/newsfirstlive-kannada/media/media_files/2026/02/08/bmtc-lady-conductor-honesty-1-2026-02-08-14-38-10.jpg)
ಬೆಂಗಳೂರು: ‘ಪ್ರಾಮಾಣಿಕತೆ ಇನ್ನೂ ಸತ್ತಿಲ್ಲ’ ಎನ್ನುವ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಆದರೆ, ಬೆಂಗಳೂರಿನಲ್ಲಿ ನಡೆದ ಈ ಘಟನೆ ಅದನ್ನು ಸಾಬೀತುಪಡಿಸಿದೆ. ಬಿಎಂಟಿಸಿ ಬಸ್‌ನಲ್ಲಿ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನವಿದ್ದ ಬ್ಯಾಗ್ ಒಂದನ್ನು ಮಹಿಳೆಯೊಬ್ಬರು ಮರೆತು ಹೋಗಿದ್ದರು. ಆದರೆ, ಬಸ್ ನಿರ್ವಾಹಕಿಯ ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆಯಿಂದಾಗಿ ಆ ಮಹಿಳೆಗೆ ತಮ್ಮ ಒಡವೆ ಮರಳಿ ಸಿಕ್ಕಿದೆ.
ಘಟನೆಯ ವಿವರ
ಕಳೆದ ಜನವರಿ 31 ರಂದು (ಶನಿವಾರ) ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಕೆ.ಆರ್ ಮಾರುಕಟ್ಟೆಯಿಂದ (KR Market) ಕನಕಪುರಕ್ಕೆ ತೆರಳುವ ಉದ್ದೇಶದಿಂದ ಬಸ್ ಹತ್ತಿದ್ದರು. ಆದರೆ ಅವರು ಬಸವನಗುಡಿಯವರೆಗೆ ಮಾತ್ರ ಟಿಕೆಟ್ ಪಡೆದಿದ್ದರು. ಶನಿವಾರವಾಗಿದ್ದರಿಂದ ಬಸ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ವಿಪರೀತ ರಶ್ ಇತ್ತು.
ಬಸವನಗುಡಿಯಲ್ಲಿ ಇಳಿದು ಬೇರೆ ಬಸ್‌ಗೆ ಬದಲಾಯಿಸುವ ಆತುರದಲ್ಲಿ, ಮಹಿಳೆ ತಾನು ಕುಳಿತಿದ್ದ ಸೀಟಿನ ಬಳಿಯೇ ಚಿನ್ನವಿದ್ದ ಬ್ಯಾಗ್ ಅನ್ನು ಮರೆತು ಬಸ್ ಇಳಿದಿದ್ದಾರೆ. ಬಸ್ ಇಳಿದು ಹೋದ ಬಳಿಕ ಬ್ಯಾಗ್ ಇಲ್ಲದಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರು ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿ ಬ್ಯಾಗ್ ಕಳೆದುಹೋಗಿದೆ ಎಂದು ದೂರು ನೀಡಿದ್ದಾರೆ.
ಬ್ಯಾಗ್ ಸಿಕ್ಕಿದ್ದು ಹೇಗೆ?
ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಮತ್ತು ಸಂಬಂಧಪಟ್ಟವರು ಬಿಎಂಟಿಸಿ ಮುಖ್ಯ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ನಿರ್ದಿಷ್ಟ ಬಸ್‌ನ ಕಂಡಕ್ಟರ್ ಮತ್ತು ಡ್ರೈವರ್ ಅವರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಬಸ್‌ನ ನಿರ್ವಾಹಕಿ (Conductor) ಗಂಗಾ ಪೂಜಾರಿ ಅವರು ಪರಿಶೀಲಿಸಿದಾಗ, ಮಹಿಳೆ ಕುಳಿತಿದ್ದ ಸೀಟಿನ ಬಳಿಯೇ ಬ್ಯಾಗ್ ಇರುವುದು ಕಂಡುಬಂದಿದೆ. ತಕ್ಷಣವೇ ಅವರು ಬ್ಯಾಗ್ ವಶಕ್ಕೆ ಪಡೆದು ಸುರಕ್ಷಿತವಾಗಿ ಇರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮತ್ತೆರಡು ಜವಾಬ್ದಾರಿ ಬೆನ್ನಲ್ಲೇ ‘ಕರ್ನಾಟಕಕ್ಕೆ ಬಂಪರ್ ಗಿಫ್ಟ್’ ಘೋಷಿಸಿದ ಕುಮಾರಸ್ವಾಮಿ..!
ಬಿಕ್ಕಿ ಬಿಕ್ಕಿ ಅತ್ತ ಮಹಿಳೆ
ನಂತರ ಮಹಿಳೆಯನ್ನು ಸಂಪರ್ಕಿಸಿ ಪದ್ಮನಾಭನಗರ ಡಿಪೋ ಬಳಿ ಕರೆಯಿಸಿಕೊಳ್ಳಲಾಯಿತು. ಅಲ್ಲಿ ಕಂಡಕ್ಟರ್ ಗಂಗಾ ಅವರು ಬ್ಯಾಗ್ ಅನ್ನು ಮಹಿಳೆಗೆ ಹಸ್ತಾಂತರಿಸಿದರು. ಕಳೆದು ಹೋಯಿತು ಎಂದುಕೊಂಡಿದ್ದ ಲಕ್ಷಾಂತರ ಮೌಲ್ಯದ ಚಿನ್ನ ಕೈ ಸೇರಿದ ತಕ್ಷಣ, ಆ ಮಹಿಳೆ ಆನಂದಬಾಷ್ಪ ಸುರಿಸುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಆರಂಭದಲ್ಲಿ ಕಂಡಕ್ಟರ್ ಗಂಗಾ ಅವರಿಗೆ ಬ್ಯಾಗ್‌ನಲ್ಲಿದ್ದ ವಸ್ತುಗಳ ಮೌಲ್ಯ ತಿಳಿದಿರಲಿಲ್ಲ. ನಂತರ ಅದರಲ್ಲಿ ಬರೋಬ್ಬರಿ 10 ಲಕ್ಷ ಮೌಲ್ಯದ ಚಿನ್ನದ ಸರಗಳು ಇವೆ ಎಂದು ತಿಳಿದಾಗ ಸ್ವತಃ ಕಂಡಕ್ಟರ್ ಗಾಬರಿ ಮತ್ತು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ಮೆಚ್ಚುಗೆ
ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಬೆಲೆಬಾಳುವ ಆಭರಣಗಳನ್ನು ಸುರಕ್ಷಿತವಾಗಿ ಹಿಂದಿರುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಿರ್ವಾಹಕಿ ಗಂಗಾ ಪೂಜಾರಿ ಮತ್ತು ಚಾಲಕ ಗೋವರ್ಧನ್ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಬಿಎಂಟಿಸಿ ಕೂಡ ತನ್ನ ಸಿಬ್ಬಂದಿಯ ಈ ಪ್ರಾಮಾಣಿಕತೆಯನ್ನು ಶ್ಲಾಘಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us