/newsfirstlive-kannada/media/media_files/2026/01/23/dandupalya-2026-01-23-06-54-00.jpg)
ಮಂಗಳೂರು: ಸುಮಾರು ಮೂರು ದಶಕಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಹಂತಕನೊಬ್ಬನನ್ನು ಮಂಗಳೂರಿನ ಉರ್ವ ಠಾಣಾ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಪ್ರಕರಣ?
1997ರ ಅಕ್ಟೋಬರ್ 11 ರಂದು ಮಂಗಳೂರಿನ ಉರ್ವ ಮಾರಿಗುಡಿ ಕ್ರಾಸ್ ಬಳಿಯ 'ಅನ್ವರ್ ಮಹಲ್' ಎಂಬ ಮನೆಗೆ ನುಗ್ಗಿದ್ದ ದಂಡುಪಾಳ್ಯ ಗ್ಯಾಂಗ್, ಮನೆಯಲ್ಲಿದ್ದ ಲೂವಿಸ್ ಡಿಮೆಲ್ಲೋ (80) ಮತ್ತು ರಂಜಿತ್ ವೇಗಸ್ (19) ಎಂಬುವವರನ್ನು ಕ್ರೂರವಾಗಿ ಕೊಲೆ ಮಾಡಿತ್ತು. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದ ಗ್ಯಾಂಗ್ ಅಲ್ಲಿಂದ ಪರಾರಿಯಾಗಿತ್ತು.
29 ವರ್ಷಗಳ ವನವಾಸ ಅಂತ್ಯ
ಈ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಟು ಮಂದಿ ಸದಸ್ಯರ ಪೈಕಿ ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ ಎಂಬಾತ ಅಂದಿನಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ 2010ರಲ್ಲಿ ಮಂಗಳೂರಿನ JMFC 2ನೇ ನ್ಯಾಯಾಲಯವು ಎಲ್‌ಪಿಸಿ (LPC) ವಾರೆಂಟ್ ಹೊರಡಿಸಿತ್ತು.
ಹೆಸರು ಬದಲಿಸಿ ನಾಟಕ
ಬಂಧಿತ ಆರೋಪಿ ಚಿಕ್ಕ ಹನುಮಂತಪ್ಪ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆ. ಕೃಷ್ಣಪ್ಪ ಮತ್ತು ಕೃಷ್ಣ ಎಂಬ ಹೆಸರುಗಳನ್ನು ಇಟ್ಟುಕೊಂಡು ಗುರುತು ಬದಲಿಸಿದ್ದ. ಅಂತಿಮವಾಗಿ ಮಂಗಳೂರು ಪೊಲೀಸರ ವಿಶೇಷ ತಂಡ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆ ಎಂಬಲ್ಲಿ ಈತನನ್ನು ಪತ್ತೆ ಹಚ್ಚಿ ಬಂಧಿಸಿದೆ.
ಇದನ್ನೂ ಓದಿ: ಗಂಡನನ್ನು ಕೊಂದು ರಾತ್ರಿ ಇಡೀ ಸೆಕ್ಸ್ ವಿಡಿಯೋ ನೋಡಿದ ಪತ್ನಿ!! ಆರೋಪಿ ಪತ್ನಿ ಬಂಧನ
ಅಪರಾಧ ಲೋಕದ ಹಿನ್ನೆಲೆ
ಬಂಧಿತ ಆರೋಪಿಯ ವಿರುದ್ಧ ರಾಜ್ಯದ ವಿವಿಧೆಡೆ ಸುಮಾರು 13 ಕೊಲೆ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ಈ ಹಿಂದೆಯೇ ಈತನ ವಿರುದ್ಧದ ಹಲವು ಪ್ರಕರಣಗಳ ವಿಚಾರಣೆ ಮುಕ್ತಾಯಗೊಂಡು, ನ್ಯಾಯಾಲಯವು ಈತನನ್ನು ದೋಷಿ ಎಂದು ತೀರ್ಪು ನೀಡಿತ್ತು. ಆದರೂ ಈತ ಕಾನೂನಿನ ಕೈಗೆ ಸಿಗದೆ ಅಲೆದಾಡುತ್ತಿದ್ದ.
ಪೊಲೀಸ್ ತಂಡಕ್ಕೆ ಶ್ಲಾಘನೆ:
ಸುಮಾರು 29 ವರ್ಷಗಳ ಹಿಂದಿನ ಪ್ರಕರಣವನ್ನು ಬೆನ್ನಟ್ಟಿ, ಆರೋಪಿಯನ್ನು ಬಂಧಿಸಿದ ಉರ್ವ ಪೊಲೀಸ್ ತಂಡದ ಕಾರ್ಯವೈಖರಿಯನ್ನು ಮಂಗಳೂರು ಪೊಲೀಸ್ ಕಮೀಷನರ್ ಶ್ಲಾಘಿಸಿದ್ದಾರೆ. ಅಲ್ಲದೆ, ಈ ತಂಡಕ್ಕೆ ವಿಶೇಷ ಬಹುಮಾನ ನೀಡುವಂತೆ ರಾಜ್ಯ ಡಿಜಿ ಮತ್ತು ಐಜಿಪಿಯವರಿಗೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದಾರೆ. ಈ ಕಾರ್ಯಾಚರಣೆಯು ಹಳೆಯ ಪ್ರಕರಣಗಳ ಬೆನ್ನತ್ತಿರುವ ಪೊಲೀಸರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.
ಇದನ್ನೂ ಓದಿ:ಬಿಸಿಸಿಐ ಮಾಸ್ಟರ್ ಪ್ಲಾನ್.. ಕೊಹ್ಲಿ, ರೋಹಿತ್​ಗೆ ಕಾದಿದೆ ಬಿಗ್ ಶಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us