/newsfirstlive-kannada/media/media_files/2025/09/19/upper-krishna-3-project-meeting-2025-09-19-12-43-54.jpg)
ಕೃಷ್ಣಾ ಮೇಲ್ದಂಡೆ-3 ಹಂತದ ಯೋಜನೆ ಬಗ್ಗೆ ಸಿಎಂ ಸಭೆ
ಕರ್ನಾಟಕದ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಒಂದೆಡೆ ಗ್ಯಾರಂಟಿ ಸ್ಕೀಮ್ ಗಳಿಂದ ಆರ್ಥಿಕ ಹೊರೆ. ಈಗ ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಕೃಷ್ಣಾ ಮೇಲ್ದಂಡೆ-3 ಹಂತದ ಯೋಜನೆ ಪೂರ್ಣಗೊಳಿಸುವ ಒತ್ತಡ. ಕೃಷ್ಣಾ ಮೇಲ್ದಂಡೆ ಯೋಜನೆ-3ನೇ ಹಂತವನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ 75 ಸಾವಿರ ಕೋಟಿ ರೂಪಾಯಿ ಹಣ ಬೇಕಾಗಿದೆ. ಈ ಹಣವನ್ನು ಹೊಂದಿಸಲು ರಾಜ್ಯದ ಶಿಕ್ಷಣ, ಆರೋಗ್ಯ ಮತ್ತು ನಗರಾಭಿವೃದ್ದಿ ಇಲಾಖೆಗಳಿಗೆ ಹಂಚಿಕೆಯಾಗಿದ್ದ ಹಣದಲ್ಲಿ ಶೇ.10 ರಷ್ಟು ಕಡಿತ ಮಾಡುವ ಸಾಧ್ಯತೆ ಇದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಆಲಮಟ್ಟಿ ಡ್ಯಾಂ ಎತ್ತರವನ್ನು 519 ಮೀಟರ್ ನಿಂದ 524 ಮೀಟರ್ ವರೆಗೂ ಎತ್ತರಿಸಲಾಗುತ್ತೆ. ಆಲಮಟ್ಟಿ ಡ್ಯಾಂ ಎತ್ತರಿಸಲು 76 ಸಾವಿರ ಎಕರೆ ಭೂಮಿ ಬೇಕಾಗಿದೆ. ಇದಕ್ಕೆ ರೈತರ ಕೃಷಿ ನೀರಾವರಿ ಭೂಮಿ , ಒಣ ಭೂಮಿ ಮುಳುಗಡೆಯಾಗಲಿದೆ . ಮುಳುಗಡೆಯಾಗುವ ಭೂಮಿಗೆ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಇನ್ನೂ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆಗೆ ನಾಲೆಗಳು, ರೈತರ ಪುನರ್ ವಸತಿಗಾಗಿ 58 ಸಾವಿರ ಎಕರೆ ಭೂಮಿ ಬೇಕು. ಈ ಭೂಮಿ ಸ್ವಾಧೀನಕ್ಕೆ 75 ಸಾವಿರ ಕೋಟಿ ರೂಪಾಯಿ ಹಣ ಬೇಕಾಗಿದೆ. ಈ ಹಣವನ್ನು ಮುಂದಿನ 3 ವರ್ಷದಲ್ಲಿ ಹೊಂದಿಸಲು ರಾಜ್ಯದ ಶಿಕ್ಷಣ, ಆರೋಗ್ಯ, ನಗರಾಭಿವೃದ್ದಿ ಇಲಾಖೆಗಳಿಗೆ ಹಂಚಿಕೆಯಾಗಿದ್ದ ಹಣದ ಪೈಕಿ ಶೇ.10 ರಷ್ಟು ಹಣವನ್ನ ಕಡಿತ ಮಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆಗೆ ಬಳಸಿಕೊಳ್ಳಲಾಗುತ್ತೆ. ಮೂರು ಇಲಾಖೆಗಳ ಹಣವನ್ನು ಕಡಿತ ಮಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ ಡೈವರ್ಟ್ ಮಾಡಲಾಗುತ್ತೆ.
ಇದನ್ನೂ ಓದಿ: ಮಗುವಿಗೆ ಹಾಲುಣಿಸಿ ಕೆರೆಗೆ ಎಸೆದ ಕ್ರೂರ ತಾಯಿ -ಅಸಲಿಗೆ ಆಗಿದ್ದೇನು?
ಈಗಾಗಲೇ ರಾಜ್ಯದ ಕ್ಯಾಬಿನೆಟ್ ಸಭೆಯಲ್ಲಿ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಪರಿಹಾರ ಧನ ನಿಗದಿ ಮಾಡಲಾಗಿದೆ.
