ರಾಜ್ಯಪಾಲರಿಗೆ ಸಿದ್ದರಾಮಯ್ಯ ಸರ್ಕಾರ ಬರೆದುಕೊಟ್ಟಿದ್ದ ಭಾಷಣದಲ್ಲಿ ಏನಿತ್ತು..?

ರಾಜ್ಯ ಸರ್ಕಾರ ಕರೆದಿರುವ ಜಂಟಿ ಅಧಿವೇಶನವು ಭಾರೀ ಹೈಡ್ರಾಮಾಕ್ಕೆ ಕಾರಣವಾಗಿದೆ. ರಾಜ್ಯಪಾಲರು ಜಂಟಿ ಅಧಿವೇಶವನ್ನು ಉದ್ದೇಶಿಸಿ ಸರ್ಕಾರ ಬರೆದುಕೊಟ್ಟಿರುವ ಭಾಷಣವನ್ನು ಓದಲು ನಿರಾಕರಿಸಿದ್ದಾರೆ. ಹಾಗಿದ್ದರೆ ಆ ಭಾಷಣದಲ್ಲಿ ಏನಿತ್ತು..?

author-image
Ganesh Kerekuli
Siddaramiah Thawar chand
Advertisment

ಬೆಂಗಳೂರು: ರಾಜ್ಯ ಸರ್ಕಾರ ಕರೆದಿರುವ ಜಂಟಿ ಅಧಿವೇಶನವು ಭಾರೀ ಹೈಡ್ರಾಮಾಕ್ಕೆ ಕಾರಣವಾಗಿದೆ. ರಾಜ್ಯಪಾಲರು ಜಂಟಿ ಅಧಿವೇಶವನ್ನು ಉದ್ದೇಶಿಸಿ ಸರ್ಕಾರ ಬರೆದುಕೊಟ್ಟಿರುವ ಭಾಷಣವನ್ನು ಓದಲು ನಿರಾಕರಿಸಿ, ತಾವೇ ತಯಾರಿಸಿದ್ದ ಭಾಷಣದ ಪ್ರತಿಯನ್ನು ಓದಿ ಕ್ಷಣಾರ್ಧದಲ್ಲಿ ಅಲ್ಲಿಂದ ಹೊರಟು ಹೋದರು. ಇದು ಆಡಳಿತರೂಢ ಕಾಂಗ್ರೆಸ್​​ನ ಆಕ್ರೋಶಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: ರಾಜ್ಯಪಾಲರು ಕೇಂದ್ರದ ಕೈಗೊಂಬೆ -ಭಾಷಣ ಮಾಡದಿದ್ದಕ್ಕೆ ಸಿಎಂ ಹಿಗ್ಗಾಮುಗ್ಗಾ ವಾಗ್ದಾಳಿ

ರಾಜ್ಯಪಾಲರ ಭಾಷಣದಲ್ಲಿ ಏನಿತ್ತು..? 

ಹಾಗಿದ್ದರೆ ಸರ್ಕಾರ ಬರೆದುಕೊಟ್ಟಿದ್ದ ಭಾಷಣದಲ್ಲಿ ಏನಿತ್ತು ಅಂತಾ ನೋಡೋದಾದ್ರೆ, ರಾಜ್ಯಪಾಲರು ಓದಬೇಕಾಗಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವಿತ್ತು. ಮನರೇಗಾ ವಿಚಾರವನ್ನ ಪ್ರಸ್ತಾಪಿಸಿ ರಾಜ್ಯ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿ ತಯಾರಿಸಿದ್ದ ಭಾಷಣ ಅದಾಗಿತ್ತು. 

