ಬೈಕ್ ಟ್ಯಾಕ್ಸಿಗೆ ಅನುಮತಿ ಬೆನ್ನಲ್ಲೇ ವರಸೆ ಬದಲಿಸಿದ ಆಟೋ ಚಾಲಕರು.. ಸರ್ಕಾರಕ್ಕೆ ಹೊಸ ಟೆನ್ಷನ್..!

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi) ವಿಚಾರ ಈಗ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಷ್ಟು ದಿನ ‘ಬೈಕ್ ಟ್ಯಾಕ್ಸಿಯೇ ಬೇಡ’ ಎಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳು ಈಗ ತಮ್ಮ ವರಸೆ ಬದಲಿಸಿವೆ.

author-image
Ganesh Kerekuli
bike ride
Advertisment

ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi) ವಿಚಾರ ಈಗ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಷ್ಟು ದಿನ ‘ಬೈಕ್ ಟ್ಯಾಕ್ಸಿಯೇ ಬೇಡ’ ಎಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಆಟೋ ಮತ್ತು ಟ್ಯಾಕ್ಸಿ ಸಂಘಟನೆಗಳು ಈಗ ತಮ್ಮ ವರಸೆ ಬದಲಿಸಿವೆ. ‘ಬೈಕ್ ಟ್ಯಾಕ್ಸಿ ಇರಲಿ, ಆದರೆ ನಮಗೆ ಇರುವಂತೆಯೇ ಅವರಿಗೂ ಕಠಿಣ ಕಾನೂನು ಮತ್ತು ನಿಯಮಗಳನ್ನು ರೂಪಿಸಿ’ ಎಂದು ಸರ್ಕಾರಕ್ಕೆ ಹೊಸ ಬೇಡಿಕೆಗಳನ್ನು ಮುಂದಿಟ್ಟಿವೆ.

ಏನಿದು ವಿವಾದ?

ರಾಜ್ಯ ಸಾರಿಗೆ ಇಲಾಖೆಯು ಈ ಹಿಂದೆ ಬೈಕ್ ಟ್ಯಾಕ್ಸಿಗಳಿಗೆ ನಿರ್ಬಂಧ ಹೇರಿತ್ತು. ಆದರೆ ಇದನ್ನು ಪ್ರಶ್ನಿಸಿ ಅಗ್ರಿಗೇಟರ್ ಕಂಪನಿಗಳು (Rapido, Uber ಇತ್ಯಾದಿ) ನ್ಯಾಯಾಲಯದ ಮೊರೆ ಹೋಗಿದ್ದವು. ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಸೂಕ್ತ ನಿಯಮಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.

ಇದನ್ನೂ ಓದಿ: ತನ್ನ ಸಚಿವರ ವಿರುದ್ಧವೇ ಸಿಎಂ ಅಸಮಾಧಾನ, ಖಡಕ್ ವಾರ್ನಿಂಗ್..!

Bike taxi

ಆಟೋ, ಟ್ಯಾಕ್ಸಿ ಸಂಘಟನೆಗಳ ಹೊಸ ಬೇಡಿಕೆಗಳೇನು?

ಬೈಕ್ ಟ್ಯಾಕ್ಸಿಗಳಿಗೆ ಕಾನೂನುಬದ್ಧ ಮಾನ್ಯತೆ ಸಿಗುತ್ತಿರುವುದನ್ನು ಅರಿತ ಆಟೋ ಮತ್ತು ಕ್ಯಾಬ್ ಚಾಲಕರ ಸಂಘಗಳು, ಅವುಗಳನ್ನು ನಿಯಂತ್ರಿಸಲು ಈ ಕೆಳಗಿನ ಕಠಿಣ ನಿಯಮಗಳನ್ನು ಜಾರಿಗೆ ತರಲು ಒತ್ತಾಯಿಸಿವೆ. 