ಡ್ಯಾಂಗೆ ಮುಳುಗಡೆಯಾಗುವ ರೈತರ ನೀರಾವರಿ ಭೂಮಿಗೆ ಎಕರೆಗೆ 40 ಲಕ್ಷ ರೂಪಾಯಿ, ಒಣ ಭೂಮಿಗೆ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುತ್ತೆ.
ಇನ್ನೂ ನಾಲೆ ಮತ್ತು ಪುನರ್ ವಸತಿಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಪೈಕಿ ನೀರಾವರಿ ಭೂಮಿಗೆ ಎಕರೆಗೆ 30 ಲಕ್ಷ ರೂಪಾಯಿ, ಒಣ ಭೂಮಿಗೆ 25 ಲಕ್ಷ ರೂಪಾಯಿ ಪರಿಹಾರ ಧನ ನೀಡಲು ನಿರ್ಧರಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳಿಗಾಗಿ ಕೆಲವೊಂದು ಬಜೆಟ್ ಹಂಚಿಕೆಯನ್ನು ಕಡಿತ ಮಾಡಬೇಕಾಗುತ್ತೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ನವರಾತ್ರಿಗೆ ಭರ್ಜರಿ ಗುಡ್ನ್ಯೂಸ್ ನಿರೀಕ್ಷೆ.. ಮೊಸರು, ತುಪ್ಪದ ಬೆಲೆ ಇಳಿಕೆ ಸಾಧ್ಯತೆ..!
ವಿಜಯಪುರ ಜಿಲ್ಲೆಯಲ್ಲಿರುವ ಆಲಮಟ್ಟಿ ಡ್ಯಾಂ
ಈ ವರ್ಷ 15 ಸಾವಿರ ಕೋಟಿ ರೂ ಹಣ ಕಡಿತ ಸಾಧ್ಯತೆ
ಇನ್ನೂ ಬಜೆಟ್ ನಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುವ ಹಣದ ಪೈಕಿ ಅಭಿವೃದ್ದಿ ಕಾಮಗಾರಿಗಳಿಗೆ ಹಂಚಿಕೆಯಾಗಿರುವ ಹಣವನ್ನೇ ಕಡಿತ ಮಾಡಲಾಗುತ್ತೆ . ರಾಜ್ಯದ ಬಜೆಟ್ ನಲ್ಲಿ ಈ ಹಣಕಾಸು ವರ್ಷದಲ್ಲಿ ವಿವಿಧ ಇಲಾಖೆಯ ಅಭಿವೃದ್ದಿ ಕಾರ್ಯಗಳಿಗೆ 80,197 ಕೋಟಿ ರೂಪಾಯಿವರೆಗೂ ಹಣವನ್ನು ಹಂಚಿಕೆ ಮಾಡಲಾಗಿದೆ. ಈ ಹಣದಲ್ಲೇ ಕಡಿತ ಮಾಡಲಾಗುತ್ತೆ. ಆದರೇ, ಗ್ಯಾರಂಟಿ ಸ್ಕೀಮ್ ಗಳಿಗೆ ಹಂಚಿಕೆಯಾದ ಹಣವನ್ನು ಕಡಿತ ಮಾಡಲ್ಲ. ಈ ವರ್ಷ ಅಭಿವೃದ್ದಿ ಕಾರ್ಯಗಳಿಗೆ ಹಂಚಿಕೆಯಾದ ಹಣದ ಪೈಕಿ 15 ಸಾವಿರ ಕೋಟಿ ರೂಪಾಯಿ ಹಣ ಕಡಿತ ಮಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ವೆಚ್ಚಗಳಿಗೆ ನೀಡಲಾಗುತ್ತೆ.
ಹಣ ಹೊಂದಿಸಲು ಬೇರೆ ಏನ್ ಆಯ್ಕೆಗಳಿವೆ?
ಕೃಷ್ಣಾ ಮೇಲ್ದಂಡೆ ಯೋಜನೆಯ 3 ಹಂತದ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರ ಸಾಧ್ಯವಿರುವ ಕಡೆ ಬೆಲೆ ಏರಿಕೆಯ ಆಯ್ಕೆಯನ್ನು ಪರಿಗಣಿಸಿದೆ. ಸಾಧ್ಯವಾದರೇ, ಗ್ಯಾರಂಟಿ ಸ್ಕೀಮ್ ಗಳ ಹಣವನ್ನು ಕಡಿತ ಮಾಡಬಹುದು. ಇಲ್ಲವೇ ಸರ್ಕಾರವು ಬಾಹ್ಯ ಮೂಲಗಳಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ 3 ಹಂತಕ್ಕಾಗಿ ಸಾಲ ಕೂಡ ಪಡೆಯಬಹುದು.
ಇದನ್ನೂ ಓದಿ: ಏಷ್ಯಾ ಕಪ್ ಸೂಪರ್ 4ಗೆ 4 ತಂಡಗಳು ಎಂಟ್ರಿ- ಭಾರತದ ಪಂದ್ಯ ಯಾವಾಗ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.