/newsfirstlive-kannada/media/media_files/2025/09/18/rss-workshop-for-bjp-2025-09-18-07-34-06.jpg)
ಸ್ಥಳೀಯ ಚುನಾವಣೆ ಹೊತ್ತಲ್ಲಿ ರಾಜ್ಯ ಬಿಜೆಪಿಯನ್ನ ಸಂಘಟಿಸಲು ಸಂಘ ಪರಿವಾರ ಎಂಟ್ರಿ ಕೊಟ್ಟಿದೆ. ಕಮಲ ಪಾಳೆಯದಲ್ಲಿನ ಗೊಂದಲ, ಹಿರಿಯ- ಕಿರಿಯರ ನಡುವೆ ಹೊಂದಾಣಿಕೆ ಪ್ರಾಬ್ಲಮ್ ಹಾಗೂ ಬಿಜೆಪಿಯಲ್ಲಿ ನಡೆಯುತ್ತಿರುವ ಗುಂಪುಗಾರಿಕೆಗೆ ಬ್ರೇಕ್ ಹಾಕೋಕೆ ಸಂಘದ ಪ್ರಮುಖರು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
2 ದಿನ ತರಬೇತಿ
ರಾಜ್ಯದಲ್ಲಿ ಗ್ಯಾರಂಟಿ ಸರ್ಕಾರವನ್ನು ಕಟ್ಟಿ ಹಾಕಲು ವಿರೋಧ ಪಕ್ಷವಾದ ಬಿಜೆಪಿ ಹರಸಾಹಸ ಪಡ್ತಿದೆ. ಸದ್ಯ ಕೇಸರಿ ಪಾಳಯವೇ ಒಡೆದ ಮನೆಯಂತಾಗಿದೆ. ಸರ್ಕಾರದ ವಿರುದ್ಧ ಸರಿಯಾಗಿ ಪ್ರತಿಭಟಿಸೋದಿರಲಿ.. ಅವರ ಪಕ್ಷದಲ್ಲೇ ಒಗ್ಗಟ್ಟಿಲ್ಲ. ಸಾಕಷ್ಟು ಹಗರಣಗಳನ್ನು ಸರ್ಕಾರವೇ ವಿಪಕ್ಷಗಳ ಕೈಯಲ್ಲಿ ಇಟ್ಟು ಕೊಟ್ಟರೂ ಕಮಲ ನಾಯಕರು ಮಾತ್ರ ವಿಪಕ್ಷದಲ್ಲಿ ಇದ್ದೇವಾ ಅನ್ನೋದನ್ನೆ ಮರೆತಿದ್ದಾರೆ. ಕರ್ನಾಟಕದಲ್ಲಿ ಇದ್ದೂ ಇಲ್ಲದಂತಿರುವ ಕಮಲ ಕಲಿಗಳನ್ನು ಬಡಿದೆಬ್ಬಿಸಿ.. ಬಿಸಿಮುಟ್ಟಿಸಲು.. ತರಬೇತಿ ನೆಪದಲ್ಲಿ ಸಂಘ ಪರಿವಾರದ ನಾಯಕರು ಅಖಾಡಕ್ಕೆ ಇಳಿಯಲಿದ್ದಾರೆ.
ಇದನ್ನೂ ಓದಿ:ಕಲ್ಯಾಣ ಕರ್ನಾಟಕಕ್ಕೆ ಪ್ರತೇಕ ಸಚಿವಾಲಯ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಯಲಹಂಕದ ಖಾಸಗಿ ಹೋಟೆಲ್ನಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಚಿಂತನ ಮಂಥನ ಸಭೆ ನಡೆಯಲಿದೆ. ಮೊದಲ ದಿನ ಅಂದ್ರೆ ಇವತ್ತು ಬಿಜೆಪಿಯ ಹಾಲಿ ಸಂಸದರು, ಹಾಲಿ ಶಾಸಕರು ಹಾಗೂ ಕೆಲ ಬಿಜೆಪಿಯ ಹಿರಿಯರು ನಾಯಕರು ಚಿಂತನ ಮಂಥನ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲಾ ಸೇರಿದಂತೆ ಬಿ. ಎಲ್ ಸಂತೋಷ್ ನೇತೃತ್ವದಲ್ಲಿ ಚಿಂತನ ಶಿಬಿರ ನಡೆಯಲಿದೆ.
ಚಿಂತನ ಶಿಬಿರದ ಉದ್ದೇಶ ಏನು..?
