/newsfirstlive-kannada/media/media_files/2026/03/09/ahmed-shehzad-hails-team-indias-progress-after-t20-world-cup-win-2026-03-09-10-45-24.jpg)
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ 2026ರ ಟಿ20 ವಿಶ್ವಕಪ್ (T20 World Cup 2026) ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದ ಟೀಮ್ ಇಂಡಿಯಾ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್‌ನಲ್ಲಿ ಟೀಮ್ ಇಂಡಿಯಾ 255 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ, ಕಿವೀಸ್ ಪಡೆಯನ್ನು ಕೇವಲ 159 ರನ್‌ಗಳಿಗೆ ಆಲೌಟ್ ಮಾಡಿ ಮೆರೆದಾಡಿದೆ.
ಭಾರತದ ಈ ಐತಿಹಾಸಿಕ ಗೆಲುವು ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದರೆ ಇತ್ತ ಪಾಕಿಸ್ತಾನದ ಕ್ರಿಕೆಟ್ ವಲಯದಲ್ಲಿ ಮಾತ್ರ ಭಾರೀ ಸಂಚಲನ ಹಾಗೂ ‘ಮಿರ್ಚಿ’ಗೆ ಕಾರಣವಾಗಿದೆ. ಟೀಮ್ ಇಂಡಿಯಾದ ಈ ಅದ್ಭುತ ಪ್ರದರ್ಶನವನ್ನು ನೋಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಹ್ಮದ್ ಶೆಹಜಾದ್ (Ahmed Shehzad), ತಮ್ಮದೇ ದೇಶದ ಕ್ರಿಕೆಟ್ ವ್ಯವಸ್ಥೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತದಲ್ಲಿ 'ಸಿಸ್ಟಮ್' ಇದೆ, ನಮ್ಮಲ್ಲಿ ಏನಿದೆ?
ಪಾಕಿಸ್ತಾನದ 'ಹಾರ್ನಾ ಮನಾ ಹೈ' ಟಿವಿ ಶೋನಲ್ಲಿ ಮಾತನಾಡಿದ ಅಹ್ಮದ್ ಶೆಹಜಾದ್, ಭಾರತ ಮತ್ತು ಪಾಕ್ ಕ್ರಿಕೆಟ್ ನಡುವಿನ ವ್ಯತ್ಯಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಪ್ರತಿಭೆಗೆ ಯಾವುದೇ ಕೊರತೆಯಿಲ್ಲ. ಆದರೆ ನಮ್ಮ ವ್ಯವಸ್ಥೆಯಲ್ಲಿ ದೋಷವಿದೆ. ಭಾರತದಲ್ಲಿ ಪ್ರತಿಭೆಯ ಜೊತೆಗೆ ಅತ್ಯುತ್ತಮ ವ್ಯವಸ್ಥೆಯೂ ಇದೆ. ಆ ವ್ಯವಸ್ಥೆಯ ಮೂಲಕವೇ ಅವರು ಮ್ಯಾಚ್ ವಿನ್ನರ್‌ಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಬಣ್ಣಿಸಿದ್ದಾರೆ.
ಸಂಜು, ಇಶಾನ್, ಅಭಿಷೇಕ್..
ಭಾರತದ ಯುವ ಆಟಗಾರರನ್ನು ಕೊಂಡಾಡಿದ ಶೆಹಜಾದ್, ಸಂಜು ಸ್ಯಾಮ್ಸನ್ ನೋಡಿ, ಅವರಿಗೆ ಮೊದಲೆಲ್ಲಾ ಹೆಚ್ಚಿನ ಅವಕಾಶ ಸಿಗುತ್ತಿರಲಿಲ್ಲ. ಈಗ ವಿಶ್ವಕಪ್‌ನಲ್ಲಿ ‘ಪ್ಲೇಯರ್ ಆಫ್ ದ ಟೂರ್ನಮೆಂಟ್’ ಆಗಿ ಹೊರಹೊಮ್ಮಿದ್ದಾರೆ. ಶಿಸ್ತಿನ ಕಾರಣಕ್ಕೆ ತಂಡದಿಂದ ಹೊರಗುಳಿದಿದ್ದ ಇಶಾನ್ ಕಿಶನ್ ದೇಶೀಯ ಕ್ರಿಕೆಟ್‌ನಲ್ಲಿ ಆಡಿ ಮತ್ತೆ ತಂಡಕ್ಕೆ ಬಂದು ಅಬ್ಬರಿಸಿದರು. ಇನ್ನು ಫೈನಲ್‌ನಂತಹ ಭಾರೀ ಒತ್ತಡದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 21 ಎಸೆತಗಳಲ್ಲಿ 52 ರನ್ ಸಿಡಿಸಿ ತಾವು ಯಾರು ಎಂಬುದನ್ನು ಸಾಬೀತುಪಡಿಸಿದರು. ಇದು ಭಾರತದ ತಾಕತ್ತು ಎಂದು ಗುಣಗಾನ ಮಾಡಿದ್ದಾರೆ.
ಇದನ್ನೂ ಓದಿ:ಟಿ-20 ವಿಶ್ವಕಪ್ ಗೆದ್ದ ಭಾರತ ತಂಡ-ಆಟಗಾರರ ಸಂಭ್ರಮಾಚರಣೆಯ ಫೋಟೋಗಳು..!
