/newsfirstlive-kannada/media/media_files/2025/08/04/supreme-court-2025-08-04-13-18-14.jpg)
ಕಾವೇರಿ ವಿಚಾರದಲ್ಲಿ ಸದಾ ಕಾಲು ಕೆರೆದುಕೊಂಡು ಕರುನಾಡಿನ ಜೊತೆ ಕಿರಿಕ್​​ ತೆಗೆಯುವ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂಕೋರ್ಟ್​ನಲ್ಲಿ ಭಾರೀ ಮುಖಭಂಗವಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್​ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಇದರಿಂದ ರಾಜ್ಯದ ಯೋಜನೆಗೆ ಎದುರಾಗಿದ್ದ ಆರಂಭಿಕ ಸವಾಲು ನಿವಾರಣೆ ಆಗಿದೆ.
ಕಾವೇರಿ ಕನ್ನಡ ನಾಡಿನ ಜೀವನದಿ.. ಹಳೇಮೈಸೂರು ಭಾಗದ ಜೀವನಾಡಿ.. ಪ್ರತಿ ಮಳೆಗಾಲದಲ್ಲೂ ಅಪಾರ ಪ್ರಮಾಣದ ಕಾವೇರಿ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗ್ತಿತ್ತು. ಹೀಗಾಗಿ ಹೆಚ್ಚುವರಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲು ಯೋಜನೆ ರೂಪಿಸಿ.. ಡಿಪಿಆರ್​​​ ಅನ್ನು ಸಿದ್ಧ ಪಡಿಸಿತ್ತು. ಇದರ ಬೆನ್ನಲ್ಲೇ ಕಾವೇರಿ ವಿಚಾರದಲ್ಲಿ ಸದಾ ಕಾಲು ಕರೆದುಕೊಂಡು ಕ್ಯಾತೆ ತೆಗೆಯುವ ತಮಿಳುನಾಡು.. ಮೇಕೆದಾಟು ವಿಚಾರಕ್ಕೂ ಅಡ್ಡಗಾಲು ಹಾಕಿತ್ತು. ಹಾಗೂ ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್​​ ಮೆಟ್ಟಿಲೇರಿತ್ತು. ಆದ್ರೀಗ ತಮಿಳುನಾಡು ಸರ್ಕಾರಕ್ಕೆ ಸುಪ್ರಿಂಕೋರ್ಟ್​ನಲ್ಲಿ ಭಾರೀ ಮುಖಭಂಗವಾಗಿದೆ. ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ವಜಾಗೊಳಿಸಿದ್ದು, ಇದರಿಂದ ಕರ್ನಾಟಕಕ್ಕೆ ದೊಡ್ಡ ಗೆಲುವು ಸಿಕ್ಕಿದೆ.
ಇದನ್ನೂ ಓದಿ: ಕಬ್ಬಿಗೆ 3500 ರೂ. ಬೆಂಬಲ ಬೆಲೆ ಕೊಡಲೇಬೇಕು.. ಸರ್ಕಾರದ ವಿರುದ್ಧ ಪಟ್ಟು ಬಿಡದೆ ರೈತರ ಹೋರಾಟ
ಕರ್ನಾಟಕ ಮತ್ತು ತಮಿಳುನಾಡು ನಡುವೆ ಮೇಕೆದಾಟು ಯೋಜನೆ ವಿವಾದದಲ್ಲಿ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನಾ ವರದಿಯನ್ನು ಪ್ರಶ್ನಿಸಿ ತಮಿಳುನಾಡು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.. ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇದರ ವಿಚಾರಣೆ ನಡೆಸಿದ್ದು. ತಮಿಳುನಾಡಿನ ಮನವಿ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ತಿರಸ್ಕಾರ ಮಾಡಿದೆ.
- ಯೋಜನೆ ವಿರುದ್ಧದ ಅರ್ಜಿಯು ಅವಧಿಗೆ ಮುನ್ನವೇ ಸಲ್ಲಿಕೆ
- ಸದ್ಯ ಪ್ರಸ್ತಾವನೆಯು ತಜ್ಞ ಸಂಸ್ಥೆಗಳ ಪರಿಶೀಲನಾ ಹಂತದಲ್ಲಿದೆ
- ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೇರಿದಂತೆ
- ಹಲವಾರು ಸಮಿತಿಗಳು ಇದರ ಬಗ್ಗೆ ಚರ್ಚೆ ನಡೆಸುತ್ತಿವೆ
- ಅನುಮೋದನೆಗಳು ನ್ಯಾಯಾಂಗದಿಂದ ಬರಬೇಕಿರುವುದು ಅಲ್ಲ
- ಅನುಮೋದನೆಗಳು ಕಾವೇರಿ ನೀರು ನಿಯಂತ್ರಣ ಸಮಿತಿ
- ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಬರಬೇಕು
- ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ
- ಆಕ್ಷೇಪಣೆಗಳು, ತಜ್ಞರ ಅಭಿಪ್ರಾಯ ಪರಿಗಣಿಸಿಯೇ ಒಪ್ಪಿಗೆ
- CWC ಅನುಮೋದಿಸಿದಾಗ ಪ್ರಶ್ನೆ ಮಾಡಲು ತಮಿಳುನಾಡು ಸ್ವತಂತ್ರ
ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ ಎಂದ ಡಿಸಿಎಂ ಡಿಕೆಶಿ
ಮೇಕೆದಾಟು ಯೋಜನೆಗಾಗಿ ಈಗಿನ ಡಿಸಿಎಂ ಡಿಕೆಶಿ, ನಮ್ಮ ನೀರು ನಮ್ಮ ಹಕ್ಕು ಎಂದು ಈ ಹಿಂದೆಯೇ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ, ಜನರ ಮನಗೆದ್ದಿದ್ರು. ಸದ್ಯ ಸುಪ್ರೀಂಕೋರ್ಟ್​​ನಲ್ಲಿ ರಾಜ್ಯದ ಮೇಕೆದಾಟು ಯೋಜನೆಗೆ ಗೆಲವು ಸಿಕ್ಕಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆಶಿ.. ಮೇಕೆದಾಟು ಕರ್ನಾಟಕದ ನ್ಯಾಯಯುತ ಯೋಜನೆ. ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ. ಕಾವೇರಿ ನದಿ ಹಳೆಮೈಸೂರು ಭಾಗದ ಜೀವನಾಡಿ ಒಂದೆಡೆಯಾದ್ರೆ.. ರಾಜಕೀಯ ಪಕ್ಷಗಳಿಗೆ ಕಾವೇರಿ ರಾಜಕೀಯ ಅಸ್ತ್ರ ಅನ್ನೋದ್ರರಲ್ಲಿ ಎರಡು ಮಾತಿಲ್ಲ. ಅದೇನೆ ಇರಲಿ.. ಸದ್ಯ ಮೇಕೆದಾಟು ಯೋಜನೆಗೆ ಎದುರಾಗಿದ್ದ ಆರಂಭಿಕ ಸವಾಲಿನಲ್ಲಿ ರಾಜ್ಯಕ್ಕೆ ಮುನ್ನಡೆಯಾಗಿದ್ದು, ಕೇಂದ್ರ ಜಲ ಆಯೋಗದಿಂದ ಡಿಪಿಆರ್​​ಗೆ ಅನುಮೋದನೆ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಹೈಕೋರ್ಟ್​ ಅಸ್ತು.. ಷರತ್ತುಬದ್ಧ ಅನುಮತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us