- ಉದ್ದೇಶ 1: ಪಕ್ಷದ ಉದ್ದೇಶ, ಸಿದ್ಧಾಂತದ ಬಗ್ಗೆ ನಾಯಕರಿಗೆ ಭೋದನೆ
- ಉದ್ದೇಶ 2: ಪಕ್ಷದಲ್ಲಿನ ಒಡಕು, ಸಂಘಟಿತ ಹೋರಾಟದ ಬಗ್ಗೆ ತರಬೇತಿ
- ಉದ್ದೇಶ 3: ಪಕ್ಷಕ್ಕಿಂತ ವ್ಯಕ್ತಿ ಕೇಂದ್ರವಾಗಿರೋ ಶಾಸಕರಿಗೆ ಟೀಚಿಂಗ್
- ಉದ್ದೇಶ 4: ಗುಂಪುಗಾರಿಕೆಯಿಂದ ಪಕ್ಷಕ್ಕೆ ಆಗ್ತಿರುವ ನಷ್ಟದ ಬಗ್ಗೆ ಚರ್ಚೆ
- ಉದ್ದೇಶ 5: ಸರ್ಕಾರದ ವಿರುದ್ಧ ಸಂಘಟಿತ ಹೋರಾಟಕ್ಕೆ ಸಜ್ಜಾಗಿಸುವುದು
- ಉದ್ದೇಶ 6: ಮುಂಬರುವ ಸ್ಥಳೀಯ ಚುನಾವಣೆಗೆ ಸಿದ್ಧತೆ ಮಾಡುವುದು
ರೆಬೆಲ್, ತಟಸ್ಥ ಬಣವನ್ನ ಒಗ್ಗೂಡಿಸಲು ಹೈಕಮಾಂಡ್ ಸರ್ಕಸ್..!
ನಾಳೆ. ಅಂದ್ರೆ ಎರಡನೇ ದಿನದ ಚಿಂತನ ಸಭೆ ಭಾರೀ ಕುತೂಹಲ ಕೆರಳಿಸಿದೆ. ನಾಳೆಯ ಶಿಬಿರದಲ್ಲಿ ಪ್ರಮುಖವಾಗಿ ಪಕ್ಷದಿಂದ ದೂರ ಉಳಿದಿರುವ ಮಾಜಿ ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಪಕ್ಷಕ್ಕೆ ಮಾಜಿ ನಾಯಕರ ಅವಶ್ಯಕತೆ ಬಗ್ಗೆ ಮನನ ಮಾಡಿಕೊಡಲಿದ್ದಾರೆ. ಕೆಲವು ಕಡೆ ಜೆಡಿಎಸ್ ಬಿಜೆಪಿ ಮೈತ್ರಿ ಗೊಂದಲ ಇನ್ನೂ ಸಹ ಮುಂದುವರಿದ್ದು, ಅದಕ್ಕೂ ಸಹ ಚಿಂತನಾ ಶಿಬಿರದಲ್ಲಿ ಮದ್ದು ಹರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ:ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರ ಡಿಎ ಏರಿಕೆ!
ಒಟ್ಟಾರೆ.. ರಾಜ್ಯ ಬಿಜೆಪಿ ವಿಪಕ್ಷದಲ್ಲಿದ್ದರೂ.. ಅದೇ ಪಕ್ಷದ ರೆಬಲ್ಸ್ ನಾಯಕರೇ ವಿರೋಧ ಪಕ್ಷವಾಗಿ ಕಾಡುತ್ತಿದ್ದಾರೆ.. ಇನ್ನೂ ತಟಸ್ಥ ಬಣವೂ ಸಹ ರಾಜ್ಯಾಧ್ಯಕ್ಷ ಜೊತೆಗೆ ಕೈ ಜೋಡಿಸ್ತಿಲ್ಲ ಎಂಬ ಆರೋಪವೂ ಇದೆ. ಅಷ್ಟೇ ಅಲ್ಲದೇ ಸರ್ಕಾರ ವಿರುದ್ಧದ ಯಾವುದೇ ಪ್ರತಿಭಟನೆಯಲ್ಲಿ ಇದುವರೆಗೂ ಒಗ್ಗಟ್ಟಿನಿಂದ ಪ್ರತಿಭಟನೆ ಮಾಡಿಲ್ಲ. ಹೀಗಾಗಿ ಎರಡೂ ದಿನಗಳ ಚಿಂತನ ಶಿಬಿರದಲ್ಲಿ ರೆಬಲ್ಸ್ ನಾಯಕರು ಭಾಗಿಯಾಗ್ತಾರಾ? ಈ ಶಿಬಿರದಿಂದ ಕೇಸರಿ ಕಲಿಗಳು ಮುನಿಸು ಮರೆತು.. ಪಕ್ಷಕ್ಕಾಗಿ ಒಂದಾಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ವಿಶೇಷ ವರದಿ: ಗಣಪತಿ ಹೊನ್ನಾವರ ನ್ಯೂಸ್ ಫಸ್ಟ್ ಕನ್ನಡ