/newsfirstlive-kannada/media/media_files/2025/08/07/rahul-gandhi-duplicate-voters-fake-addresses-2025-08-07-16-19-00.jpg)
ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಬಿಹಾರ ಚುನಾವಣೆ (Bihar election 2025) ಹೊತ್ತಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬಿಜೆಪಿ ವಿರುದ್ಧ ಅತೀ ದೊಡ್ಡ ಆರೋಪವನ್ನ ಮಾಡಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಚುನಾವಣೆಯಲ್ಲಿ ಆಗುತ್ತಿರುವ ಅಕ್ರಮಗಳ ಬಗ್ಗೆ ಬಹಿರಂಗ ಮಾಡಿರುವ ಅವರು, ಬಿಜೆಪಿ ಮೇಲೆ ಮತಗಳ್ಳತನದ ಆರೋಪ ಹೊರಿಸಿದ್ದಾರೆ. ಮಾತ್ರವಲ್ಲ, ತಮ್ಮ ಬಳಿ ಒಂದಷ್ಟು ಸಾಕ್ಷಿ ಇವೆ ಎಂದಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು..?
ದೇಶದಲ್ಲಿ ಮೊದಲು ಎಲೆಕ್ಟ್ರಾನಿಕ್ ಮತಯಂತ್ರಗಳು ಇರಲಿಲ್ಲ. ಆದರೂ ಇಡೀ ದೇಶದಲ್ಲಿ ಒಂದೇ ದಿನದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಈಗ ಅದು ಸಂಭವಿಸುತ್ತಿಲ್ಲ. ಮತದಾನ ತಿಂಗಳುಗಳವರೆಗೆ ನಡೆಯುತ್ತದೆ. ಮತದಾನ ದಿನವನ್ನು ಬೇರೆ ಬೇರೆ ದಿನಗಳಲ್ಲಿ ಏಕೆ ಮಾಡಲಾಗುತ್ತದೆ? ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಪಕ್ಷವೂ ವಿರೋಧವನ್ನು ಎದುರಿಸಬೇಕಾಗುತ್ತದೆ. ಆದರೆ ಅದು ಬಿಜೆಪಿಯ ಮೇಲೆ ಏಕೆ ಪರಿಣಾಮ ಬೀರಲ್ಲ? ಅದು ಅಂಥ ಏಕೈಕ ಪಕ್ಷ ಯಾಕೆ ಎಂದು ನನಗೆ ತಿಳಿದಿಲ್ಲ.
ಚುನಾವಣಾ ಆಯೋಗದ ಬಗ್ಗೆಯೂ ಪ್ರಶ್ನೆ..
ಚುನಾವಣೆ ಸಂದರ್ಭದಲ್ಲಿ ಎಕ್ಸಿಟ್ ಪೋಲ್‌ಗಳು ಬೇರೆಯದ್ದೇ ಕತೆ ಹೇಳುತ್ತಿರುತ್ತವೆ. ಆದರೆ ಫಲಿತಾಂಶವೇ ಬೇರೆಯೇ ಆಗಿರುತ್ತದೆ. ಉದಾಹರಣೆ ಅಂದರೆ ಹರಿಯಾಣ ಮತ್ತು ಮಧ್ಯಪ್ರದೇಶದ ಚುನಾವಣೆಗಳ ಫಲಿತಾಂಶ. ನಮ್ಮ ಸಮೀಕ್ಷೆಯೂ ತುಂಬಾ ಪ್ರಬಲವಾಗಿದೆ. ಅದರ ಫಲಿತಾಂಶ ಮಾತ್ರ ವಿಭಿನ್ನವಾಗಿ ಕಾಣುತ್ತದೆ. ಸಮೀಕ್ಷೆಯಲ್ಲಿ ಏನೇ ಕಂಡರೂ, ಫಲಿತಾಂಶವು ಅದರ ವಿರುದ್ಧ ಬರುತ್ತದೆ.
ಇದನ್ನೂ ಓದಿ: ದೆಹಲಿಯಲ್ಲಿ ಮದುವೆ ಅರತಕ್ಷತೆ ಮಾಡಿಕೊಂಡ ಮೌಹಾ ಮೋಯಿತ್ರ- ಪಿನಾಕಿ ಮಿಶ್ರಾ ದಂಪತಿ
ಒಂದು ಕೋಟಿ ಮತದಾರರು ಎಲ್ಲಿಂದ ಬಂದರು?