ನರೇಗಾದಲ್ಲಿನ ಬೇಡಿಕೆಯನ್ನು ಆಧರಿಸಿ ಉದ್ಯೋಗ ನೀಡಬೇಕೆಂಬ ತತ್ವವನ್ನು ಧ್ವಂಸ ಮಾಡಿ ಪೂರೈಕೆ ಆಧಾರಿತ ಯೋಜನೆ ಮಾಡಲಾಗಿದೆ. ಕಾರ್ಪೊರೇಟ್ ಬಂಡವಾಳಿಗರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ, ‘ವಿಬಿ ಗ್ರಾಮ್ ಜಿ’ ಯೋಜನೆ ರೂಪಿಸಲಾಗಿದೆ. ಆ ಮೂಲಕ ಗ್ರಾಮೀಣ ಜನರ ಹಿತಾಸಕ್ತಿಯನ್ನು ಗಾಳಿಗೆ ತೂರಲಾಗಿದೆ. 

ಇದರಿಂದಾಗಿ ಗ್ರಾಮೀಣ ಆಸ್ತಿ ಸೃಜನೆಯ ಮೇಲೆ ಮತ್ತು ಕೂಲಿಕಾರರು ಅವರು ಇರುವ ಸ್ಥಳಗಳಲ್ಲಿಯೇ ಉದ್ಯೋಗ ಒದಗಿಸಬೇಕೆಂಬ ಘನವಾದ ಉದಾತ್ತ ಉದ್ದೇಶಗಳನ್ನು ತರಗೆಲೆಗಳಂತೆ ಉದುರಿಸಲಾಗಿದೆ. ಇಂತಹ ಪುಗತಿ ವಿರೋಧಿ ಕ್ರಮವನ್ನು ನನ್ನ ಸರ್ಕಾರ ಬಲವಾಗಿ ಖಂಡಿಸುತ್ತದೆ. ಹೆಸರಾಂತ ಮನರೇಗಾ ರಾಷ್ಟ್ರದಾದ್ಯಂತ ಪಸಿದ್ಧಿ ಪಡೆದಿತ್ತು, ಪಗತಿಯ ಪ್ರತೀಕವಾಗಿತ್ತು ಎಂಬುದನ್ನು ನೀರಿನಲ್ಲಿ ಹೋಮ ಮಾಡಿದಂತೆ ಕೇಂದ್ರ ಸರ್ಕಾರ ಈ ಯೋಜನೆಗೆ ತಿಲಾಂಜಲಿಯನ್ನಿಟ್ಟಿದೆ. 

ಮನರೇಗಾ ಯೋಜನೆಯಲ್ಲಿದ್ದ ಗಾಂಧೀಜಿಯವರ ಪ್ರಧಾನ ಆಶಯವಾದ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಹೊಸ ಕಾಯ್ದೆಯು ದುರ್ಬಲಗೊಳಿಸಿದೆ. ರಾಷ್ಟ್ರದ ಪ್ರಜಾಸತ್ತೆಗೆ ಮೂಲಭೂತ ಅಡಿಪಾಯ ಒದಗಿಸುವ ಪಂಚಾಯತ್ ರಾಜ್ ಸಂಸ್ಥೆಗಳು ಅಧಿಕಾರ ವಿಕೇಂದ್ರಿಕರಣದ ಸಂಕೇತಗಳು. ಈ ವಿಕೇಂದ್ರಿಕೃತ ವ್ಯವಸ್ಥೆಯ ಅಡಿಪಾಯವನ್ನೇ ಬುಡಮೇಲು ಮಾಡಿ ಕೇಂದ್ರಿಕೃತ ವ್ಯವಸ್ಥೆಗೆ ಕೇಂದ್ರ ಸರ್ಕಾರವು ಬುನಾದಿ ಹಾಕಿದೆ. 

