/newsfirstlive-kannada/media/media_files/2026/03/09/ishan-kishan-13-2026-03-09-11-12-01.jpg)
ಭಾನುವಾರ ನಡೆದ 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಜಯಭೇರಿ ಬಾರಿಸಿ ವಿಶ್ವಕಪ್ ಎತ್ತಿಹಿಡಿದಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ ಯುವ ಆಟಗಾರ ಇಶಾನ್ ಕಿಶನ್ ಆಟ ಎಲ್ಲರ ಗಮನ ಸೆಳೆದಿತ್ತು. ಮೈದಾನದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದು ಅಬ್ಬರಿಸಿದ ಈ ಆಟಗಾರನ ಮನಸ್ಸಿನಲ್ಲಿ ಎಂಥದ್ದೊಂದು ಅರಗಿಸಿಕೊಳ್ಳಲಾಗದ ದುಃಖ ಮನೆಮಾಡಿತ್ತು ಎಂಬ ವಿಚಾರ ಬಯಲಾಗಿದೆ.
ವಿಶ್ವಕಪ್ ಫೈನಲ್ ಪಂದ್ಯಕ್ಕೂ ಕೇವಲ ಎರಡು ದಿನಗಳ ಮೊದಲು (ಶುಕ್ರವಾರ) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಶಾನ್ ಕಿಶನ್ ಸೋದರ ಸಂಬಂಧಿ (Cousin) ಹಾಗೂ ಭಾವ (Brother-in-law) ಮೃತಪಟ್ಟಿದ್ದರು. ಇಂಥದ್ದೊಂದು ಆಘಾತಕಾರಿ ಘಟನೆ ನಡೆದರೂ ಕಣ್ಣೀರು ನುಂಗಿಕೊಂಡು ದೇಶಕ್ಕಾಗಿ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದ ಇಶಾನ್ ಅವರ ವೃತ್ತಿಪರತೆ ಹಾಗೂ ಡೆಡಿಕೇಶನ್ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ.
ನಾವೆಲ್ಲ ತೀವ್ರ ಸಂಕಷ್ಟದಲ್ಲಿದ್ದೇವೆ ಎಂದಿದ್ದ ತಂದೆ
ಈ ದುರಂತದ ಕುರಿತು ಫೈನಲ್ ಪಂದ್ಯಕ್ಕೂ ಮುನ್ನ ‘ಟೈಮ್ಸ್ ಆಫ್ ಇಂಡಿಯಾ’ ಜೊತೆ ಮಾತನಾಡಿದ್ದ ಇಶಾನ್ ತಂದೆ ಪ್ರಣವ್ ಪಾಂಡೆ, ತುಂಬಾ ದೊಡ್ಡ ಅನಾಹುತ ನಡೆದುಹೋಯಿತು. ನಾವೆಲ್ಲರೂ ತೀವ್ರ ಸಂಕಷ್ಟದಲ್ಲಿದ್ದೇವೆ ಹಾಗೂ ಆಘಾತದಲ್ಲಿದ್ದೇವೆ. ಸುದ್ದಿ ತಿಳಿದ ತಕ್ಷಣ ಇಶಾನ್ ಮನೆಗೆ ಬರಲು ಬಯಸಿದ್ದ, ಆದರೆ ವಿಶ್ವಕಪ್ ಫೈನಲ್ ಇದ್ದ ಕಾರಣ ಅವನಿಗೆ ಮರಳಲು ಸಾಧ್ಯವಾಗಲಿಲ್ಲ. ಅವನು ತೀವ್ರ ದುಃಖದಲ್ಲಿದ್ದಾನೆ ಎಂದು ಭಾವುಕರಾಗಿ ಹೇಳಿದ್ದರು. ಈ ದುರಂತದ ಕಾರಣದಿಂದಾಗಿ ಇಶಾನ್ ತಂದೆಗೂ ಫೈನಲ್ ಪಂದ್ಯ ವೀಕ್ಷಿಸಲು ಅಹಮದಾಬಾದ್‌ಗೆ ಬರಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಇರಾನ್ ಸುಪ್ರೀಂ ಲೀಡರ್ ಆಗಿ ಅಯತೊಲ್ಲಾ ಅಧಿಕೃತ ಆಯ್ಕೆ.. ‘ಹುಡುಕಿ ಹೊಡೆಯುತ್ತೇವೆ’ ಎಂದು ಟ್ರಂಪ್ ಮತ್ತೆ ಧಮ್ಕಿ..!
