಮತ್ತಷ್ಟು ಕುಸಿದಿದ್ದು, ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಬಾಸ್ಮತಿ ಅಕ್ಕಿಯ ಹೊಸ ದರ ಪಟ್ಟಿ 

  • ಬಾಸ್ಮತಿ 1121 ತಳಿ: ಈ ಹಿಂದೆ 85 ರೂಪಾಯಿ ಇದ್ದ ಬೆಲೆ ಈಗ 80 ರೂಪಾಯಿಗೆ ಕುಸಿದಿದೆ
  • ಬಾಸ್ಮತಿ 1509 ಮತ್ತು 1718 ತಳಿ: ಈ ತಳಿಗಳ ಬೆಲೆ 70 ರೂಪಾಯಿಯಿಂದ 65 ರೂಪಾಯಿಗೆ ಇಳಿಕೆಯಾಗಿದೆ.

ಇದನ್ನೂ ಓದಿ: ಕೊನೆಗೂ ಸಿಎಂ ಕಚೇರಿಗೆ ಬಂತು ಸಂದೇಶ.. ಸದನಕ್ಕೆ ಬರ್ತಾರೆ ರಾಜ್ಯಪಾಲರು.. ಭಾಷಣ ಓದುತ್ತಾರಾ?

ಯಶವಂತಪುರ ಆರ್‌ಎಂಸಿ ಯಾರ್ಡ್‌ನಲ್ಲಿ ಅಕ್ಕಿ ರಾಶಿ

ಬೆಂಗಳೂರಿನ ಪ್ರಮುಖ ಸಗಟು ಮಾರುಕಟ್ಟೆಯಾದ ಯಶವಂತಪುರದ ಆರ್‌ಎಂಸಿ ಯಾರ್ಡ್‌ನಲ್ಲೂ ಇದರ ಬಿಸಿ ತಟ್ಟಿದೆ. ರಫ್ತು ಆಗದ ಕಾರಣ ಹಳೆಯ ಸ್ಟಾಕ್ ಇನ್ನೂ ಗೋಡಾನ್‌ಗಳಲ್ಲೇ ಉಳಿದುಕೊಂಡಿದೆ. ಹೊಸದಾಗಿ ಬಂದಿರುವ ಅಕ್ಕಿಯನ್ನು ದಾಸ್ತಾನು ಮಾಡಲು ಜಾಗವಿಲ್ಲದಂತಾಗಿದ್ದು, ಬೇಡಿಕೆಯೂ ಕುಸಿದಿದೆ.

ವ್ಯಾಪಾರಿಗಳ ಆತಂಕ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದು ನಮ್ಮ ಲಾಭದ ಮೇಲೆ ಹೊಡೆತ ನೀಡಿದೆ. ಅಕ್ಕಿ ಬೆಲೆ ವಾರದಿಂದ ವಾರಕ್ಕೆ ಇಳಿಕೆಯಾಗುತ್ತಿರುವುದು ಆತಂಕ ತಂದಿದೆ ಎಂದು ಬೆಂಗಳೂರಿನ ಅಕ್ಕಿ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಅಮೆರಿಕದ ಹೊಸ ಆರ್ಥಿಕ ನೀತಿಗಳು ಮತ್ತು ಇರಾನ್‌ನ ಒಳಗಿನ ಅಶಾಂತಿ ಶಮನವಾಗುವವರೆಗೆ ಬಾಸ್ಮತಿ ಮಾರುಕಟ್ಟೆ ಚೇತರಿಸಿಕೊಳ್ಳುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ, ದೂರದ ದೇಶದ ಅಶಾಂತಿ ಭಾರತದ 'ಸುಗಂಧ ರಾಜ' ಬಾಸ್ಮತಿ ಅಕ್ಕಿಯ ಮಾರುಕಟ್ಟೆಯ ಘಮಲನ್ನು ಕಡಿಮೆ ಮಾಡಿದೆ.

ಇದನ್ನೂ ಓದಿ: ಮತ್ತೊಂದು ಬಸ್ ಘೋರ​ ದುರಂತ.. 36 ಪ್ರಯಾಣಿಕರಿದ್ದ ಬಸ್ ಬೆಂಕಿಗೆ ಆಹುತಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Basmati rice
Advertisment