ಮೈಸೂರು ದಸರಾ ವಜ್ರಮುಷ್ಠಿ ಕಾಳಗದ ರೂವಾರಿ, ಟೈಗರ್ ಬಾಲಾಜಿ ನಿಧನ

ಸಾಂಸ್ಕೃತಿಕ ನಗರಿ ಮೈಸೂರಿನ ಕುಸ್ತಿ ಲೋಕದ ದಿಗ್ಗಜ, ಹೆಸರಾಂತ ಪೈಲ್ವಾನ್ ‘ಟೈಗರ್ ಬಾಲಾಜಿ’ (67) ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

author-image
Ganesh Kerekuli
mysore tiger balaji
Advertisment

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಕುಸ್ತಿ ಲೋಕದ ದಿಗ್ಗಜ, ಹೆಸರಾಂತ ಪೈಲ್ವಾನ್ ‘ಟೈಗರ್ ಬಾಲಾಜಿ’ (67) ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

350ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳ ವೀರ

ಟೈಗರ್ ಬಾಲಾಜಿ ಅವರು ಕುಸ್ತಿ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ದೇಶದ ವಿವಿಧ ಭಾಗಗಳಲ್ಲಿ ನಡೆದ ಸುಮಾರು 350ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ, ಅನೇಕ ಪ್ರಶಸ್ತಿ ಹಾಗೂ ಗೌರವಗಳನ್ನು ಮುಡಿಗೇರಿಸಿಕೊಂಡಿದ್ದರು. ಅವರ ಪಟ್ಟುಗಳು ಮತ್ತು ಕುಸ್ತಿ ಕಣದಲ್ಲಿನ ವೇಗಕ್ಕಾಗಿ ಅವರು 'ಟೈಗರ್' ಎಂದೇ ಖ್ಯಾತಿ ಪಡೆದಿದ್ದರು.

ಇದನ್ನೂ ಓದಿ:ಮೂರು ಮದುವೆಯಾಗಿ ಲಕ್ಷ ಲಕ್ಷ ಲೂಟಿ.. ಕಿಲಾಡಿ ಲೇಡಿ ಸುಳ್ಳಿನ ಕತೆಗಳೇ ಅತ್ಯದ್ಭುತ..!

ದಸರಾ ವಜ್ರಮುಷ್ಠಿ ಕಾಳಗದ ರೂವಾರಿ

ನಾಡಹಬ್ಬ ಮೈಸೂರು ದಸರಾದ ಅತ್ಯಂತ ಪುರಾತನ ಹಾಗೂ ಸಾಹಸಮಯ ಸಂಪ್ರದಾಯವಾದ 'ವಜ್ರಮುಷ್ಠಿ ಕಾಳಗ'ಕ್ಕೆ ಟೈಗರ್ ಬಾಲಾಜಿ ಅವರ ಕೊಡುಗೆ ಅನನ್ಯ. ದಸರಾ ಸಂದರ್ಭದಲ್ಲಿ ಅರಮನೆಯ ಮುಂಭಾಗ ನಡೆಯುವ ಈ ವಿಶೇಷ ಕಾಳಗಕ್ಕಾಗಿ ಪೈಲ್ವಾನರನ್ನು ತಯಾರು ಮಾಡುವ ಜವಾಬ್ದಾರಿಯನ್ನು ಅವರು ದಶಕಗಳಿಂದ ನಿಭಾಯಿಸುತ್ತಿದ್ದರು. ಜಟ್ಟಿಗಳಿಗೆ ತರಬೇತಿ ನೀಡಿ, ಈ ಪಾರಂಪರಿಕ ಕಲೆ ಜೀವಂತವಾಗಿರುವಂತೆ ನೋಡಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಅನಾರೋಗ್ಯದಿಂದ ಸಾವು

ವಯೋಸಹಜ ಕಾಯಿಲೆ ಹಾಗೂ ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಾಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಟೈಗರ್ ಬಾಲಾಜಿ ಅವರ ನಿಧನಕ್ಕೆ ಮೈಸೂರಿನ ಕುಸ್ತಿ ಅಭಿಮಾನಿಗಳು, ಕ್ರೀಡಾಪಟುಗಳು ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ನಿಧನದಿಂದ ಮೈಸೂರಿನ ಪಾರಂಪರಿಕ ಕುಸ್ತಿ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆ ಮೇಲೆ ಸಾಕು ನಾಯಿ ರಣ ಭೀಕರ ದಾಳಿ; ಮುಖ, ಕುತ್ತಿಗೆಗೆ ಬರೋಬ್ಬರಿ 20 ಹೊಲಿಗೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mysore news tiger balaji
Advertisment