ಆಪ್ತರನ್ನು ಕಳೆದುಕೊಂಡ ದುಃಖದಲ್ಲಿದ್ದ ಇಶಾನ್, ಪಂದ್ಯಕ್ಕೂ ಮುನ್ನ ನಡೆದ ನೆಟ್ಸ್ ಅಭ್ಯಾಸದ (Practice Session) ವೇಳೆಯೂ ಎಂದಿನ ಉತ್ಸಾಹದಲ್ಲಿರಲಿಲ್ಲ. ಅವರು ಹೆಚ್ಚು ಹೊತ್ತು ಬ್ಯಾಟಿಂಗ್ ಅಭ್ಯಾಸ ಕೂಡ ಮಾಡಲಿಲ್ಲ. ಈ ಕಷ್ಟದ ಸಮಯದಲ್ಲಿ ಭಾರತ ತಂಡದ ಹಲವು ಆಟಗಾರರು ಇಶಾನ್ ಬಳಿ ತೆರಳಿ, ಹೆಗಲ ಮೇಲೆ ಕೈಹಾಕಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಸ್ಫೋಟಕ ಆಟ, ಆಕಾಶದತ್ತ ಬ್ಯಾಟ್ ತೋರಿಸಿ ನಮನ!
ಇಷ್ಟೆಲ್ಲಾ ವೈಯಕ್ತಿಕ ನೋವಿದ್ದರೂ ಭಾನುವಾರದ ಫೈನಲ್ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್, ಯಾವುದೇ ಅಂಜಿಕೆಯಿಲ್ಲದೆ ಕೇವಲ 25 ಎಸೆತಗಳಲ್ಲಿ 54 ರನ್ ಚಚ್ಚಿ ನ್ಯೂಜಿಲೆಂಡ್ ಬೌಲರ್‌ಗಳನ್ನು ಬೆಚ್ಚಿಬೀಳಿಸಿದರು. ಟೂರ್ನಿಯಲ್ಲಿ ತಮ್ಮ ಮೂರನೇ ಅರ್ಧಶತಕ ಸಿಡಿಸಿದ ಬಳಿಕ ಇಶಾನ್, ತಮ್ಮ ಬ್ಯಾಟ್ ಅನ್ನು ಆಕಾಶದತ್ತ ತೋರಿಸುವ ಮೂಲಕ ಮೃತಪಟ್ಟ ತಮ್ಮ ಆಪ್ತರಿಗೆ ಈ ಅರ್ಧಶತಕವನ್ನು ಅರ್ಪಿಸಿದರು.
ಬ್ಯಾಟಿಂಗ್ ಮಾತ್ರವಲ್ಲದೆ ಫೀಲ್ಡಿಂಗ್‌ನಲ್ಲೂ ಮಿಂಚಿದ ಇಶಾನ್, ಕಿವೀಸ್‌ನ ಪ್ರಮುಖ ಬ್ಯಾಟರ್‌ಗಳಾದ ರಚಿನ್ ರವೀಂದ್ರ ಹಾಗೂ ಟಿಮ್ ಸೈಫರ್ಟ್ ಅವರ ಎರಡು ಅತ್ಯದ್ಭುತ ಕ್ಯಾಚ್‌ಗಳನ್ನು ಹಿಡಿದು ಪಂದ್ಯದ ಗತಿಯನ್ನೇ ಬದಲಿಸಿದರು. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಧಾರವಾದ ಇಶಾನ್ ಕಿಶನ್, ಈ ಟಿ20 ವಿಶ್ವಕಪ್‌ನಲ್ಲಿ ಆಡಿದ 9 ಇನ್ನಿಂಗ್ಸ್‌ಗಳಿಂದ ಒಟ್ಟು 317 ರನ್ ಕಲೆಹಾಕಿದರು. ಈ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಇದು ಭಾರತದ ತಾಕತ್ತು.. ನಾವಾಗಿದ್ರೆ ಉಗಾಂಡ, ಜಿಂಬಾಬ್ವೆ..’ ತನ್ನ ದೇಶದ ಹಣೆಬರ ಬಿಚ್ಚಿಟ್ಟ ಪಾಕ್ ಮಾಜಿ ಕ್ರಿಕೆಟಿಗ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us