/newsfirstlive-kannada/media/media_files/2025/09/17/cm-siddaramaiah-1-2025-09-17-18-10-03.jpg)
ಗೊಂದಲ.. ಗದ್ದಲ.. ಸರ್ವರ್​ ಸಮಸ್ಯೆ.. ವಿರೋಧದ ನಡುವೆಯೂ ಜಾತಿಗಳ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮೈಲೇಜ್​ ಪಡೆದುಕೊಳ್ತಿದೆ. ಆರಂಭದಲ್ಲಿ ಆಮೆ ನಡಿಗೆಯಲ್ಲಿ ಇದ್ದ ಸಮೀಕ್ಷೆಗೆ ಇದೀಗ ಹೈಕೋರ್ಟ್​ ಆದೇಶದಿಂದ ಬೂಸ್ಟ್​ ಸಿಕ್ಕಂತಾಗಿದೆ. ಜಾತಿ ಸಮೀಕ್ಷೆ ತಡೆ ನೀಡಲು ಹೈಕೋರ್ಟ್​ ನಿರಾಕರಿಸಿದ್ದು, ರಾಜ್ಯ ಸರ್ಕಾರಕ್ಕೆ ಕೊಂಚ ನಿರಾಳವಾಗಿದೆ.
ರಾಜ್ಯದಲ್ಲಿ ನಡೀತಿರೋ ಜಾತಿಗಣತಿ ಸರ್ವೆಯನ್ನ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆಯನ್ನ ನಡೆಸಿದ ಹೈಕೋರ್ಟ್, ಸಮೀಕ್ಷೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ. ಜೊತೆಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ಮಹತ್ವದ ಸೂಚನೆಗಳನ್ನೂ ನೀಡಿ, ಡಿಸೆಂಬರ್ 2ನೇ ವಾರಕ್ಕೆ ವಿಚಾರಣೆಯನ್ನ ಮುಂದೂಡಿದೆ.
ಹೈಕೋರ್ಟ್ ಸೂಚನೆಗಳೇನು?
ಸೂಚನೆ 1 - ಜಾತಿ ಗಣತಿ ದತ್ತಾಂಶದ ಗೌಪ್ಯತೆಯನ್ನ ರಕ್ಷಣೆ ಮಾಡಬೇಕು
ಸೂಚನೆ 2 - ಸರ್ಕಾರ ಸೇರಿ ಯಾರಿಗೂ ದತ್ತಾಂಶ ಬಹಿರಂಗಪಡಿಸಬಾರದು
ಸೂಚನೆ 3 - ಆಯೋಗ ಹೊರತುಪಡಿಸಿ ಯಾರಿಗೂ ದತ್ತಾಂಶ ಸಿಗುವಂತಿಲ್ಲ
ಸೂಚನೆ 4 - ಜನ ಸ್ವಯಂಪ್ರೇರಣೆಯಿಂದ ಮಾಹಿತಿ ಕೊಟ್ಟರಷ್ಟೇ ಪಡೀಬೇಕು
ಸೂಚನೆ 5 - ಮಾಹಿತಿ ನೀಡುವಂತೆ ಜನರಿಗೆ ಯಾವುದೇ ಒತ್ತಡ ಹಾಕಬಾರದು
ಸೂಚನೆ 6 - ಸಮೀಕ್ಷೆಯ ಬಗ್ಗೆ ಸಾರ್ವಜನಿಕರಿಗೆ ಅರಿವನ್ನ ಮೂಡಿಸಬೇಕು
ಸೂಚನೆ 7- ಕೋರ್ಟ್‌ಗೆ ದತ್ತಾಂಶದ ಗೌಪ್ಯತೆ ಸಂಬಂಧ ಪ್ರಮಾಣಪತ್ರ ಸಲ್ಲಿಸಿ
ಇಂದು ಸಿಎಂ ಸಿದ್ದರಾಮಯ್ಯ ಸಭೆ
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿ ನಾಲ್ಕು ದಿನವಾದ್ರೂ.. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಸಮೀಕ್ಷೆ ನಿಗದಿತ ಮಟ್ಟದಲ್ಲಿ ಸಾಗ್ತಿಲ್ಲ.. ಇದೀಗ ಹೈಕೋರ್ಟ್​ ಕೂಡ ಗ್ರೀನ್​ ಸಿಗ್ನಲ್​ ನೀಡಿರೋದ್ರಿಂದ ಸಮೀಕ್ಷೆಗೆ ವೇಗ ನೀಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಇಂದು ಬೆಳಗ್ಗೆ 11.30 ವಿಡಿಯೋ ಕಾನ್ಫರೆನ್ಸ್​ ಮೂಲಕ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಸಿಇಓಗಳ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಸಮೀಕ್ಷೆ ಕುರಿತು ಕೆಲವೊಂದು ನಿರ್ದೇಶನಗಳನ್ನು ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೆಲ್ಲದರ ನಡುವೆ ಜಾತಿ ಗಣತಿ ವಿಚಾರವಾಗಿ ರಾಜ್ಯದಲ್ಲಿ ಜಟಾಪಟಿ ತೀವ್ರಗೊಂಡಿದೆ. ಜಾತಿ ಗಣತಿಗೆ ಪ್ರಬಲ ಜಾತಿಗಳ ವಿರೋಧವೂ ಇದೆ. ಕಾಂಗ್ರೆಸ್​ ಪಕ್ಷದ ಹಿಂದುಳಿದ ವರ್ಗಗಳ ನಾಯಕರು ಕೂಡ ಸಭೆ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಹಾಗೂ ಸಮೀಕ್ಷೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ಬೆಂಬಲವಾಗಿ ನಿಲ್ಲಲು ಬಹುಮತದಿಂದ ನಿರ್ಧಾರ ಕೈಗೊಂಡಿದ್ದಾರೆ.
ಒಟ್ಟಾರೆ.. ಜಾತಿ ಗಣತಿಗಿದ್ದ ಕೆಲವೊಂದು ಅಡೆತಡೆಗಳು ನಿವಾರಣೆ ಆಗಿದ್ದು, ಸಮೀಕ್ಷೆಗೆ ವೇಗ ನೀಡಲು ಸರ್ಕಾರ ಮುಂದಾಗಿದೆ. ಇದರಿಂದ ನಿಗದಿತ ಸಮಯದೊಳಗೆ ಸಮೀಕ್ಷೆ ಕಂಪ್ಲೀಟ್​ ಆಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿ ಮತ್ತೆ ಸೆನ್ಸೇಷನ್.. ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಸಾಧನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.