/newsfirstlive-kannada/media/media_files/2025/08/31/kalaburagi-case-2025-08-31-15-58-21.jpg)
ಕಲಬುರಗಿ ತಾಲ್ಲೂಕಿನ ಸೀತನೂರು ಗ್ರಾಮದ ನಿವಾಸಿ ಶಿವರಾಯ್ ಮಾಲೀ ಪಾಟೀಲ್ (68). ಮಾಲೀ ಪಾಟೀಲ್ ಕೃಷಿ ಚಟುವಟಿಕೆ ಮಾಡಿಕೊಂಡಿದ್ದರು. 2008ರಲ್ಲಿ ಗ್ರಾಮದ ನಾಗೇಂದ್ರ ಎಂಬಾತನ ಬರ್ಬರ ಹತ್ಯೆ ನಡೆದಿತ್ತು. ನಾಗೇಂದ್ರ ಕೊಲೆ ಪ್ರಕರಣದಲ್ಲಿ ಶಿವರಾಯ್ ಮಾಲೀ ಪಾಟೀಲ್ ಪ್ರಮುಖ ಆರೋಪಿಯಾಗಿದ್ದ. ಶಿವರಾಯ್ ಪ್ರಕರಣದಲ್ಲಿ ಖುಲಾಸೆಗೊಂಡ ಬಳಿಕ ನಾಗೇಂದ್ರನ ಪುತ್ರ ಹೊಂಚು ಹಾಕಿದ್ದ. ತಂದೆಯ ಕೊ*ಲೆಗೆ ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ಪ್ರತಿಜ್ಞೆ ಮಾಡಿದ್ದ. 17 ವರ್ಷಗಳ ಬಳಿಕ ಪ್ರತೀಕಾರ ತೀರಿಸಿಕೊಂಡಿದ್ದಾನೆ.
ಬೆಳ್ಳಂಬೆಳಗ್ಗೆ ಹರಿದ ನೆತ್ತರು
ಇಂದು ಬೆಳಗ್ಗೆ 8 ಗಂಟೆಗೆ ಶಿವರಾಯ್ ಮಾಲೀ ಪಾಟೀಲ್ ಜಮೀನಿನಿಂದ ಮನೆಗೆ ಬರುತ್ತಿರುವಾಗ ನಾಗೇಂದ್ರನ ಪುತ್ರ ಲಕ್ಷ್ಮಿಕಾಂತ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈಯ್ದಿದ್ದಾನೆ.
ಹಿನ್ನೆಲೆ ಏನು..?
2008ರಲ್ಲಿ ನಾಗೇಂದ್ರನ ಹತ್ಯೆಗೆ ಪ್ರಮುಖ ಕಾರಣ ಹುಡುಕುತ್ತ ಹೋದರೆ ಬೆಚ್ಚಿಬೀಳಿಸುವ ವಿಚಾರ ಬಯಲಾಗಿದೆ. ಕೊಲೆಯಾದ ನಾಗೇಂದ್ರನ ಅತ್ತಿಗೆ ಜೊತೆ ಶಿವರಾಯ್ ಮಾಲೀ ಪಾಟೀಲ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನಂತೆ. ಅದ್ಯಾವಾಗ ನಾಗೇಂದ್ರನ ಕಿವಿಗೆ ಬಿದ್ದಾಗ ಅತ್ತಿಗೆ ಮತ್ತು ಶಿವರಾಯ್ ಮಾಲೀ ಪಾಟೀಲ್‌ಗೆ ಬುದ್ಧಿ ಹೇಳಿದ್ದಾನೆ. ಆದರೂ ಕಳ್ಳಾಟಕ್ಕೆ ಬ್ರೇಕ್ ಬಿದ್ದಿರಲಿಲ್ಲ.
ಇದನ್ನೂ ಓದಿ:ವಾಸಂತಿ ಸಾವಿನ ಸುತ್ತ ಪ್ರಶ್ನೆಗಳ ಹುತ್ತ..! ಅನುಮಾನಗಳು ಏನೇನು..?
ನಾಗೇಂದ್ರ ಪದೇ ಪದೆ ಅಡ್ಡಿ ಆಗ್ತಿರೋದಕ್ಕೆ ಮಾಲೀ ಪಾಟೀಲ್ ರೊಚ್ಚಿಗೆದ್ದು ಹ*ತ್ಯೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಫರಹತಾಬಾದ್ ಠಾಣೆ ಪೊಲೀಸರು ಶಿವರಾಯ್ ಸೇರಿದಂತೆ ಇನ್ನಿಬ್ಬರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಕೆಲ ದಿನಗಳ ನಂತರ ಸೂಕ್ತ ಸಾಕ್ಷಿಗಳಿಲ್ಲದ ಕಾರಣ ಶಿವರಾಯ್ ಮಾಲೀ ಪಾಟೀಲ್ನನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ಜೈಲಿನಿಂದ ಹೊರ ಬರ್ತಿದ್ದಂತೆಯೇ ನಾಗೇಂದ್ರನ ಪುತ್ರ ಲಕ್ಷ್ಮಿಕಾಂತ್, ಶಿವರಾಯ್ ಮಾಲೀಪಾಟೀಲ್ ವಿರುದ್ಧ ಕತ್ತಿ ಮಸಿಯಲು ಶುರುಮಾಡಿದ್ದ.
ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ನೆತ್ತರು ಹರಿದಿದ್ದನ್ನ ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರು ಸೇರಿದಂತೆ ಫಿಂಗರ್ ಪ್ರೀಂಟ್ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಲಕ್ಷ್ಮಿಕಾಂತ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳ ಕೇಸ್; ಬುರುಡೆ ಇಟ್ಕೊಂಡು ಸುಪ್ರೀಂಗೆ ಹೋಗಿದ್ದ ಫೋಟೋ ರಿವೀಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