ಮಹಾರಾಷ್ಟ್ರದಲ್ಲಿ 5 ತಿಂಗಳಲ್ಲಿ ಬಹಳಷ್ಟು ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಇದು 5 ವರ್ಷಗಳಲ್ಲಿನ ಸಂಖ್ಯೆಗಿಂತ ಹೆಚ್ಚು. ಇದರಿಂದ ನಮಗೆ ಅನುಮಾನ ಬಂತು. ನಮ್ಮ ಮೈತ್ರಿಕೂಟವು ವಿಧಾನಸಭಾ ಚುನಾವಣೆಯಲ್ಲಿ ಸೋತಿತು. ನಾವು ಲೋಕಸಭಾ ಚುನಾವಣೆಯಲ್ಲಿ ಗೆದ್ದೆವು. ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ನಮಗಿದೆ. ಒಂದು ಕೋಟಿ ಹೊಸ ಮತದಾರರು ಇದ್ದಕ್ಕಿದ್ದಂತೆ ಎಲ್ಲಿಂದ ಬಂದರು? ನಾವು ಚುನಾವಣಾ ಆಯೋಗದ ಬಳಿ ಮತದಾರರ ಪಟ್ಟಿಯನ್ನು ಕೇಳಿದೆವು, ಆದರೆ ಅವರು ಮತದಾರರ ಪಟ್ಟಿಯನ್ನು ನೀಡಲಿಲ್ಲ
ಕರ್ನಾಟಕದಲ್ಲೂ ಮತಗಳ್ಳತನ ಆರೋಪ..!
ಕರ್ನಾಟಕದಲ್ಲೂ ಮತಗಳತನ ಆಗಿರುವ ಬಗ್ಗೆ ಉಲ್ಲೇಖ ಮಾಡಿರುವ ರಾಹುಲ್ ಗಾಂಧಿ, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಬಗ್ಗೆ ಆರೋಪಿಸಿದರು. ಅಲ್ಲಿ 11 ಸಾವಿರ ಮತದಾರರು ಮೂರ್ಮೂರು ಬಾರಿ ವೋಟಿಂಗ್ ಮಾಡಿದ್ದಾರೆ. ಆದರೆ ಚುನಾವಣಾ ಆಯೋಗ ಮತದಾನದ ಪಟ್ಟಿ ನೀಡಲು ನಿರಾಕರಿಸುತ್ತಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ನಕಲಿ ಮತದಾರರ ಸೇರ್ಪಡೆ ಆಗಿದೆ. 40 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು ಸೇರ್ಪಡೆಯಾಗಿದ್ದಾರೆ. ಮತದಾನದ ಸಿಸಿಟಿವಿ ದೃಶ್ಯ ಕೂಡ ಡಿಲೀಟ್ ಆಗಿದೆ.
ಹಲವು ಮತದಾರರಿಗೆ ವಿಳಾಸವೇ ಇಲ್ಲ. ಹಲವು ಮತದಾರರ ಮನೆ ನಂ. 0 ಎಂದು ದಾಖಲು ಆಗಿದೆ. ಮನೆ ನಂ.35ರ ವಿಳಾಸದಲ್ಲಿ 80 ಮತದಾರರಿದ್ದಾರೆ. ಬೂತ್ ನಂ.366 ನಲ್ಲಿ 46 ಮತದಾರರು ಒಂದೇ ವಿಳಾಸ ಹೊಂದಿದ್ದಾರೆ. ಮತಗಳ್ಳತನ ಪತ್ತೆಗೆ ತುಂಬಾ ಸಮಯ ಹಿಡಿಯಿತು. 4 ಸಾವಿರ ಮತದಾರರ ಭಾವಚಿತ್ರ ಚಿಕ್ಕದಾಗಿ ದಾಖಲು ಮಾಡಲಾಗಿದೆ. ಕೆಲವು ಮತದಾರರ ಪಟ್ಟಿಯಲ್ಲಿ ತಂದೆಯ ಹೆಸರೇ ಇಲ್ಲ. ಒಂದೇ ಹೆಸರಿನ ವ್ಯಕ್ತಿ 4 ಸ್ಥಳಗಳಲ್ಲಿ ಮತ ಹಾಕಿದ್ದಾನೆ. ಒಂದು ಕೇಂದ್ರದಲ್ಲಿ 11,965 ನಕಲಿ ವೋಟರ್ಸ್ ಇದ್ದಾರೆ. ಒಂದೇ ಗುರುತಿನಲ್ಲಿ ಹಲವು ವೋಟರ್ ಐಡಿಗಳಿವೆ ಎಂದು ನಕಲಿ ಮತದಾರರ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.
