/newsfirstlive-kannada/media/media_files/2025/08/04/rahul-gandhi-case-2025-08-04-13-17-07.jpg)
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿರನ್ನು ಸುಪ್ರೀಂ ಕೋರ್ಟ್ ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಚೀನಾ ದೇಶವು ಅರುಣಾಚಲ ಪ್ರದೇಶದಲ್ಲಿ 2 ಸಾವಿರ ಚದರ ಕಿಲೋ ಮೀಟರ್ ಭಾರತದ ಭೂಮಿಯನ್ನು ಕಬಳಿಸಿದೆ ಎಂದು ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ವ್ಯಕ್ತಿಯೊಬ್ಬರು ಉತ್ತರ ಪ್ರದೇಶದ ಲಕ್ನೋದಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕೇಸ್ ರದ್ದುಪಡಿಸಬೇಕೆಂದು ರಾಹುಲ್ ಗಾಂಧಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುವಾಗ, ಸುಪ್ರೀಂ ಕೋರ್ಟ್ನ ಜಸ್ಟೀಸ್ ದೀಪಾಂಕರ್ ದತ್ತಾ ಪೀಠವು ರಾಹುಲ್ ಗಾಂಧಿರನ್ನು ತರಾಟೆಗೆ ತೆಗೆದುಕೊಂಡಿದೆ. ಭಾರತದ 2 ಸಾವಿರ ಚದರ ಕಿಲೋಮೀಟರ್ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿದೆ ಎಂದು ನಿಮಗೆ ಹೇಗೆ ಗೊತ್ತಾಯ್ತು? ಒಂದು ವೇಳೆ ನೀವು ನಿಜವಾದ ಭಾರತೀಯರಾಗಿದ್ದರೇ ನೀವು ಇದನ್ನೆಲ್ಲಾ ಹೇಳುತ್ತಿರಲಿಲ್ಲ. ನೀವು ಅಲ್ಲಿ ಇದ್ದೀರಾ? ನಿಮ್ಮ ಬಳಿ ವಿಶ್ವಾಸಾರ್ಹ ಸಾಕ್ಷಿ, ಆಧಾರ ಇದೆಯೇ? ಎಂದು ಜಸ್ಟೀಸ್ ದೀಪಾಂಕರ್ ದತ್ತಾ ಹೇಳಿದ್ದಾರೆ.
ಇದನ್ನೂ ಓದಿ:ಒಳ ಮೀಸಲು ಸಮೀಕ್ಷೆ ವರದಿ ಸರ್ಕಾರಕ್ಕೆ ಹಸ್ತಾಂತರ -ನಿವೃತ್ತ ಜಸ್ಟೀಸ್ ನಾಗಮೋಹನ್ ದಾಸ್ ಏನಂದ್ರು..?
ಕೊನೆಗೆ ಲಕ್ನೋದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ತಡೆಯಾಜ್ಞೆ ನೀಡಿದೆ. ಪ್ರತಿವಾದಿಗಳಿಗೆ ಸುಪ್ರೀಂಕೋರ್ಟ್ ನೋಟೀಸ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವು ಗಾಲ್ವಾನ್ ಕಣಿವೆಯ ಘರ್ಷಣೆಯ ಬಳಿಕ ಚೀನಾಗೆ ಶರಣಾಗತಿ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ರಾಹುಲ್ ಗಾಂಧಿ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ರಾಹುಲ್ ಗಾಂಧಿ ಇದನ್ನೆಲ್ಲಾ ಹೇಳದೇ ಇದ್ದರೆ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕ ಹೇಗಾಗುತ್ತಾರೆ ಎಂದಿದ್ದಾರೆ. ಹಾಗಾದರೆ ನೀವು ಇದನ್ನು ಪಾರ್ಲಿಮೆಂಟ್ನಲ್ಲಿ ಏಕೆ ಹೇಳಲಿಲ್ಲ? ಎಂದು ಸುಪ್ರೀಂಕೋರ್ಟ್ ಮರು ಪ್ರಶ್ನಿಸಿತು. ಜಸ್ಟೀಸ್ ದೀಪಾಂಕರ್ ದತ್ತಾ, ಚೀನಾ 2 ಸಾವಿರ ಚದರ ಕಿಲೋಮೀಟರ್ ಭಾರತದ ಭೂಮಿಯನ್ನು ಕಬಳಿಸಿದೆ ಎಂದು ನಿಮಗೆ ಹೇಗೆ ಗೊತ್ತು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:KRS ಡ್ಯಾಂಗೆ ಟಿಪ್ಪು ಸುಲ್ತಾನ್ ಅಡಿಗಲ್ಲು; ದಾಖಲೆ ಸಮೇತ ಸ್ಪಷ್ಟನೆ ಕೊಟ್ಟ ಸಚಿವ ಹೆಚ್.ಸಿ ಮಹದೇವಪ್ಪ
