/newsfirstlive-kannada/media/media_files/2026/01/31/ankegowd-news-1-2026-01-31-10-05-25.jpg)
ಬೆಂಗಳೂರು: ಜೀವಮಾನದ ಸಂಪಾದನೆಯನ್ನೆಲ್ಲಾ ಪುಸ್ತಕಗಳಿಗಾಗಿಯೇ ವ್ಯಯಿಸಿ, 'ಅಕ್ಷರ ಸಂತ' ಎಂದೇ ಖ್ಯಾತರಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡರ ನೆರವಿಗೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ (MLC) ದಿನೇಶ್ ಗೂಳಿಗೌಡ ಮುಂದಾಗಿದ್ದಾರೆ. ಅಂಕೇಗೌಡರ ಈ ಅಪಾರ ಜ್ಞಾನದ ಭಂಡಾರವನ್ನು ಸಂರಕ್ಷಿಸಲು ಸರ್ಕಾರ ಸಹಾಯ ಹಸ್ತ ಚಾಚಬೇಕು ಎಂದು ಕೋರಿ ಸಿಎಂ, ಡಿಸಿಎಂ ಸೇರಿದಂತೆ ನಾಲ್ವರು ಪ್ರಮುಖರಿಗೆ ಅವರು ಪ್ರತ್ಯೇಕ ಪತ್ರ ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ
ಅಂಕೇಗೌಡರ ಬಳಿ ಬರೋಬ್ಬರಿ 25 ಲಕ್ಷಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿದೆ. ಈ ಸಾಧನೆಯನ್ನು ಗುರುತಿಸಿ, ಸರ್ಕಾರ ಅವರಿಗೆ 5 ಎಕರೆ ಜಮೀನು ಮಂಜೂರು ಮಾಡಬೇಕು ಹಾಗೂ ಈ ಯೋಜನೆಯ ಸಮಗ್ರ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಿನೇಶ್ ಗೂಳಿಗೌಡ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಇನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ಕಾವೇರಿ ನೀರಾವರಿ ನಿಗಮದ ವತಿಯಿಂದ ಅಂಕೇಗೌಡರ ಪುಸ್ತಕಗಳ ಸಂಗ್ರಹಕ್ಕಾಗಿ ಸುಸಜ್ಜಿತ ಕಟ್ಟಡವೊಂದನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಎದೆ ಸೀಳಿ ಬೆನ್ನಿನಲ್ಲಿ ಸಿಲುಕಿದ ಗುಂಡು.. ತನಿಖೆಯ ಸ್ಫೋಟಕ ಮಾಹಿತಿ ಇಲ್ಲಿದೆ..!
/filters:format(webp)/newsfirstlive-kannada/media/media_files/2026/01/31/ankegowd-news-2026-01-31-10-05-14.jpg)
ಅಂಕೇಗೌಡರ ಪುಸ್ತಕ ಲೋಕವನ್ನು ಕೇವಲ ಗ್ರಂಥಾಲಯವಾಗಿ ಮಾತ್ರವಲ್ಲದೆ, ಒಂದು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವಂತೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ. ಅದರ ಜೊತೆಗೆ, ಲಕ್ಷಾಂತರ ಪುಸ್ತಕಗಳನ್ನು ಜೋಡಿಸಿಡಲು ಅಗತ್ಯವಿರುವ ಕಪಾಟುಗಳನ್ನು (Bookshelves) ಒದಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಲ್ಲಿಯೂ ಕೋರಿದ್ದಾರೆ.
ಅಂಕೇಗೌಡರ ಅಪೂರ್ವ ಸಾಧನೆ
ಅಂಕೇಗೌಡರು ತಮ್ಮ ಇಡೀ ಜೀವನವನ್ನು ಪುಸ್ತಕಗಳ ಸಂಗ್ರಹಕ್ಕಾಗಿ ಮೀಸಲಿಟ್ಟವರು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ 25 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಕಾಪಾಡಿಕೊಂಡು ಬಂದಿರುವ ಅವರ ಶ್ರಮಕ್ಕೆ ಸರ್ಕಾರದ ಬೆಂಬಲ ಅತ್ಯಗತ್ಯ ಎಂದು ದಿನೇಶ್ ಗೂಳಿಗೌಡ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರದ ಈ ಸಹಾಯ ಹಸ್ತದಿಂದಾಗಿ ಭವಿಷ್ಯದ ಪೀಳಿಗೆಗೆ ಅಂಕೇಗೌಡರ 'ಜ್ಞಾನದ ಕಾಶಿ' ಲಭ್ಯವಾಗುವಂತಾಗಲಿ ಎಂಬುದು ಅವರ ಈ ಪತ್ರದ ಆಶಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us