ಬೆಂಗಳೂರು: ಬಿಜೆಪಿ ಅವರಿಗೆ ಪ್ರಚಾರದ ಹುಚ್ಚು. ಏನೂ ಮಾಡದಿದ್ದರೂ ಎಲ್ಲವೂ ನಮ್ಮದೇ ಎಂದು ಬಿಂಬಿಸಿಕೊಳ್ತಾರೆ ಅಂತಾ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ನಾಳೆ ನಮ್ಮ ಮೆಟ್ರೋದ ‘ಯೆಲ್ಲೋ ಲೈನ್’ ಉದ್ಘಾಟನೆ ಆಗ್ತಿದೆ. ಪ್ರಧಾನಿ ಮೋದಿ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ಮೆಟ್ರೋ ವಿಚಾರದಲ್ಲಿ ಬಿಜೆಪಿ ನಾಯಕರ ಕೆಲವು ಹೇಳಿಕೆಗಳನ್ನು ರಾಮಲಿಂಗಾ ರೆಡ್ಡಿ ಖಂಡಿಸಿದರು. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು.. ನಾಳೆ ಮೆಟ್ರೋದ ಯೆಲ್ಲೋ ಲೈನ್ ಉದ್ಘಾಟನೆ ಆಗುತ್ತಿದೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಅದರ ಬಗ್ಗೆ ಮಾತನ್ನಾಡಿದ್ದಾರೆ. ಕೇಂದ್ರ ಸರ್ಕಾರವೇ ಯೋಜನೆಗೆ ಸಂಪೂರ್ಣ ಹಣ ಹಾಕಿದೆ ಎಂದಿದ್ದಾರೆ. ಹಳದಿ ಮಾರ್ಗದ ಮೆಟ್ರೋ ಯೋಜನೆ ತಡವಾಗಲು ಕಾಂಗ್ರೆಸ್ ಕಾರಣ ಅಂತಿದ್ದಾರೆ. ಆದರೆ ಬಿಜೆಪಿ ಅವರಿಗೆ ಇತಿಹಾಸವೇ ಸರಿಯಾಗಿ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾಳೆ ಬೆಂಗಳೂರಲ್ಲಿ ಪ್ರಧಾನಿ ಮೋದಿ.. ಮೆಟ್ರೋ, 3 ವಂದೇ ಭಾರತ್ ರೈಲು ಸೇರಿ ಏನೆಲ್ಲ ಉದ್ಘಾಟಿಸ್ತಾರೆ..?
ಒಂದೇ ಒಂದು ಮಾತು ಹೇಳಲ್ಲ
ಬಿಜೆಪಿ ಅವರಿಗೆ ಕೆಲಸ ಮಾಡದೇ ಇದ್ದರೂ ಪ್ರಚಾರದ ಹುಚ್ಚು. ಏನೂ ಮಾಡದೇ ಇದ್ದರೂ ಎಲ್ಲವೂ ನಮ್ಮದೇ ಅಂತಾ ಬಿಂಬಿಸಿಕೊಳ್ತಾರೆ. ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇಕಡಾ 30 ರಷ್ಟು ಜೊತೆಗೆ ಜಮೀನು ನೀಡಿದೆ. ಆದರೆ ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರ ಕೇವಲ ಶೇಕಡಾ 20 ರಷ್ಟು ಮಾತ್ರ ಹಣ ನೀಡಿದೆ. ಉಳಿದಿದ್ದನ್ನ ಮೆಟ್ರೋದವರು ಸಾಲ ತೆಗೆದುಕೊಂಡಿದ್ದಾರೆ. ಮೂರನೇ ಹಂತದಲ್ಲಿ ರಾಜ್ಯ ಸರ್ಕಾರ ಶೇಕಡಾ 30 ರಷ್ಟು ಹಣ ಮತ್ತು ಭೂಮಿ, ಪುನರ್ವಸತಿ ಕಲ್ಪಿಸಿದೆ. ಕೇಂದ್ರ ಸರ್ಕಾರ ಶೇಕಡಾ 20 ರಷ್ಟು ಮಾತ್ರ ಹಣ ನೀಡಿದೆ. ಉಳಿದ ಹಣವನ್ನು ಸಾಲ ಪಡೆದು ಮೆಟ್ರೋ ಕಾರ್ಯ ನಡೆಯುತ್ತಿದೆ. ಬಿಜೆಪಿಯವರು ಕೇಂದ್ರ ಸರ್ಕಾರಕ್ಕೆ ಕ್ರೆಡಿಟ್ ಕೊಡಲು ಹೋಗುತ್ತಾರೆ. ರಾಜ್ಯ ಸರ್ಕಾರ ಏನು ಮಾಡಿದೆ ಎಂದು ಒಂದೇ ಒಂದು ಮಾತು ಹೇಳೋದಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಡಬಲ್ ಡೆಕ್ಕರ್, ದೇಶದ ಅತೀ ಎತ್ತರದ ಮೆಟ್ರೋ ನಿಲ್ದಾಣ -ಹಳದಿ ಮಾರ್ಗದ ವಿಶೇಷತೆಗಳು ಏನೇನು..?
