/newsfirstlive-kannada/media/media_files/2026/02/08/raichuru-helicaptor-2026-02-08-16-26-19.jpg)
ರಾಯಚೂರು: ವಿಧಾನ ಪರಿಷತ್ ಸದಸ್ಯರೊಬ್ಬರ ಮಗನ ಮದುವೆಗೆ ಆಗಮಿಸಿದ್ದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಭಾರಿ ಗೊಂದಲ ಸೃಷ್ಟಿಯಾದ ಘಟನೆ ಲಿಂಗಸುಗೂರಿನಲ್ಲಿ ನಡೆದಿದೆ.
ಏನಿದು ಘಟನೆ?
ಎಂಎಲ್‌ಸಿ ಶರಣಗೌಡ ಬಯ್ಯಾಪೂರ ಅವರ ಪುತ್ರನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರ ದಂಡೇ ಲಿಂಗಸುಗೂರಿಗೆ ಆಗಮಿಸಿತ್ತು. ಇದಕ್ಕಾಗಿ ಲಿಂಗಸುಗೂರಿನ ಹೊರವಲಯದ ರಾಯಚೂರು ರಸ್ತೆಯ ಖಾಸಗಿ ಲೇಔಟ್ ಬಳಿ ಸಿಎಂ ಹಾಗೂ ಡಿಸಿಎಂ ಅವರಿಗಾಗಿ ಪ್ರತ್ಯೇಕವಾಗಿ ಎರಡು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿತ್ತು.
ಅಧಿಕಾರಿಗಳಿಗೆ ಕಾದಿತ್ತು ಶಾಕ್
ಜಿಲ್ಲಾಡಳಿತದ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯನವರನ್ನು ಸ್ವಾಗತಿಸಲು ರಾಯಚೂರು ರಸ್ತೆಯ ಹೆಲಿಪ್ಯಾಡ್‌ನಲ್ಲಿ ಹೂಗುಚ್ಛ ಹಿಡಿದು ಕಾದು ನಿಂತಿದ್ದರು. ಆದರೆ, ಸಿಎಂಗೆ ಮೀಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಲಿಕಾಪ್ಟರ್ ಬಂದು ಇಳಿದಿದೆ. ಇದರಿಂದ ಅಧಿಕಾರಿಗಳು ಒಂದು ಕ್ಷಣ ಕಸಿವಿಸಿಗೊಂಡರು.
ಇದನ್ನೂ ಓದಿ: ‘ಪ್ರಾಮಾಣಿಕತೆ ಇನ್ನೂ ಸತ್ತಿಲ್ಲ’; ಮರಳಿ ಕೈಸೇರಿದ 10 ಲಕ್ಷದ ಚಿನ್ನಾಭರಣ.. BMTC ಕಂಡಕ್ಟರ್ ದೊಡ್ಡ ಗುಣಕ್ಕೆ ಕಣ್ಣೀರು..!
ಸಿಎಂ ಇಳಿದಿದ್ದು ಎಲ್ಲಿ?
ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಸಿಎಂ ಹೆಲಿಕಾಪ್ಟರ್ ದಾರಿ ತಪ್ಪಿದಂತಾಗಿ, ಕಲಬುರ್ಗಿ ರಸ್ತೆಯಲ್ಲಿರುವ ಶಾಸಕ ಮಾನಪ್ಪ ವಜ್ಜಲ್‌ಗೆ ಸೇರಿದ ಖಾಸಗಿ ಹೆಲಿಪ್ಯಾಡ್‌ನಲ್ಲಿ ಹೋಗಿ ಇಳಿಯಿತು. ವಿಷಯ ತಿಳಿಯುತ್ತಿದ್ದಂತೆಯೇ ಕಕ್ಕಾಬಿಕ್ಕಿಯಾದ ಅಧಿಕಾರಿಗಳು, ತರಾತುರಿಯಲ್ಲಿ ಸಿಎಂ ಇದ್ದ ಸ್ಥಳಕ್ಕೆ ಓಡೋಡಿ ಹೋದ ಪ್ರಸಂಗ ನಡೆಯಿತು.
ಪ್ರತ್ಯೇಕವಾಗಿ ಬಂದ ಡಿಸಿಎಂ
ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಿಗದಿತ ಸಮಯಕ್ಕಿಂತ ಮೊದಲೇ ಬಂದು ಮದುವೆ ಸಮಾರಂಭದಲ್ಲಿ ಭಾಗವಹಿಸಿದರು. ಸಿಎಂ ಬರುವುದಕ್ಕೂ ಮುನ್ನವೇ ಅವರು ಕಾರ್ಯಕ್ರಮ ಮುಗಿಸಿ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದರು. ಒಂದೇ ಮದುವೆಗೆ ಸಿಎಂ ಮತ್ತು ಡಿಸಿಎಂ ಆಗಮಿಸಿದರೂ, ಇಬ್ಬರೂ ಪ್ರತ್ಯೇಕವಾಗಿ ಭಾಗವಹಿಸಿದ್ದು ಮತ್ತು ಆಗಮನದ ಸಮಯದಲ್ಲಿ ವ್ಯತ್ಯಾಸವಿದ್ದುದು ಎದ್ದು ಕಾಣುತ್ತಿತ್ತು.
ಒಟ್ಟಿನಲ್ಲಿ ಅಧಿಕಾರಿಗಳ ಅಸಮರ್ಪಕ ನಿರ್ವಹಣೆ ಮತ್ತು ಸಂವಹನ ಕೊರತೆಯಿಂದಾಗಿ ಲಿಂಗಸುಗೂರಿನಲ್ಲಿ ವಿವಿಐಪಿಗಳ ಆಗಮನದ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಚಂದದ ಕುಟುಂಬ ಹಾಳು ಮಾಡಲು ಬಂದಳಾ ಪ್ರಿಯಾ..? ನಂದಗೋಕುಲ ವೀಕ್ಷಕರಲ್ಲಿ ಕಾಡಿದ ಆತಂಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us