/newsfirstlive-kannada/media/post_attachments/wp-content/uploads/2024/10/DANA-CYCLONE-2.jpg)
ಕಡಲ ಉಸಿರಾಟದ ಶಬ್ದ.. ಕಡಲ ತೀರವನ್ನ ಸ್ತಬ್ಧ ಮಾಡಿಬಿಟ್ಟಿದೆ. ಅಲೆಗಳ ಕೂಗು. ಮೊಂಥಾ ಚಂಡಮಾರುತ ಬರುವಿಕೆಯ ಸುಳಿವು ಕೊಡ್ತಿದೆ. ಕ್ಷಣಕ್ಷಣಕ್ಕೂ ಭಯ ಹೆಚ್ಚಿಸುತ್ತಿರೋ ಮೊಂಥಾ ಚಂಡಮಾರುತ ಕೆಲವೇ ಕ್ಷಣಗಳಲ್ಲಿ ಸಮುದ್ರ ಗಡಿಗೆ ಅಪ್ಪಳಿಸಲಿದೆ.
ಮೊಂಥಾ ಚಂಡಮಾರುತ ಎಫೆಕ್ಟ್​!
ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಮೊಂಥಾ ಚಂಡಮಾರುತದ ಎಫೆಕ್ಟ್​ ನಿನ್ನೆಯಿಂದ ಶುರುವಾಗ್ತಿದೆ. ಯಾಕಂದ್ರೆ ಪೂರ್ವ ಕರಾವಳಿ ಭಾಗದ ಜನರ ಎದೆಯಲ್ಲಿ ನಡುಕ ಹುಟ್ಟಿಸಿರುವ ಮೊಂಥಾ ಕಳೆದ ರಾತ್ರಿ ಆಂಧ್ರಪ್ರದೇಶದ ಕಾಕಿನಾಡ ಬಳಿಯ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣಂ ಭೂ ಭಾಗಕ್ಕೆ ಎಂಟ್ರಿ ಕೊಟ್ಟಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಗಂಟೆಗೆ 110 ಕಿಲೋ ಮೀಟರ್​ ವೇಗದ ಗಾಳಿ ಜೊತೆ ಬರ್ತಿರೋ ಮೊಂಥಾ.. ಯಾವ ಅನಾಹುತವನ್ನ ತರುತ್ತೋ ಅನ್ನ ಭೀತಿ ಹುಟ್ಟಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರಕಾಶಂ, ಪಲ್ನಾಡು, ಬಾಪಟ್ಲ, ಗುಂಟೂರು, ವಿಶಾಖಪಟ್ಟಣಂ, ಪಾರ್ವತಿಪುರಂ, ಸೇರಿದಂತೆ ಹಲವು ಕಡೆ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ.
ಶಾಲಾ-ಕಾಲೇಜಿಗೆ ರಜೆ!
ಮುಂದಿನ 10 ದಿನಗಳಲ್ಲಿ ಭಾರಿ ಮಳೆಯಾಗಲಿದ್ದು, ಆಂಧ್ರದ 1,419 ಹಳ್ಳಿಗಳು ಮತ್ತು 44 ಪಟ್ಟಣಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಮೊಂಥಾ ಚಂಡಮಾರುತ ಅನಾಹುತ ಸಂಭವಿಸದಂತೆ ಆಂಧ್ರ ಸರ್ಕಾರ ಫುಲ್​ ಅಲರ್ಟ್​ ಆಗಿದೆ. ಅಂಧ್ರ ಸಿಎಂ ಮತ್ತು ಡಿಸಿಎಂ ಅಧಿಕಾರಿಗಳ ಜೊತೆ ಸಭೆ ನಡೆಸಿ ಕರಾವಳಿ ತೀರದ 50 ಸಾವಿರ ನಿವಾಸಿಗಳನ್ನ ಕೂಡಲೇ ಸುರಕ್ಷಿತ ಸ್ಥಳಕ್ಕೆ ಶಿಫ್ಟ್​ ಮಾಡಿಸಿದ್ದಾರೆ. ರೆಡ್​ ಅಲರ್ಟ್ ಇರೋ ಕಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಆಂಧ್ರದ ಪೂರ್ವ ಕರಾವಳಿಯಲ್ಲಿ ಸಂಚರಿಸುವ 65 ರೈಲುಗಳ ಓಡಾಟ ಸ್ಥಗಿತಗೊಳಿಸಲಾಗಿದೆ.