ಸುಪ್ರೀಂ ಕೋರ್ಟ್ ಜಡ್ಜ್ ದೀಪಾಂಕರ್ ದತ್ತಾ
ಬಳಿಕ ವಾದ ಮುಂದುವರಿಸಿದ ಅಭಿಷೇಕ್ ಮನುಸಿಂಘ್ವಿ, ಆರೋಪಗಳನ್ನು ಹೊರಿಸುವಲ್ಲಿ ತಪ್ಪು ಆಗಿದೆ. ಕ್ರಿಮಿನಲ್ ದೂರಿನ ಕಾಂಗ್ನಿಜೆನ್ಸ್ ತೆಗೆದುಕೊಳ್ಳುವ ಮುನ್ನ ರಾಹುಲ್ ಗಾಂಧಿಗೆ ಕೋರ್ಟ್ನಲ್ಲಿ ವಾದಿಸಲು ಅವಕಾಶ ಕೊಟ್ಟಿಲ್ಲ ಎಂದು ವಾದಿಸಿದ್ದರು. ಫೆಬ್ರವರಿ ತಿಂಗಳಲ್ಲಿ ಲಕ್ನೋದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ರಾಹುಲ್ ಗಾಂಧಿಗೆ ಖುದ್ದಾಗಿ ಹಾಜರಾಗಲು ಸಮನ್ಸ್ ನೀಡಿತ್ತು. ಇದನ್ನು ರಾಹುಲ್ ಗಾಂಧಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.
ಅಲಹಾಬಾದ್ ಹೈಕೋರ್ಟ್ನ ಜಡ್ಜ್ ಸುಭಾಷ್ ವಿದ್ಯಾರ್ಥಿ, ರಾಹುಲ್ ಗಾಂಧಿ ವಾದವನ್ನು ತಿರಸ್ಕರಿಸಿದ್ದರು. ತಮಗೆ ಸಮನ್ಸ್ ನೀಡುವ ಮೊದಲು ಸ್ಪೆಷಲ್ ಕೋರ್ಟ್, ಆರೋಪವನ್ನು ಪರಿಶೀಲಿಸಬೇಕಾಗಿತ್ತು. ತಮ್ಮ ವಿರುದ್ಧದ ಆರೋಪ ರಾಜಕೀಯ ಪ್ರೇರಿತ ಎಂದು ಹೈಕೋರ್ಟ್ನಲ್ಲಿ ರಾಹುಲ್ ಗಾಂಧಿ ವಾದಿಸಿದ್ದರು.
ಉತ್ತರ ಪ್ರದೇಶದ ಉದಯ ಶಂಕರ್ ಶ್ರೀವಾಸ್ತವ್ ಎಂಬುವವರು, 2022ರ ಡಿಸೆಂಬರ್ನಲ್ಲಿ ಲಕ್ನೋದ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕೇಸ್ನಲ್ಲಿ ವಿಚಾರಣೆೆಗೆ ಹಾಜರಾಗಲು ಲಕ್ನೋದ ವಿಶೇಷ ಕೋರ್ಟ್, ರಾಹುಲ್ ಗಾಂಧಿಗೆ ಸಮನ್ಸ್ ನೀಡಿತ್ತು. ಈ ಸಮನ್ಸ್ ಅನ್ನು ರಾಹುಲ್ ಗಾಂಧಿ ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಾಳೆಯ ಬದಲು ಆಗಸ್ಟ್ 8 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಿಂದ ಚುನಾವಣಾ ಆಯೋಗದ ವಿರುದ್ಧ ಸಮಾವೇಶ
ತಮ್ಮ ಆರೋಪವನ್ನು 2023ರ ಜನವರಿಯಲ್ಲೂ ರಾಹುಲ್ ಗಾಂಧಿ ಮುಂದುವರಿಸಿದ್ದರು. ಶ್ರೀನಗರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಕೇಂದ್ರದ ಮೋದಿ ಸರ್ಕಾರವು, ಚೀನಾ ದೇಶ, ನಮ್ಮ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ ಎಂಬುದನ್ನು ನಿರಾಕರಿಸುತ್ತಿರುವುದು ಡೇಂಜರಸ್ ಎಂದು ಹೇಳಿದ್ದರು. ನಾನು ಆರೋಪವನ್ನು ಮತ್ತೆ ಮತ್ತೆ ಮಾಡುತ್ತೇನೆ ಎಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