ಬಾವುಟ ಹಾರಿಸಲು ಮಾತ್ರ ಬರುತ್ತಾರೆ
ಮೆಟ್ರೋಗೆ ಸಂಬಂಧಿಸಿದಂತೆ ಎಲ್ಲದಕ್ಕೂ ಕೇಂದ್ರ ಸರ್ಕಾರದ ಅನುಮತಿ ನೀಡಬೇಕು. ಪ್ರತಿಯೊಂದಕ್ಕೂ ಅನುಮತಿ ಕೇಂದ್ರವೇ ನೀಡಬೇಕು. ಮೆಟ್ರೋ ಬೋಗಿಗಳು ಬೆಂಗಳೂರಿಗೆ ಬರಲು ತಡವಾಯಿತು. ಇದಕ್ಕೆ ರಾಜ್ಯ ಸರ್ಕಾರವಲ್ಲ, ಕೇಂದ್ರ ಸರ್ಕಾರವೇ ಅನುಮತಿ ನೀಡಬೇಕಲ್ಲವಾ? ಮೆಟ್ರೋ ತಡವಾಗಲು ರಾಜ್ಯ ಸರ್ಕಾರ ಹೇಗೆ ಕಾರಣವಾಗುತ್ತದೆ? ಕಳೆದ ಒಂದು ದಶಕದಿಂದಲೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಅವರದ್ದೇ ಸರ್ಕಾರ ಇರುವಾಗ ಯಾಕೆ ತಡವಾಯಿತು? ರಾಜ್ಯ ಸರ್ಕಾರದ ಜಮೀನು, ಹಣ, ಪುನರ್ವಸತಿ ವೆಚ್ಚ ಭರಿಸಿಲ್ಲವಾ? ಹದಿನಾರು ಸಾವಿರ ಕೋಟಿ ಕೊಟ್ಟು ಎಲ್ಲವೂ ನಮ್ಮದೇ ಅಂತಾ ಬಿಜೆಪಿಯವರು ಹೇಳುತ್ತಾರೆ. ಮೆಟ್ರೋ ಪಡೆದಿರುವ ಸಾಲವನ್ನ ರಾಜ್ಯ ಸರ್ಕಾರವೇ ತೀರಿಸಬೇಕಲ್ಲವಾ? ಮೆಟ್ರೋ ಕೆಲಸ ಎಲ್ಲವೂ ರಾಜ್ಯ ಸರ್ಕಾರದ ಪಾತ್ರ ದೊಡ್ಡದು. ಆದರೆ ಅವರು ಮಾತ್ರ ಬಾವುಟ ಹಾರಿಸಲು ಬರುತ್ತಾರೆ.
ಆಹ್ವಾನ ಇದೆ ಎಂದ ರಾಮಲಿಂಗಾ ರೆಡ್ಡಿ
ನಾಳೆ ನಡೆಯುವ ಕಾರ್ಯಕ್ರಮಕ್ಕೆ ಶಿಷ್ಟಾಚಾರದ ಪ್ರಕಾರ ಸಿಎಂ, ಡಿಸಿಎಂ ಎಲ್ಲರೂ ಭಾಗಿಯಾಗುತ್ತಾರೆ. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ನನಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುವ ಕಾರಣಕ್ಕೆ ಆಹ್ವಾನ ನೀಡಿದ್ದಾರೆ. ಅಶೋಕ್ ಪ್ರತಿಪಕ್ಷದ ನಾಯಕ, ಸಹಜವಾಗಿಯೇ ಆಹ್ವಾನ ಇರುತ್ತದೆ. ಆದರೆ ಅವರಿಗೆ ಆಹ್ವಾನ ನೀಡಿದ್ದಾರೋ ಇಲ್ಲವೋ ನನಗಂತೂ ನೀಡಿದ್ದಾರೆ. ಮಾಹಿತಿಗಳ ಪ್ರಕಾರ, ಆಹ್ವಾನ ಇದ್ದರೂ ರಾಮಲಿಂಗಾ ರೆಡ್ಡಿ ಅವರು ನಾಳಿನ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:KSRTC ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲಿದೆ ಗುಡ್ನ್ಯೂಸ್; ರಾಮಲಿಂಗಾ ರೆಡ್ಡಿಯಿಂದ ಹೊಸ ಅಪ್ಡೇಟ್..!
ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರದ ಶಿಫಾರಸು ವಿಚಾರದ ಬಗ್ಗೆ ಪ್ರತಿಕ್ರಿಯಿಸಿ.. ದರ ಏರಿಕೆಯ ಸಮಿತಿಯನ್ನು ಕೇಂದ್ರ ಸರ್ಕಾರ ಮಾಡುತ್ತದೆ. ನಿವೃತ್ತ ನ್ಯಾಯಾಧೀಶರು ಕಮಿಟಿಯಲ್ಲಿ ಇರ್ತಾರೆ. ಸಮಿತಿ ಶಿಫಾರಸು ಅನ್ವಯ ದರ ಏರಿಕೆ ಆಗಲಿದೆ. ದೆಹಲಿಯಲ್ಲಿ ಅನುಮೋದನೆ ಆದ್ಮೇಲೆಯೇ ಬೆಲೆ ಏರಿಕೆ ಆಗುತ್ತದೆ. ಕ್ರೆಡಿಟ್ ಬೇಕಾ ಅಂತ ಕೇಳ್ತೀರಾ? ಬಿಜೆಪಿಯವರಾ? ಕಾಂಗ್ರೆಸ್ ನವರಾ ಸುದ್ದಿಗೋಷ್ಠಿ ನಡೆಸ್ತಿರೋದು? ಪ್ರಚಾರ ತೆಗೆದುಕೊಳ್ತಿರೋದು ಯಾರು ಜನರಿಗೆ ಗೊತ್ತಾಗಬೇಕು ಅಲ್ವಾ? ನಾವು ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ಬಿಜಿಪಿ ನಾಯಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ 2ನೇ ಕೆಂಪೇಗೌಡ ಪ್ರತಿಮೆ ಮಾಡಿದ್ದೇ ನಾನು -ರಾಮಲಿಂಗಾ ರೆಡ್ಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