ಮನರೇಗಾ ಕಾಯ್ದೆಯಲ್ಲಿ ಕಾಮಗಾರಿಗಳನ್ನು ಗ್ರಾಮ ಸಭೆಗಳಲ್ಲಿಟ್ಟು ತೀರ್ಮಾನ ಮಾಡಿ ಅನುಷ್ಠಾನ ಮಾಡಲಾಗುತ್ತಿತ್ತು. ಹೊಸ ಕಾಯ್ದೆಯಲ್ಲಿ ಗ್ರಾಮಸಭೆಗಳಿಗಿದ್ದ ಅಧಿಕಾರವನ್ನು ಕೇಂದ್ರ ಸರ್ಕಾರದ ಮಾನದಂಡಗಳ ಮೂಲಕ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕೇಂದ್ರದ ಈ ಕ್ರಮಗಳು ಕೇವಲ ಪ್ರಜಾಸತ್ತಾತ್ಮಕತೆಗೆ ವಿರೋಧಿ ಮಾತ್ರ ಅಲ್ಲ, ರಾಷ್ಟ್ರದ ಬಹುಪಾಲು ನಾಗರೀಕರ ಬೇಡಿಕೆಗಳನ್ನು ನಿರ್ಲಕ್ಷಿಸುವ ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ವಿನಾಶದ ಅಂಚಿಗೆ ದೂಡುವ ಪುಗತಿ ವಿರೋಧಿ ಕ್ರಮವಾಗಿದೆ. 

ನರೇಗಾ ಯೋಜನೆಯಿಂದಾಗಿ ಗುಳೆ ಹೋಗುವ ಸಮಸ್ಯೆ ಕಡಿಮೆಯಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ನಿರ್ಧಾರಗಳನ್ನು ಕೇಂದ್ರದಿಂದ ಹೇರಲಾಗುತ್ತದೆ. ದೆಹಲಿಯಲ್ಲಿ ಅಧಿಕಾರಿಗಳ ಪರಿಷತ್ತನ್ನು ರಚಿಸಲಾಗುತ್ತದೆ. ಈ ಅಧಿಕಾರಿಗಳ ಪರಿಷತ್ತು ಯಾವ ಪಂಚಾಯಿತಿಗಳಲ್ಲಿ ಈ ಯೋಜನೆಗಳನ್ನು ಜಾರಿಗೆ ತರಬೇಕೆಂಬುದನ್ನು ನಿರ್ಣಯಿಸುತ್ತದೆ. ಉದ್ಯೋಗ ಅರಸಿ ದೊಡ್ಡ ದೊಡ್ಡ ಪಟ್ಟಣಗಳಿಗೆ ಗುಳೆ ಹೋಗುವ ಅಥವಾ ವಲಸೆ ಹೋಗುವ ವ್ಯವಸ್ಥೆಯನ್ನು ಪುನ‌ರ್ ಸ್ಥಾಪಿಸುವ ಈ ‘ವಿಬಿ ಗ್ರಾಮ್ ಜಿ’ ಯೋಜನೆಯನ್ನು ನನ್ನ ಸರ್ಕಾರ ಅತ್ಯಂತ ಪ್ರಬಲವಾಗಿ ವಿರೋಧಿಸುತ್ತದೆ. 

ಮನರೇಗಾ ಕಾಯ್ದೆಯು ದಲಿತರು, ಆದಿವಾಸಿಗಳು, ಮಹಿಳೆಯರು, ಹಿಂದುಳಿದವರು, ರೈತಾಪಿ ಸಮುದಾಯಗಳ ಜನರ ಉದ್ಯೋಗದ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಉದ್ಯೋಗ ಖಾತ್ರಿಗೆ ಸಂಬಂಧಿಸಿದ ಕಾಯ್ದೆಯನ್ನು ರದ್ದುಗೊಳಿಸಿ ಹೊಸ ಕಾಯ್ದೆಯನ್ನು ಜಾರಿಗೊಳಿಸುವಾಗ ರಾಜ್ಯಗಳ ಅಭಿಪ್ರಾಯ ಪಡೆಯಬೇಕಾಗಿತ್ತು. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಗಳ ಪಾಲೂ ಇರುತ್ತದೆ. ಹೀಗಿರುವಾಗ ರಾಜ್ಯಗಳನ್ನು ಸಂಪರ್ಕಿಸದೆ ಜಾರಿಗೊಳಿಸಿರುವುದು ಸಂವಿಧಾನ ಬಾಹಿರ ನಡೆಯಾಗಿರುತ್ತದೆ. 