ಬ್ಯಾಟಿಂಗ್ ಮನಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಉತ್ತಮ ತಂಡಗಳು ಸರಿಯಾದ ಸಮಯಕ್ಕೆ ಪೀಕ್ ಆಗುತ್ತವೆ. ಟೀಮ್ ಇಂಡಿಯಾ ಕಣಕ್ಕಿಳಿಯುವಾಗಲೇ 250 ರನ್ ಬಾರಿಸುವ ಗುರಿ ಹೊಂದಿರುತ್ತದೆ. ಫೈನಲ್‌ನಲ್ಲಿ ನ್ಯೂಜಿಲೆಂಡ್ ಕೊಂಚ ಕಮ್‌ಬ್ಯಾಕ್ ಮಾಡಿದ್ದರಿಂದ 255 ಆಯ್ತು, ಇಲ್ಲದಿದ್ದರೆ ಭಾರತದ ಮೊತ್ತ 275ರ ಗಡಿ ದಾಟುತ್ತಿತ್ತು. ಅದೇ ಜಾಗದಲ್ಲಿ ಪಾಕಿಸ್ತಾನ ತಂಡವಿದ್ದಿದ್ದರೆ 180 ರನ್ ಗಳಿಸಿ ಸುಮ್ಮನಾಗುತ್ತಿತ್ತು. 180 ರನ್ ಮಾಡಿದ್ದೀವಿ, ಉಳಿದಿದ್ದನ್ನು ಬೌಲರ್‌ಗಳು ಡಿಫೆಂಡ್ ಮಾಡಿಕೊಳ್ಳುತ್ತಾರೆ ಎಂಬ ಮನಸ್ಥಿತಿ ನಮ್ಮವರದ್ದು. ಆದರೆ ಭಾರತ ಆ ರೀತಿ ಮಾಡುವುದಿಲ್ಲ, ಎದುರಾಳಿಯನ್ನು ಸಂಪೂರ್ಣವಾಗಿ ಹೊಸಕಿ ಹಾಕುತ್ತದೆ ಎಂದು ಪಾಕ್ ತಂಡದ ಕಳಪೆ ಮೈಂಡ್‌ಸೆಟ್ ಅನ್ನು ಟೀಕಿಸಿದ್ದಾರೆ.
ಉಗಾಂಡ, ಜಿಂಬಾಬ್ವೆ ವಿರುದ್ಧ ಗೆದ್ದು ಸಂಭ್ರಮಿಸ್ತೀರಾ?
ಪಾಕಿಸ್ತಾನ ತಂಡವನ್ನು ತೀವ್ರವಾಗಿ ಅಣಕಿಸಿದ ಶೆಹಜಾದ್, ನೀವು (ಪಾಕಿಸ್ತಾನ) ಆಡುತ್ತಿರುವ ಕ್ರಿಕೆಟ್ ಮಟ್ಟವಾದರೂ ಎಂಥದ್ದು? ನೀವು ಜಿಂಬಾಬ್ವೆ, ಕೀನ್ಯಾ, ಉಗಾಂಡಾದಂತಹ ದುರ್ಬಲ ತಂಡಗಳನ್ನು ಕರೆಸಿ ಅವರ ವಿರುದ್ಧ ಗೆದ್ದು ದೊಡ್ಡ ಸಾಧನೆ ಮಾಡಿದಂತೆ ಸಂಭ್ರಮಿಸುತ್ತೀರಿ. ಭಾರತ ಹಾಗಲ್ಲ, ಅವರು ದೊಡ್ಡ ಟೂರ್ನಿಗಳಲ್ಲಿ ಬಲಿಷ್ಠ ತಂಡಗಳ ವಿರುದ್ಧವೇ ದೊಡ್ಡ ಮಟ್ಟದಲ್ಲಿ ಆಡಿ ಗೆಲ್ಲುತ್ತಾರೆ ಎಂದು ತಮ್ಮದೇ ದೇಶದ ಕ್ರಿಕೆಟ್ ಮಂಡಳಿಯ ಮಾನ ಹರಾಜು ಹಾಕಿದ್ದಾರೆ. ಒಟ್ಟಿನಲ್ಲಿ ಟೀಮ್ ಇಂಡಿಯಾದ ಗೆಲುವು ಪಾಕಿಸ್ತಾನದ ಕ್ರಿಕೆಟ್ ಪಂಡಿತರಿಗೆ ತಮ್ಮದೇ ತಂಡದ ತಪ್ಪುಗಳನ್ನು ಕನ್ನಡಿ ಹಿಡಿದು ತೋರಿಸುವಂತೆ ಮಾಡಿದೆ.
ಇದನ್ನೂ ಓದಿ:ಇರಾನ್ ಸುಪ್ರೀಂ ಲೀಡರ್ ಆಗಿ ಅಯತೊಲ್ಲಾ ಅಧಿಕೃತ ಆಯ್ಕೆ.. ‘ಹುಡುಕಿ ಹೊಡೆಯುತ್ತೇವೆ’ ಎಂದು ಟ್ರಂಪ್ ಮತ್ತೆ ಧಮ್ಕಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us