ಅಲೋಕ್ ಕುಮಾರ್ ಎಂಟ್ರಿ, ಅಧಿಕಾರಿಗಳ ಕಳ್ಳಾಟ ಬಯಲು.. ದರ್ಶನ್ ವಿಚಾರದಲ್ಲಿ ಮತ್ತೇನಾಯ್ತು..?

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡುವ ಹಂಬಲ ಇದೀಗ ಪೊಲೀಸರಿಗೇ ಮುಳುವಾಗಿದೆ. ನಿಯಮ ಮೀರಿ ದರ್ಶನ್ ಅವರನ್ನು ನೋಡಲು ಹೋದ ಯಲಹಂಕ ಮೂಲದ ಪೊಲೀಸ್ ಕಾನ್​ಸ್ಟೇಬಲ್ ಹಾಗೂ ಅವರಿಗೆ ಸಾಥ್ ನೀಡಿದ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಂಡಿದ್ದಾರೆ

author-image
Ganesh Kerekuli
Alok Kumar
Advertisment

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡುವ ಹಂಬಲ ಇದೀಗ ಪೊಲೀಸರಿಗೇ ಮುಳುವಾಗಿದೆ. ನಿಯಮ ಮೀರಿ ದರ್ಶನ್ ಅವರನ್ನು ನೋಡಲು ಹೋದ ಯಲಹಂಕ ಮೂಲದ ಪೊಲೀಸ್ ಕಾನ್​ಸ್ಟೇಬಲ್ ಹಾಗೂ ಅವರಿಗೆ ಸಾಥ್ ನೀಡಿದ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮ ಕೈಗೊಂಡಿದ್ದಾರೆ.

    ನಡೆದಿದ್ದೇನು?

    ಕಳೆದ ಜನವರಿ 24 ರಂದು ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಈ ವೇಳೆ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ವಾರ್ಡರ್ ಪ್ರಭಾಕರ್ ಚೌಹಾನ್ ಬಳಿ, "ನನಗೆ ನಟ ದರ್ಶನ್ ಅವರನ್ನು ನೋಡಬೇಕು, ತೋರಿಸಿ" ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಪ್ರಭಾಕರ್, ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಿ ರಹಸ್ಯವಾಗಿ ಪೇದೆಯನ್ನು ದರ್ಶನ್ ಇದ್ದ ಬ್ಯಾರಕ್‌ ಬಳಿ ಕರೆದೊಯ್ದಿದ್ದಾರೆ.

    ಅಲೋಕ್ ಕುಮಾರ್ ಎಂಟ್ರಿ - ಕಳ್ಳಾಟ ಬಯಲು!

    ಜನವರಿ 26 ರಂದು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, "ಯಾರೋ ಖಾಕಿ ಬಟ್ಟೆ ಹಾಕಿಕೊಂಡವರು ಬಂದು ನನ್ನನ್ನು ನೋಡಿ ಹೋದರು" ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಡಿಜಿಪಿ, ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಪೊಲೀಸರ ಈ ಕಳ್ಳಾಟ ಬಯಲಾಗಿದೆ.

    ಇದನ್ನೂ ಓದಿ: ಹೆಂಡತಿಯ ಒಡವೆ ಅಡ ಇಟ್ಟಿದ್ದೆ, ಕಾರು ಖರೀದಿಸಿ ವಾರವೂ ಆಗಿರಲಿಲ್ಲ -ಮಯೂರ್ ಪಾಟೀಲ್ ಅಪಘಾತದಲ್ಲಿ ಸಂತ್ರಸ್ತ ಕಣ್ಣೀರು..!

    ವಾರ್ಡನ್ ಚಾಮರಾಜನಗರಕ್ಕೆ ವರ್ಗಾವಣೆ

    ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪೇದೆಯ ಚಲನವಲನ ಹಾಗೂ ವಾರ್ಡರ್ ಪ್ರಭಾಕರ್ ಆತನಿಗೆ ಸಹಾಯ ಮಾಡುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿದ ಹಿನ್ನೆಲೆಯಲ್ಲಿ ವಾರ್ಡರ್ ಪ್ರಭಾಕರ್ ಚೌಹಾನ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಚಾಮರಾಜನಗರ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಅವರ ವಿರುದ್ಧ ಇಲಾಖಾ ತನಿಖೆಗೂ ಆದೇಶಿಸಲಾಗಿದೆ.

    ಪೇದೆ ವಿರುದ್ಧವೂ ಕ್ರಮಕ್ಕೆ ಸೂಚನೆ

    ಕೇವಲ ಜೈಲು ಸಿಬ್ಬಂದಿ ಮಾತ್ರವಲ್ಲದೆ, ಅನಧಿಕೃತವಾಗಿ ದರ್ಶನ್ ನೋಡಲು ಹೋದ ಯಲಹಂಕದ ಪೊಲೀಸ್ ಪೇದೆಯ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವಂತೆ ಈಶಾನ್ಯ ವಿಭಾಗದ ಡಿಸಿಪಿಗೆ ಅಲೋಕ್ ಕುಮಾರ್ ಅವರು ಖಡಕ್ ಸೂಚನೆ ನೀಡಿದ್ದಾರೆ. ಜೈಲಿನೊಳಗೆ ಎಷ್ಟೇ ದೊಡ್ಡ ಸೆಲೆಬ್ರಿಟಿ ಇದ್ದರೂ ನಿಯಮಗಳು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಡಿಜಿಪಿ ಅಲೋಕ್ ಕುಮಾರ್ ಈ ಕ್ರಮದ ಮೂಲಕ ರವಾನಿಸಿದ್ದಾರೆ. ಈ ಘಟನೆಯು ಪೊಲೀಸ್ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

    ಇದನ್ನೂ ಓದಿ: ಸರಣಿ ಅಪಘಾತ ಎಸಗಿದ ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್..!

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

    Actor Darshan Alok Kumar
    Advertisment