ಯೆಲ್ಲೋ ಬೋರ್ಡ್ ಕಡ್ಡಾಯ: ವೈಟ್ ಬೋರ್ಡ್ (ಖಾಸಗಿ) ಬೈಕ್‌ಗಳಲ್ಲಿ ಟ್ಯಾಕ್ಸಿ ಸೇವೆ ನೀಡಲು ಅವಕಾಶ ನೀಡಬಾರದು. ಆಟೋಗಳಂತೆ ಇವುಗಳಿಗೂ ‘ಹಳದಿ ಬೋರ್ಡ್’ (Commercial Number Plate) ಕಡ್ಡಾಯ ಮಾಡಬೇಕು.

ಬೈಕ್ ಕಲರ್ ಕೋಡ್: ಆಟೋ ಮತ್ತು ಕ್ಯಾಬ್‌ಗಳನ್ನು ಗುರುತಿಸುವಂತೆ ಬೈಕ್ ಟ್ಯಾಕ್ಸಿಗಳಿಗೂ ಪ್ರತ್ಯೇಕ ಬಣ್ಣದ (Color Code) ನಿಯಮ ಇರಬೇಕು.

ಯೂನಿಫಾರಂ ಕಡ್ಡಾಯ: ಬೈಕ್ ಟ್ಯಾಕ್ಸಿ ಚಾಲಕರಿಗೂ ಸಮವಸ್ತ್ರ ಕಡ್ಡಾಯಗೊಳಿಸಬೇಕು.
ಫುಲ್ ಹೆಲ್ಮೆಟ್ ನಿಯಮ: ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಚಾಲಕ ಮತ್ತು ಸವಾರ ಇಬ್ಬರಿಗೂ ‘ಫುಲ್ ಹೆಲ್ಮೆಟ್’ ಕಡ್ಡಾಯ ಮಾಡಬೇಕು.

ವಾಣಿಜ್ಯ ತೆರಿಗೆ: ಇತರ ವಾಣಿಜ್ಯ ವಾಹನಗಳಂತೆ ಬೈಕ್ ಟ್ಯಾಕ್ಸಿ ಮಾಲೀಕರೂ ಸಹ ಕಮರ್ಷಿಯಲ್ ಟ್ಯಾಕ್ಸ್ ಪಾವತಿಸುವಂತಾಗಬೇಕು.

ಸರ್ಕಾರಕ್ಕೆ ಸವಾಲಾದ ‘ರೂಲ್ಸ್’ ರಚನೆ

ಕೋಟ್ ಅಂಗಳದಲ್ಲಿದ್ದ ಈ ಚೆಂಡು ಈಗ ಸರ್ಕಾರದ ಕೈಗೆ ಬಂದಿದೆ. ಒಂದೆಡೆ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಿದೆ. ಇನ್ನೊಂದೆಡೆ ಲಕ್ಷಾಂತರ ಆಟೋ ಮತ್ತು ಕ್ಯಾಬ್ ಚಾಲಕರ ಹಿತಾಸಕ್ತಿಯನ್ನು ಕಾಪಾಡಬೇಕಿದೆ. ಶಿಸ್ತುಬದ್ಧವಾಗಿ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸಲಿ ಎನ್ನುವ ಆಟೋ ಸಂಘಟನೆಗಳ ಈ ‘ಹೊಸ ರಾಗ’ಕ್ಕೆ ಸಾರಿಗೆ ಇಲಾಖೆ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ, ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಬೈಕ್ ಟ್ಯಾಕ್ಸಿಗಳು ಅಧಿಕೃತವಾಗಿ ಸಂಚರಿಸುವ ದಿನಗಳು ಹತ್ತಿರದಲ್ಲಿದ್ದರೂ, ಅವುಗಳಿಗೆ ಅನ್ವಯವಾಗುವ ನಿಯಮಗಳು ಎಷ್ಟು ಕಠಿಣವಾಗಿರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಅಲ್ಲ.. ಗೃಹಿಣಿಯರ ಕೈಸುಟ್ಟ ಎಣ್ಣೆ..! ಒಗ್ಗರಣೆ ಹಾಕುವ ಮುನ್ನ ಈ ಸ್ಟೋರಿ ಓದಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bike taxi
Advertisment