ಮನರೇಗಾದಲ್ಲಿದ್ದ ಕಾರ್ಮಿಕ ಕೇಂದ್ರಿತ ಹಕ್ಕುಗಳನ್ನು ಮೊಟಕುಗೊಳಿಸಿ ಅವರನ್ನು ಗುತ್ತಿಗೆದಾರರ ಅಧೀನಕ್ಕೆ ನೀಡಲಾಗುತ್ತಿದೆ. ಬೆಲೆಯೇರಿಕೆ, ಹಣದುಬ್ಬರಗಳನ್ನು ಆಧರಿಸಿ ಕೂಲಿಯನ್ನು ಪರಿಷ್ಕರಿಸುತ್ತಿದ್ದ ಅವಕಾಶಗಳೂ ಹೊಸ ಕಾಯ್ದೆಯಲ್ಲಿ ಕ್ಷೀಣಿಸಿವೆ. ಇದರಿಂದ ಬಡ ಕೂಲಿ ಕಾರ್ಮಿಕರ ಸಾಮಾಜಿಕ ಭದ್ರತೆಯು ಇಲ್ಲವಾಗುತ್ತಿದೆ. ಮಹಾತ್ಮ ಗಾಂಧೀಜಿಯವರ ಹೆಸರನ್ನು ತೆಗೆದು ಹಾಕಲಾಗಿದೆ. ಕೇಂದ್ರ ಸರ್ಕಾರದ ನೀತಿಗಳಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರಗಳು ಹೊಸ ಕಾಯ್ದೆಯ ಪ್ರಕಾರ ಶೇ.40 ರಷ್ಟು ಅನುದಾನವನ್ನು ನೀಡಬೇಕಾಗುತ್ತದೆ. 

ರಾಜ್ಯವು ಅನುದಾನ ನೀಡದಿದ್ದರೆ ಕೇಂದ್ರವು ‘ವಿಬಿ ಗ್ರಾಮ್ ಜಿ’ ಯೋಜನೆಗೆ ಅನುದಾನಗಳನ್ನು ನೀಡುವುದಿಲ್ಲ. ಹಾಗಾಗಿ ಯೋಜನೆಯು ನಿಧಾನವಾಗಿ ಅವಸಾನದ ಹಾದಿಯ ಕಡೆಗೆ ತೆರಳುತ್ತದೆ. ಈ ಎಲ್ಲಾ ಕಾರಣಗಳಿಂದ ಕೇಂದ್ರ ಸರ್ಕಾರವು ತಂದಿರುವ ‘ವಿಬಿ ಗ್ರಾಮ್ ಜಿ’ ಕಾನೂನನ್ನು ತಕ್ಷಣ ರದ್ದುಪಡಿಸಿ, ಬಡವರ, ಕೃಷಿ ಕಾರ್ಮಿಕರ, ಗ್ರಾಮೀಣ ಆಸ್ತಿ ಸೃಜನೆಗೆ ಅವಕಾಶ ಕಲ್ಪಿಸುವ, ನಿರುದ್ಯೋಗಿ ಭತ್ಯೆ ಒದಗಿಸುವ, ಕಾರ್ಮಿಕರಿಗೆ ಅವರಿರುವ ಸ್ಥಳದಲ್ಲಿಯೇ ಕೆಲಸ ಒದಗಿಸುವ ‘ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ’ಯನ್ನು ಮರು ಸ್ಥಾಪಿಸಬೇಕೆಂದು ನನ್ನ ಸರ್ಕಾರ ಕೇಂದ್ರವನ್ನು ಒತ್ತಾಯಿಸುತ್ತದೆ. 

ಇದನ್ನೂ ಓದಿ:ರಾಜ್ಯಪಾಲರನ್ನು ಅಡ್ಡಗಟ್ಟಿದ ಬಿ.ಕೆ.ಹರಿಪ್ರಸಾದ್ : ಜುಬ್ಬಾ ಹರಿದ ಭದ್ರತಾ ಸಿಬ್ಬಂದಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar thawar chand gehlot
Advertisment