/newsfirstlive-kannada/media/media_files/2025/09/17/vijayapura-bank-2025-09-17-07-18-37.jpg)
ಸೇಫ್ ಆಗಿರಲಿ ಅಂತ ಜನ ಬ್ಯಾಂಕ್‌ನಲ್ಲಿ ಹಣ ಇಡ್ತಾರೆ. ಆದ್ರೆ ಇತ್ತೀಚೆಗೆ ನಡೀತಿರೋ ಕಳ್ಳತನಗಳನ್ನ ನೋಡ್ತಿದ್ರೆ ಬ್ಯಾಂಕ್‌ನಲ್ಲಿ ಜನರ ಹಣಕ್ಕೆ ಸೆಕ್ಯೂರಿಟಿ ಇಲ್ಲ ಅನ್ನೋ ವಿಚಾರ ಆತಂಕಕ್ಕೀಡು ಮಾಡುವಂತೆ ಮಾಡಿದೆ. ವಿಜಯಪುರದಲ್ಲಿ ಇತ್ತೀಚೆಗಷ್ಟೆ ನಡೆದ ಬ್ಯಾಂಕ್ ದರೋಡೆ ಮಾಸುವ ಮುನ್ನವೇ ಮತ್ತೊಂದು ಬೃಹತ್ ದರೋಡೆ ಬೆಚ್ಚಿ ಬೀಳಿಸಿದೆ. ಮನಿಹಿಸ್ಟ್ ಮಾದರಿ ಪಕ್ಕಾ ಪ್ಲಾನ್ ಮಾಡಿ ಕರಾಮತ್ತು ಮಾಡಿದ್ದಾರೆ.
ಕಳೆದ ಮೇ ತಿಂಗಳ ವಿಜಯಪುರದ ಮನಗೂಳಿಯ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ದರೋಡೆ ನಡೆದಿದೆ. ಅಂದು ಕೆನರಾ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದರೆ ಈಗ ಕಳ್ಳರು ಎಸ್‌ಬಿಐ ಬ್ಯಾಂಕ್‌ಗೆ ನುಗ್ಗಿದ್ದಾರೆ.
ಇದನ್ನೂ ಓದಿ:2009ರಲ್ಲಿ ತೀರ್ಥಯಾತ್ರೆ.. ನಾಪತ್ತೆ ಆಗಿದ್ದ ತಂದೆನ ಹುಡುಕಿಕೊಟ್ಟ ಸೋಷಿಯಲ್ ಮೀಡಿಯಾ.. ಹೇಗೆ?
ಸಿನಿಮೀಯ ರೀತಿ ನುಗ್ಗಿ ಹಣ ಕದ್ದೊಯ್ದ ಖದೀಮರು
ಥೇಟ್ ಸಿನಿಮಾ ರೀತಿಯಲ್ಲಿ ಬ್ಯಾಂಕ್‌ಗೆ ನುಗ್ಗಿ ಖದೀಮರು ಬೃಹತ್ ಮೊತ್ತದ ಹಣ ಹಾಗೂ ಚಿನ್ನವನ್ನು ದರೋಡೆ ಮಾಡಿದ್ದಾರೆ. ವಿಜಯಪುರದ ಚಡಚಣ ಪಟ್ಟಣದ ಪಂಧರಪುರ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ದರೋಡೆಕೋರರು ಕೈಚಳಕ ಪ್ರದರ್ಶಿಸಿದ್ದಾರೆ.
ಸಿಬ್ಬಂದಿ ಕೈ-ಕಾಲು ಕಟ್ಟಿ ಬ್ಯಾಂಕ್ ದರೋಡೆ!
- ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಸಿನಿಮೀಯ ರೀತಿ ಕನ್ನ
- ಸಂಜೆ 6:30ರ ಹೊತ್ತಿಗೆ ಬ್ಯಾಂಕ್‌ಗೆ ಎಂಟ್ರಿ ಕೊಟ್ಟಿದ್ದ ಮುಸುಕುಧಾರಿಗಳು
- ಮಿಲಿಟರಿ ಮಾದರಿಯ ಸಮವಸ್ತ್ರ ಧರಿಸಿದ್ದ ದರೋಡೆಕೋರರ ಗ್ಯಾಂಗ್
- ಬ್ಯಾಂಕ್‌ಗೆ ಎಂಟ್ರಿ ಕೊಟ್ಟಿದ್ದ ಗ್ಯಾಂಗ್ ಬಳಿ ಪಿಸ್ತೂಲು, ಮಾರಕಾಸ್ತ್ರಗಳು
- ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿ ಕೈಕಾಲು ಕಟ್ಟಿ ಬ್ಯಾಂಕ್‌ಗೆ ಕನ್ನ
- ಬಂದೂಕು ಮಾರಕಾಸ್ತ್ರಗಳನ್ನ ತೋರಿಸಿ ದರೋಡೆ ಮಾಡಿರುವ ಗ್ಯಾಂಗ್
- ನಗದು, ಚಿನ್ನಾಭರಣದ ಲಗೇಜ್ ಹೇರಿಕೊಂಡು ಮಹಾರಾಷ್ಟ್ರದತ್ತ ಪರಾರಿ
ಬ್ಯಾಂಕ್ ನಲ್ಲಿದ್ದ ನಗದು ಚಿನ್ನಾಭರಣ ದೋಚಿ ಪರಾರಿಯಾದ ದರೋಡೆಕೋರರ ಗ್ಯಾಂಗ್, ಎಷ್ಟು ಹಣ, ಚಿನ್ನಾಭರಣಗಳನ್ನು ಎಗರಿಸಿದ್ದಾರೆ ಎಂಬ ಬಗ್ಗೆ ತನಿಖೆಯಾಗುತ್ತಿದೆ. ಒಂದು ಮಾಹಿತಿ ಪ್ರಕಾರ, 1 ಕೋಟಿ ನಗದು, 12 ರಿಂದ 13 ಕೆಜಿ ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. KA 24 DH 2456 ನಂಬರಿನ ಕಾರಿನಲ್ಲಿ ಬಂದಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು ಕಾರಿನ ಫೋಟೋ ಕೂಡ ಸಿಕ್ಕಿದೆ. ಅಲ್ಲದೇ ಖದೀಮರು ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದು ಇದು ಪಕ್ಕಾ ಪ್ಲಾನ್ ಅನ್ನೋದನ್ನ ಸಾಬೀತುಪಡಿಸ್ತಿದೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ಚಡಚಣ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:300ಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಆರಂಭದಲ್ಲೇ 35,400 ರೂಪಾಯಿ ಸಂಬಳ
ಒಟ್ಟಾರೆ ಅದ್ಯಾಕೋ ಏನೋ ವಿಜಯಪುರದಲ್ಲಿ ಮೇಲಿಂದ ಮೇಲೆ ಬ್ಯಾಂಕ್ ದರೋಡೆಗಳು ಹೆಚ್ಚಾಗ್ತಿವೆ. ಮೇಲಿನ ನೋಟಕ್ಕೆ ಮಹಾರಾಷ್ಟ್ರ ಗ್ಯಾಂಗೇ ಈ ಕೃತ್ಯವೆಸಗಿದಂತೆ ಕಾಣ್ತಿದೆ. ಪೊಲೀಸರು ಆದಷ್ಟು ಬೇಗ ಈ ದರೋಡೆಕೋರರನ್ನು ಹೆಡೆಮುರಿಕಟ್ಟಿ ಇತರರಿಗೆ ಕಠಿಣ ಸಂದೇಶ ರವಾನಿಸಬೇಕಿದೆ.
ಇದನ್ನೂ ಓದಿ:ಕೃಷ್ಣಾ ಮೇಲ್ದಂಡೆ ಯೋಜನೆ; ಮುಳುಗಡೆ ಜಮೀನಿಗೆ 40 ಲಕ್ಷ, ಒಣಭೂಮಿಗೆ 30 ಲಕ್ಷ ರೂಪಾಯಿ ಪರಿಹಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