ರೈಲು ಸಂಚಾರದಲ್ಲಿ ವ್ಯತ್ಯಯ
ಮೊಂಥಾ ಚಂಡಮಾರುತದ ಪರಿಣಾಮ ಇಂಡಿಗೋ ಸಂಸ್ಥೆ, ವಿಜಯವಾಡ, ವಿಶಾಖಪಟ್ಟಣಂ ಮತ್ತು ರಾಜಮಂಡ್ರಿಗೆ ಹಾರುವ ತಮ್ಮ ಏರ್‌ಲೈನ್ಸ್ ವಿಮಾನಗಳು ವ್ಯತ್ಯಯವಾಗಲಿವೆ ಅಂತ ತಿಳಿಸಿದೆ. ದಕ್ಷಿಣ ಮಧ್ಯ ರೈಲ್ವೆಯು, ರೈಲುಗಳ ವೇಳಾಪಟ್ಟಿಯನ್ನ ಬದಲಿಸಿದೆ. ಪ್ರಯಾಣಿಕರ ಸುರಕ್ಷತೆಯನ್ನ ಗಮನದಲ್ಲಿಟ್ಟು, ಇಂದಿನಿಂದ ರೈಲುಗಳು ನಿಗದಿತ ಸಮಯಕ್ಕಿಂತ 12 ಗಂಟೆಗಳ ಕಾಲ ವಿಳಂಬವಾಗಿ ಹೊರಡಲಿವೆ.
9 ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಣೆ..
ಭಾರೀ ಮಳೆ- ಗಾಳಿಗೆ ಓಡಿಶಾದ ಜನರು ಬೆಚ್ಚಿ ಬಿದ್ದಿದ್ದಾರೆ. ಒಡಿಶಾದ 9 ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದ್ದು, 9 ಜಿಲ್ಲೆಗಳಲ್ಲಿ ಅಧಿಕಾರಿಗಳು ಮತ್ತು ಸರ್ಕಾರಿ ಉದ್ಯೋಗಿಗಳ ರಜೆ ರದ್ದು ಮಾಡಿ ಕರ್ತವ್ಯಕ್ಕೆ ನಿಯೋಜನೆ ಮಾಡಿ.. 128 ವಿಶೇಷ ತಂಡಗಳನ್ನ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಮತ್ತು ನಾಳೆ ಎರಡು ದಿನ ಅಂಗನವಾಡಿ ಕೇಂದ್ರಗಳನ್ನ ತಾತ್ಕಾಲಿಕವಾಗಿ ಕ್ಲೋಸ್​ ಮಾಡಲಾಗಿದೆ.
ಮೊಂಥಾ ಸೈಕ್ಲೋನ್ ಅಲರ್ಟ್!
ಮೋಂಥಾ ಚಂಡಮಾರುತದ ಎಫೆಕ್ಸ್​ ರಾಜ್ಯದ ಮೇಲೂ ಬಿದ್ದಿದೆ. ಮುಂದಿನ ಎರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಬೀದರ್, ಯಾದಗಿರಿ, ವಿಜಯಪುರ ಗುಲ್ಬರ್ಗಾ ಭಾಗಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇನ್ನೂ ಎರಡು ಮುಂದುವರೆಯಲಿದೆ ಅಂತ ಹವಮಾನ ಇಲಾಖೆಯ ವಿಜ್ಞಾನಿ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.
ಪಕ್ಕ ರಾಜ್ಯ ತಮಿಳುನಾಡಿನಲ್ಲಿ ರಾತ್ರಿಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದೆ. ಒಟ್ಟಾರೆ, ರಾತ್ರಿ ವೇಳೆಗೆ ವರುಣ ರುದ್ರತಾಂಡವ ಶುರು ಮಾಡಲಿದ್ದಾನೆ.. ನೋವು.. ಸಂಕಷ್ಟ.. ಅನಾಹುತಗಳು ತಟ್ಟದಿರಲಿ ಅಂತ ಪ್ರಾರ್ಥನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us