ಇದನ್ನೂ ಓದಿ: Namma metro: ಹಳದಿ ಮಾರ್ಗ ಉದ್ಘಾಟನೆಗಾಗಿ ಜಟಾಪಟಿ.. ತೇಜಸ್ವಿ ಸೂರ್ಯ vs ಡಿಕೆ ಶಿವಕುಮಾರ್
ರಾಹುಲ್ ಗಾಂಧಿ ಪ್ರಕಾರ ಯಾವ ರೀತಿ ಮೋಸ..
- ನಕಲಿ ಮತದಾರರನ್ನ ಸೇರಿಸಿರುವುದು
- ನಕಲಿ, ತಪ್ಪು ವಿಳಾಸಗಳ ಬಳಸಿ ಮತದಾರರ ಪಟ್ಟಿ
- ಒಂದೇ ವಿಳಾಸದಲ್ಲಿ ಹಲವು ಮತದಾರರ ಹೆಸರು
- ನಕಲಿ ವ್ಯಕ್ತಿಗಳ ಫೋಟೋಗಳ ಬಳಕೆ
- ಮೊದಲ ಬಾರಿ ಮತದಾರರ ಫಾರ್ಮ್ ದುರ್ಬಳಕೆ
ಚುನಾವಣಾ ಆಯೋಗ ಪ್ರತಿಕ್ರಿಯೆ..
ರಾಹುಲ್ ಗಾಂಧಿ ಆರೋಪಕ್ಕೆ ರಾಜ್ಯ ಚುನಾವಣಾ ಆಯೋಗದ ಪ್ರತ್ಯುತ್ತರ ನೀಡಿದೆ. ಮತದಾರರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಕಾಂಗ್ರೆಸ್ ಯಾವುದೇ ದೂರು ನೀಡಿಲ್ಲ. 2024ರ ನವಂಬರ್ನಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. 2025ರ ಜನವರಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಬಳಿಕ ಕಾಂಗ್ರೆಸ್ ಜಿಲ್ಲಾ ಚುನಾವಣಾಧಿಕಾರಿಗಳಿಗೂ ಕಾಂಗ್ರೆಸ್ ಯಾವುದೇ ದೂರು ನೀಡಿಲ್ಲ. ಮತದಾರರ ಪಟ್ಟಿಯನ್ನು ಆಕ್ಷೇಪಿಸಿ ದೂರು ನೀಡಿಲ್ಲ. ಚುನಾವಣಾ ಫಲಿತಾಂಶಗಳನ್ನು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಪ್ರಶ್ನಿಸಬಹುದು.
ಇಂದು ನೀವು ಅನರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೀರಿ. ಇದರ ಬಗ್ಗೆ ನೀವು ರಿಜಿಸ್ಟ್ರೇಷನ್ ಆಫ್ ಎಲೆಕ್ಟಾರ್ಸ್ ರೂಲ್ಸ್, 1960ರ 20(3)(ಬಿ)ಅಡಿ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಿ. ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವುದು, ಅನರ್ಹರ ಸೇರ್ಪಡೆ ಬಗ್ಗೆ ಹೆಸರು ಸಹಿತ ದೂರು ನೀಡಿ. ಬಳಿಕ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದ ರಾಜ್ಯ ಚುನಾವಣಾ ಆಯೋಗ ಹೇಳಿದೆ.
ಇದನ್ನೂ ಓದಿ: ಅಮೆರಿಕಾದ ಆಮದು ಸುಂಕ ಹೆಚ್ಚಳಕ್ಕೆ ಮೋದಿ ಪ್ರತ್ಯುತ್ತರ, ಭಾರಿ ಬೆಲೆ ತೆರಲು ಸಿದ್ಧ ಎಂದ ಮೋದಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