/newsfirstlive-kannada/media/media_files/2025/08/19/chandanaananthakrishnaofficial3-2025-08-19-14-06-33.jpg)
ಏಪ್ರಿಲ್ 22.. ಇಡೀ ದೇಶವೇ ಬೆಚ್ಚಿಬಿದ್ದ ದಿನವದು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಬೆಂಬಲಿತ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಪೈಶಾಚಿಕ ಕೃತ್ಯ ನಡೆಸಿದ್ದರು. ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಜೀವ ಕಳೆದುಕೊಂಡಿದ್ದರು. ಅವರಲ್ಲಿ ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ ಕೂಡ ಒಬ್ಬರು.
ಹೌದು, ವಿನಯ್ ನರ್ವಾಲ್ ಹನಿಮೂನ್ಗಾಗಿ ಪತ್ನಿ ಹಿಮಾಂಶಿ ನರ್ವಾಲ್ರನ್ನು ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾಗ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದರು. ಈಗ ಪಹಲ್ಗಾಮ್ ಘಟನೆ ಆಧರಿಸಿದ ‘In his name’ ಹೆಸರಿನ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ವಿಶೇಷ ಏನೆಂದರೆ ಸ್ವಾತಂತ್ರ್ಯ ದಿನಾಚರಣೆಯಂದೇ ಸಿನಿಮಾದ ರೀತಿಯಲ್ಲೇ ಈ ಹಾಡು ಬಿಡುಗಡೆಯಾಗಿದೆ.
ಕನ್ನಡ ಕಿರುತೆರೆ ಸ್ಟಾರ್ ನಟಿ ಚಂದನಾ ಅನಂತಕೃಷ್ಣ ಹಾಗೂ ನಿದರ್ಶನ್ ಎಂಬುವವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಹಾಡು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಭಾನು ಪ್ರಕಾಶ್ ಜೋಯಿಸ್ ಬರೆದಿರುವ ಈ ಹಾಡನ್ನು ನಟಿ ಚಂದನಾ ಅವರೇ ಹಾಡಿದ್ದು, ಆ ಅದ್ಭುತ ಹಾಡಿನಲ್ಲೇ ಎಲ್ಲ ಭಾವನೆಗಳನ್ನು ತುಂಬಿರುವುದು ಮತ್ತೊಂದು ವಿಶೇಷ.
ಇದೀಗ ಪಹಲ್ಗಾಮ್ ಘಟನೆ ಆಧರಿತ ಹಾಡಿಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇಡೀ ತಂಡದ ಪರಿಶ್ರಮಕ್ಕೆ ಕಿಚ್ಚ ಸುದೀಪ್ ಬೆನ್ನು ತಟ್ಟಿದ್ದಾರೆ. In his name ಹೆಸರಿನ ವಿಡಿಯೋ ಸಾಂಗ್ ನೋಡಿದ ಕಿಚ್ಚ ಸುದೀಪ್ ಚಂದನಾ ಅನಂತಕೃಷ್ಣ ನಟನೆ, ಗಾಯನ ಮತ್ತು ನಿರ್ಮಿಸಿರುವ ಹಾಡಿನ ಬಗ್ಗೆ ಮಾತಾಡಿದ್ದಾರೆ. ಕಿಚ್ಚ ಸುದೀಪ್ ಅವರು In his name ಹಾಡಿನ ಬಗ್ಗೆ ಮಾತಾಡಿದ್ದನ್ನು ನಟಿ ಚಂದನಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಜೊತೆಗೆ ‘‘ನಮ್ಮ ಇಡೀ ಯೋಜನೆಗೆ ನಿಮ್ಮ ಅಚಲ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನಾವು ಕಿಚ್ಚ ಸುದೀಪ್ ಸರ್ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಿಮ್ಮ ಉಪಸ್ಥಿತಿ, ಮಾರ್ಗದರ್ಶನ ಮತ್ತು ನಿಮ್ಮ ಮಾತುಗಳು ಜಗತ್ತನ್ನು ಅರ್ಥೈಸಿವೆ ಮತ್ತು ನಿಮ್ಮ ಬೆಂಬಲವನ್ನು ಪಡೆದಿರುವುದು ನಿಜವಾದ ಗೌರವವಾಗಿದೆ’’ ಎಂದು ಬರೆದುಕೊಂಡಿದ್ದಾರೆ. ಇನ್ನೂ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಇನ್ಸ್ಟಾಗ್ರಾಮ್ನಲ್ಲಿ In his name ಪೋಸ್ಟರ್ ಶೇರ್ ಮಾಡಿಕೊಂಡು ವೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಚಹಾ ಬೇಡ.. ಬ್ಲ್ಯಾಕ್ ಟೀ ಕುಡಿಯೋದ್ರಿಂದ ಆರೋಗ್ಯಕ್ಕೆ ಇವೆ ಸಾಕಷ್ಟು ಲಾಭಗಳು, ಏನೇನು..?
ರಿಲೀಸ್ ಆಗಿರೋ In his name ವಿಡಿಯೋದಲ್ಲಿ ನೌಕಾಪಡೆಯ ಯೋಧ ಹೆಣ್ಣು ನೋಡುವ ಶಾಸ್ತ್ರದಿಂದ ಹಿಡಿದು, ಕುಟುಂಬಸ್ಥರು ತೋರಿಸಿದ ಹುಡುಗನ ಮೇಲೆ ಪ್ರೀತಿ ಮೂಡಿ ಮದುವೆ ಆಗುತ್ತದೆ. ಮದುವೆಯ ನಂತರ ಹನಿಮೂನ್ಗೆ ಹೋದ ನವ ಜೋಡಿಯ ಮೇಲೆ ಪಹಲ್ಗಾಮ್‌ನಲ್ಲಿ ನಡೆದ ದಾಳಿಯನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿಡಿಯೋದಲ್ಲಿ ತೋರಿಸಲಾಗಿದೆ. ಈ ಸುಂದರವಾದ ಹಾಡಿಗೆ ಶಿವಶಂಕರ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಅನುರಂಜನ್ ಸಂಕಲನ ಮಾಡಿದ್ದಾರೆ. ನಟಿ ಚಂದನಾ ಅನಂತಕೃಷ್ಣ ಅವರೇ ಹಾಡನ್ನು ಹಾಡಿದ್ದಾರೆ. ಅಷ್ಟೇ ಅಲ್ಲದೇ ಅದ್ಭುತವಾಗಿ ನಟಿಸಿದ್ದಾರೆ. ತೇಜಸ್ ಕಿರಣ್ ಹಾಗೂ ಮಯೂರ್ ಅಂಬೆಕಲ್ಲು ನಿರ್ದೇಶನ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