/newsfirstlive-kannada/media/media_files/2025/09/21/mysore-dasara-2025-09-21-11-02-58.jpg)
ಪರ - ವಿರೋಧ, ಚರ್ಚೆ- ವಿವಾದಗಳ ನಡುವೆ ಕೊನೆಗೂ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಕೌಂಟ್​ಡೌನ್​ ಶುರುವಾಗಿದೆ. ನಾಡಹಬ್ಬದ ಉದ್ಘಾಟನೆಗೆ ಭಾನು ಮುಷ್ತಾಕ್ ಸನ್ನದ್ಧರಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಸರ್ವ ರೀತಿಯಲ್ಲೂ ವ್ಯವಸ್ಥೆ ಆಗಿದೆ. ಇನ್ನು ಅರಮನೆಯಲ್ಲೂ ಗತಕಾಲದ ರಾಜವೈಭವ ಮರುಕಳಿಸಿದೆ.
ಮೈಸೂರು ದಸರಾ.. ಎಷ್ಟೊಂದು ಸುಂದರ ಎನ್ನುವಂತೆ.. ವರ್ಷದಿಂದ ವರ್ಷಕ್ಕೆ ದಸರೆಯ ಸಂಭ್ರಮ ಮತ್ತಷ್ಟು ಕಳೆಗಟ್ಟುತ್ತಿದೆ. ವಿಶ್ವವೇ ಬೆರಗುಗಣ್ಣಿನಿಂದ ನೋಡುವ ಜಂಬೂ ಸವಾರಿಗೆ ದಿನಗಣನೆ ಶುರುವಾಗಿದ್ದು, ಇಂದಿನಿಂದ ನಾಡಹಬ್ಬದ ವೈಭವ ಶುರುವಾಗಲಿದೆ. ಇದ್ದಕ್ಕಾಗಿ ಅರಮನೆ ನಗರಿ ಮೈಸೂರು ವಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಇಂದು ದಸರಾ ಮಹೋತ್ಸವಕ್ಕೆ ಚಾಲನೆ
ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಅಧಿಕೃತವಾಗಿ ಚಾಲನೆ ಸಿಗಲಿದೆ. ಹೀಗಾಗಿ ಚಾಮುಂಡಿ ಬೆಟ್ಟದಲ್ಲಿ ದಸರಾಗೆ ಸಿದ್ಧತಾ ಕಾರ್ಯಗಳು ಆರಂಭವಾಗಿವೆ. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ಅರ್ಚಕರು ಶುಚಿಗೊಳಿಸಿ, ದೇವಿಗೆ ಹಸಿರು ಸೀರೆಯನ್ನ ಉಡಿಸಿ ಹಂಸವಾಹಿನಿ ಅಲಂಕಾರ ಮಾಡಿ ಪುಷ್ಪಾರ್ಚನೆಗೆ ಸಿದ್ಧ ಮಾಡಿದ್ದಾರೆ. ಬೆಳ್ಳಿರಥಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ವೇದಿಕೆಗೆ ತಂದು 10 ಗಂಟೆ 40 ನಿಮಿಷ ವೃಶ್ಚಿಕ ಶುಭಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಲಿದೆ.
ಇದನ್ನೂ ಓದಿ:GST 2.0 ದೇಶದಾದ್ಯಂತ ಜಾರಿ.. ಯಾವ ವಸ್ತುವಿನಿಂದ ಎಷ್ಟು ರೂಪಾಯಿ ಉಳಿತಾಯ ಆಗಲಿದೆ..?
ಸಾಹಿತಿ ಭಾನುಮುಷ್ತಾಕ್ ಅವರು ದಸರಾ ಮಹೋತ್ಸವನ್ನು ಉದ್ಧಾಟಿಸಲಿದ್ದು, ಇದಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಬೃಹತ್​ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಳೆ ಬರುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜರ್ಮನ್ ಟೆಂಟ್ ಹಾಕಲಾಗಿದ್ದು 1 ಸಾವಿರ ಆಸನದ ವ್ಯವಸ್ಥೆಯನ್ನ ಮಾಡಿದೆ. ಆಹ್ವಾನಿತರಿಗೆ ಮಾತ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವಕಾಶ ಇದ್ದು. ವೇದಿಕೆ ಸುತ್ತ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ. ದಸರಾ ಉದ್ಘಾಟನೆ ಮುಗಿಯುವವರೆಗೂ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ:ಇಂದು ಕಾಂತಾರ ಪ್ರೀಕ್ವೆಲ್ ಮೂವಿ ಟ್ರೈಲರ್​ ಬಿಡುಗಡೆ.. ಸ್ಪೆಷಲ್ ಏನು ಗೊತ್ತಾ..?
ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ರೆ.. ಇತ್ತ ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್‌ಗೆ ಸಿದ್ಧತೆ ಭರದಿಂದ ಸಾಗಿದೆ. ರತ್ನ ಖಚಿತ ಸಿಂಹಾಸನವೇರಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಮಾಡಲಿದ್ದಾರೆ.
ಖಾಸಗಿ ದರ್ಬಾರ್!
ಬೆಳಗ್ಗೆ 5.30ರಿಂದ 5.45ರ ಶುಭ ಘಳಿಗೆಯಲ್ಲಿ ಸಿಂಹಾಸನಕ್ಕೆ ಸಿಂಹದ ಮುಖ ಜೋಡಣೆ ಮಾಡಲಾಗಿದೆ. ಇನ್ನು ಬೆಳಗ್ಗೆ 9.55-10.15ರೊಳಗೆ ಚಾಮುಂಡಿ ತೊಟ್ಟಿಯಲ್ಲಿ ಕಂಕಣಧಾರಣೆ ನಡೆಯಲಿದೆ. ಯದುವೀರ್​ ಒಡೆಯರ್​ಗೆ ತ್ರಿಷಿಕಾ ಕುಮಾರಿ ಒಡೆಯರ್ ಕಂಕಣ ಧಾರಣೆ ಮಾಡಲಿದ್ದಾರೆ. ಬಳಿಕ ಬೆಳಗ್ಗೆ 11: 35ಕ್ಕೆ ಅರಮನೆ ಆವರಣರಲ್ಲಿರುವ ಕೊಡಿ ಸೋಮೇಶ್ವರ ದೇವಸ್ಥಾನದ ಬಳಿ ಪಟ್ಟದ ಆನೆ, ಕುದುರೆ, ಹಸುಗಳಿಗೆ ಯದುವೀರ್ ಒಡೆಯರ್‌ರಿಂದ ಪೂಜೆ ಸಲ್ಲಿಸಲಿದ್ದಾರೆ. ಇದಾದ ನಂತರ. ಮಧ್ಯಾಹ್ನ 12.42ರಿಂದ12.58ರವರೆಗೆ ರತ್ನ ಖಚಿತ ಸಿಂಹಾಸನವನ್ನು ಅಲಂಕರಿಸಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ದಸರಾ ಪೂರ್ವತಯಾರಿಯ ವಿಡಿಯೋ ಹಂಚಿಕೊಂಡ ಸಿಎಂ
ಇಂದಿನಿಂದ ನಾಡಹಬ್ಬ ದಸರಾ ಶುರುವಾಗ್ತಿದ್ದು, ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯನವರು, ದಸರಾದ ಪೂರ್ವತಯಾರಿಗಳ ಕುರಿತು ಮೈಸೂರಿನ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ನೋಡಿ, ಅನಿಸಿಕೆ ಹಂಚಿಕೊಳ್ಳಿ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಜಯಭೇರಿ.. ಪಾಕ್​ಗೆ ಮತ್ತೆ ಮುಖಭಂಗ, ತಲೆ ತಗ್ಗಿಸಿದ ಬದ್ಧ ವೈರಿ..!
ಈ ಬಾರಿಯ ದಸರಾಗೆ ಅರಮನೆ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡು ನಿಂತಿದೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೀದಿಗಳು, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ನೋಡುಗರಿಗೆ ಉಣಬಡಿಸಲು ಎದುರುನೋಡುತ್ತಿರುವ ವೇದಿಕೆಗಳು, ತಳಿರು ತೋರಣಗಳಿಂದ ಸಿಂಗಾರಗೊಂಡ ಮೈಸೂರು ಅರಮನೆ ಹೀಗೆ ಇಡೀ ನಗರವೇ ಹೊಸರೂಪ ಪಡೆದು ಕಂಗೊಳಿಸುತ್ತಿದೆ.
— Siddaramaiah (@siddaramaiah) September 21, 2025
ಮೈಸೂರು ದಸರಾದ… pic.twitter.com/yAh2Sr5JJH
ಒಟ್ಟಾರೆ.. ದಸರಾ ಅಂದ್ರೆ ಬರೀ ಹಬ್ಬವಲ್ಲ ಅದು ನಾಡಿನ ಜನರ ಸಾಂಸ್ಕೃತಿಕ, ಧಾರ್ಮಿಕ ಆಚರಣೆ.. ನಾಡಿನ ಹಿರಿಮೆಗೊಂದು ಗರಿಮೆ. ಇಂದಿನಿಂದ ಸಾಂಸ್ಕೃತಿಕ ನಗರಿಯಲ್ಲಿ ದಸರಾದ ಗತವೈಭವ ಮೇಳೈಸಲಿದ್ದು, ಅರಮನೆ ನಗರಿ, ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ವಿಶೇಷ ವರದಿ: ರವಿ ಪಾಂಡವಪುರ, ನ್ಯೂಸ್‌ಫಸ್ಟ್, ಮೈಸೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