/newsfirstlive-kannada/media/media_files/2025/08/14/machail-mata-yatra-2025-08-14-20-56-40.jpg)
ಜಮ್ಮು ಮತ್ತು ಕಾಶ್ಮೀರದ ಕಿಶ್ವಾರ್ (Jammu and Kashmir's Kishtwar) ಜಿಲ್ಲೆಯಿಂದ ಕೆಟ್ಟ ಸುದ್ದಿ ಬಂದಿದೆ. ಗುರುವಾರ ಪಾಡರ್ ಪ್ರದೇಶದ ಚಶೋತಿ ಗ್ರಾಮದಲ್ಲಿ ಭಾರಿ ಮೇಘಸ್ಫೋಟ (massive cloudburst ) ಸಂಭವಿಸಿದ್ದು, ದುರಂತದಲ್ಲಿ 40ಕ್ಕೂ ಹೆಚ್ಚು ಜನ ಪ್ರಾಣಬಿಟ್ಟಿದ್ದಾರೆ. ಸುಮಾರು 220ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಮಚೈಲ್ ಮಾತಾ ಯಾತ್ರೆಗೆ (Machail Mata Yatra) ಸಾವಿರಾರು ಭಕ್ತರು ಆಗಮಿಸಿದ್ದಾಗ ದುರಂತ ಸಂಭವಿಸಿದೆ. ಯಾತ್ರೆಯ ಮೊದಲ ನಿಲ್ದಾಣವಿದ್ದ ಸ್ಥಳದಲ್ಲೇ ಮೇಘಸ್ಫೋಟ ಸಂಭವಿಸಿದೆ. ದೇವಾಲಯದ ಹೊರಗೆ ಲಂಗಾರ್‌ಗಾಗಿ ಸ್ಥಾಪಿಸಲಾಗಿದ್ದ ಅನೇಕ ಡೇರೆಗಳು ನೀರಿನ ಪ್ರವಾಹಕ್ಕೆ ಕೊಚ್ಚಿಹೋಗಿವೆ. ಅಷ್ಟೇ ಅಲ್ಲ ಇಡೀ ರಸ್ತೆಯೂ ಕೊಚ್ಚಿಹೋಗಿದೆ. ಸ್ಥಳೀಯ ಶಾಸಕರ ಪ್ರಕಾರ, ಅಪಘಾತದ ಸಮಯದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಅಲ್ಲಿದ್ದರು.
ರಕ್ಷಣಾ ಕಾರ್ಯ ಚುರುಕು
ಭಾರೀ ಪ್ರವಾಹ ಮತ್ತು ಅವಶೇಷಗಳಲ್ಲಿ ಅನೇಕರು ಸಿಲುಕಿಕೊಂಡಿದ್ದಾರೆ. ಇನ್ನು ನದಿ ದಂಡೆಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳು ಮತ್ತು ಸರಕುಗಳು ಸಹ ಕೊಚ್ಚಿ ಹೋಗಿವೆ ಎಂದು ಬಿಜೆಪಿ ನಾಯಕ ಮತ್ತು ಸ್ಥಳೀಯ ಶಾಸಕ ಸುನಿಲ್ ಶರ್ಮಾ ಮಾಹಿತಿ ನೀಡಿದ್ದಾರೆ. ದುರಂತದ ಬಗ್ಗೆ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಮಾತನಾಡಿ.. ಕಿಶ್ವಾರ್ ಉಪ ಆಯುಕ್ತ ಪಂಕಜ್ ಕುಮಾರ್ ಶರ್ಮಾ ಜೊತೆ ಮಾತನಾಡಿ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ತಿಳಿಸಿದ್ದೇನೆ. ಆಡಳಿತವು ಎಚ್ಚರಿಕೆ ವಹಿಸಿದೆ. ರಕ್ಷಣಾ ಮತ್ತು ವೈದ್ಯಕೀಯ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ, 40 ಮಂದಿ ದುರಂತ ಅಂತ್ಯ.. 220 ಮಂದಿ ನಾಪತ್ತೆ
ಮಾಹಿತಿಯ ಪ್ರಕಾರ.. ವಿಪತ್ತು ಸಂಭವಿಸಿದ ಪ್ರದೇಶದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯವು ಅತ್ಯಂತ ಸವಾಲಿನದ್ದಾಗಿದೆ. ಗ್ರಾಮದ ಜನಸಂಖ್ಯೆ ಸಾಕಷ್ಟು ದೊಡ್ಡದಾಗಿದೆ. ಮೇಘಸ್ಫೋಟದ ನಂತರ ಅದರ ಅರ್ಧಕ್ಕಿಂತ ಹೆಚ್ಚು ಭಾಗವು ನೀರಿನಲ್ಲಿ ಕೊಚ್ಚಿ ಹೋಗಿದೆ. ಗ್ರಾಮಕ್ಕೆ ಹೋಗುವ ರಸ್ತೆಗಳಿಗೂ ಹಾನಿಯಾಗಿದೆ. ಕಳೆದ 15 ದಿನಗಳಿಂದ ಪೂಂಚ್, ರಾಜೇರಿ ಮತ್ತು ದೋಡಾದಂತಹ ಬೆಟ್ಟದ ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಮಚೈಲ್ ಮಾತಾ ದೇವಸ್ಥಾನಕ್ಕೆ ತೀರ್ಥಯಾತ್ರೆಯ ಮಾರ್ಗದ ಮೇಲೂ ಪರಿಣಾಮ ಬೀರಿದೆ.
ಏನಿದು ಮಚ್ಚಲ್ ಯಾತ್ರೆ..?
ಮಚೈಲ್ ಮಾತಾ ದೇಗುಲವು ಜಮ್ಮು ಮತ್ತು ಕಾಶ್ಮೀರದ ಕಿಶ್ವಾರ್ ಜಿಲ್ಲೆಯ ಪಾಡರ್ ಉಪವಿಭಾಗದಲ್ಲಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 9,500 ಅಡಿ ಎತ್ತರದಲ್ಲಿದೆ. ಹಿಮದಿಂದ ಆವೃತವಾದ ಪರ್ವತ ಶ್ರೇಣಿಗಳ ನಡುವೆ ಇದೆ. ಇಲ್ಲಿ ತಾಯಿ ಚಂಡಿ (ದುರ್ಗಾ)ಯನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಸಾವಿರಾರು ಭಕ್ತರು ‘ಮಚೈಲ್ ಯಾತ್ರೆ’ ಕೈಗೊಳ್ಳುತ್ತಾರೆ. ಅಮರನಾಥ ಯಾತ್ರೆಯಂತೆ ಈ ಪ್ರಯಾಣವು ಇದೆ. ಸುಮಾರು 30 ರಿಂದ 35 ಕಿಲೋ ಮೀಟರ್ ಕಾಲ್ನಡಿಗೆ ಅಥವಾ ಕುದುರೆಗಳ ಸಹಾಯದಿಂದ ದೇಗುಲವನ್ನು ತಲುಪಬೇಕು.
ಇದನ್ನೂ ಓದಿ: ಮೂರನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ ದರ್ಶನ್.. ಪವಿತ್ರ ಗೌಡ ಕೂಡ ಕಂಬಿ ಹಿಂದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